ಒಡಿಶಾದ ಬಾಲಾಸೋರ್ನಲ್ಲಿ ಶುಕ್ರವಾರ ರಾತ್ರಿ ನಡೆದ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳು ಮತ್ತು ಗಾಯಗೊಂಡಿರುವವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಹಾರ ಘೋಷಿಸಿವೆ. ಆದರೆ, ಈ ತಾತ್ಕಾಲಿಕ ಪರಿಹಾರದಿಂದ ಬರುವ ಹಣ ಮೂರ್ನಾಲ್ಕು ತಿಂಗಳಿಗೆ ಖಾಲಿಯಾಗುತ್ತದೆ. ಸಂತ್ರಸ್ತ ಕುಟುಂಬಗಳು ಕೆಲವೇ ದಿನಗಳಲ್ಲಿ ಮತ್ತೆ ಅಸಹಾಯಕ ಸ್ಥಿತಿಯನ್ನು ತಲುಪುತ್ತವೆ. ಹೀಗಾಗಿ ಶಾಶ್ವತ ಪರಿಹಾರ ನೀಡುವ ಬಗ್ಗೆ ಸರ್ಕಾರಗಳು ಚಿಂತನೆ ನಡೆಸಬೇಕು ಎಂದು ನಟ, ಸಮಾಜ ಸೇವಕ ಸೋನು ಸೂದ್ ಅಭಿಪ್ರಾಯ ಪಟ್ಟಿದ್ದಾರೆ.
ರೈಲು ದುರಂತದ ಕುರಿತು ತಾವು ಮಾತನಾಡಿರುವ ಮೂರು ನಿಮಿಷಗಳ ವಿಡಿಯೋವನ್ನು ಸೋನು ಸೂದ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. “ಒಡಿಶಾದಲ್ಲಿ ಸಂಭವಿಸಿರುವ ರೈಲು ಅಪಘಾದಿಂದಾಗಿ ಇಡೀ ದೇಶದ ತುಂಬಾ ದುಖಃದ ಛಾಯೆ ಆವರಿಸಿದೆ. ಆದರೆ, ಯಾರು ಕೂಡ ಅಪಘಾತದಲ್ಲಿ ಮೃತಪಟ್ಟ ಅಥವಾ ಗಾಯಗೊಂಡ ವ್ಯಕ್ತಿಗಳು ಮತ್ತವರ ಕುಟುಂಬದವರ ಬಗ್ಗೆ ಯೋಚಿಸುತ್ತಿಲ್ಲ. ಎಲ್ಲ ರಾಜಕೀಯ ಪಕ್ಷಗಳು ಈ ಘಟನೆಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿವೆ. ನಾವುಗಳು ಟ್ವೀಟ್ ಮಾಡಿ ದುಖಃ ವ್ಯಕ್ತಪಡಿಸಿ, ನಮ್ಮ ವೈಯಕ್ತಿಕ ಬದುಕಿನಲ್ಲಿ ಬ್ಯುಸಿಯಾಗಿ ಬಿಡುತ್ತೇವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಈ ಅಪಘಾತದಲ್ಲಿ ದುಡಿಮೆ ಮಾಡುವ ಸಲುವಾಗಿ ಚೆನ್ನೈಗೆ ಹೊರಟಿದ್ದ ಕೆಲ ಬಿಹಾರದ ಕೂಲಿ ಕಾರ್ಮಿಕರು, ಕೆಲ ಕುಟುಂಬಗಳು ಹೀಗೆ ಹಲವರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ಪರಿಹಾರ ಸಿಗತ್ತದೆ. ಆ ಪರಿಹಾರ ಮೂರ್ನಾಲ್ಕು ತಿಂಗಳುಗಳಿಗೆ ಖಾಲಿಯಾಗುತ್ತದೆ. ಮನೆಗೆ ಆಧಾರವಾಗಿದ್ದ ವ್ಯಕ್ತಿ ಶಾಶ್ವತವಾಗಿ ಗಾಯಗೊಂಡು ಹಾಸಿಗೆ ಹಿಡಿದರೆ ಅಂತಹ ಕುಟುಂಬಗಳು ಯಾವತ್ತಿಗೂ ಸುಧಾರಿಸಲು ಸಾಧ್ಯವೇ ಇಲ್ಲ. ಅಂತಹ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರ ಸಾಕಾಗುವುದಿಲ್ಲ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಾಶ್ವತ ಪರಿಹಾರ ನೀತಿಗಳನ್ನು ರೂಪಿಸಬೇಕು. ಈ ರೀತಿಯ ದುರಂತಗಳಿಗೆ ಬಲಿಯಾದ ವ್ಯಕ್ತಿ ಅಥವಾ ಕುಟುಂಬಗಳಿಗೆ ನೆರವಾಗಲು ಪಿಂಚಣಿಯ ಮಾದರಿಯಲ್ಲಿ ಮಾಸಿಕ ಪರಿಹಾರವನ್ನು ನೀಡುವಂತಾಗಬೇಕು” ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
“ರಾಜಕೀಯ ಪಕ್ಷದವರು ಒಬ್ಬರನ್ನೊಬರು ದೂಷಿಸುವುದನ್ನು ಬಿಟ್ಟು ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿ ಸುಮ್ಮನಾದರೆ ಸಾಲದು, ದುರಂತಕ್ಕೀಡಾದ ಎಲ್ಲ ಕುಟುಂಬಗಳಿಗೆ ನೆರವಾಗಲು ಜನರು ಒಟ್ಟಾಗಿ ಪರಿಹಾರ ನಿಧಿಯನ್ನು ಸಂಗ್ರಹಿಸೋಣ” ಎಂದು ಕರೆ ನೀಡಿದ್ದಾರೆ.