ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ಅಭಿಮಾನಿ ಬಳಗವನ್ನು ಕಟ್ಟಿಕೊಂಡ ನಟ ಸೋನು ಸೂದ್, ಇತ್ತೀಚೆಗೆ ತನಗೆ ಮುಖ್ಯಮಂತ್ರಿ ಆಫರ್ ಬಂದಿತ್ತು ಎಂದು ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಮತ್ತು ರಾಜ್ಯಸಭೆಯ ಸ್ಥಾನದಂತಹ ಹುದ್ದೆಗಳನ್ನು ಕೂಡಾ ನೀಡಲಾಗಿತ್ತು, ಆದರೆ ಎಲ್ಲವನ್ನೂ ನಿರಾಕರಿಸಿದೆ ಎಂದು ಸೋನು ಸೂದ್ ತಿಳಿಸಿದ್ದಾರೆ.
“ನನಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಲಾಯಿತು, ನಾನು ನಿರಾಕರಿಸಿದಾಗ ಅವರು ನನಗೆ ಉಪಮುಖ್ಯಮಂತ್ರಿಯಾಗಲು ಹೇಳಿದರು. ಅವರು ನನಗೆ ರಾಜ್ಯಸಭೆಯ ಸ್ಥಾನವನ್ನು ನೀಡಿದರು, ಆದರೆ ನಾನು ರಾಜಕೀಯದಲ್ಲಿ ಯಾವುದಕ್ಕೂ ಹೋರಾಡುವ ಅಗತ್ಯವಿಲ್ಲ ಎಂದರು” ಎಂದು ಸೂದ್ ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಇದನ್ನು ಓದಿದ್ದೀರಾ? ಒಡಿಶಾ ರೈಲು ದುರಂತ | ಸಂತ್ರಸ್ತರ ನೆರವಿಗೆ ಸಹಾಯವಾಣಿ ತೆರೆದ ಸೋನು ಸೂದ್
“ಪ್ರಬಲ ವ್ಯಕ್ತಿಗಳು ಜಗತ್ತಿನಲ್ಲಿ ಬದಲಾವಣೆ ತರಲು ನಮ್ಮನ್ನು ಪ್ರೋತ್ಸಾಹಿಸಲು ಮುಂದಾದಾಗ ಆ ಕ್ಷಣ ರೋಮಾಂಚಕಾರಿ ಎನಿಸಿದೆ. ಆದರೆ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ನಾನು ಬಯಸಲ್ಲ. ಆದ್ದರಿಂದ ರಾಜಕೀಯದಿಂದ ಹೊರಗುಳಿಯಲು ಬಯಸುತ್ತೇನೆ” ಎಂದು ಮಾಹಿತಿ ನೀಡಿದರು.
“ಜನರು ಎರಡು ಕಾರಣಗಳಿಗಾಗಿ ರಾಜಕೀಯಕ್ಕೆ ಸೇರುತ್ತಾರೆ. ಒಂದು ಹಣ ಸಂಪಾದಿಸಲು ಅಥವಾ ಎರಡನೆಯದಾಗಿ ಅಧಿಕಾರವನ್ನು ಗಳಿಸಲು. ನನಗೆ ಇವೆರಡರಲ್ಲೂ ಆಸಕ್ತಿ ಇಲ್ಲ. ಜನರಿಗೆ ಸಹಾಯ ಮಾಡುವ ಕಾರ್ಯವನ್ನು ನಾನು ಈಗಾಗಲೇ ಮಾಡುತ್ತಿದ್ದೇನೆ. ನಾನು ಸಹಾಯ ಮಾಡುವ ಹಕ್ಕನ್ನು ಬೇರೆಯವರಿಂದ ಪಡೆಯಬೇಕಾಗಿಲ್ಲ. ನಾನು ಸ್ವಂತವಾಗಿ ಸಹಾಯ ಮಾಡಲು ಬಯಸುತ್ತೇನೆ” ಎಂದರು.
ಇದನ್ನು ಓದಿದ್ದೀರಾ? ಒಡಿಶಾ ರೈಲು ದುರಂತ : ಸಂತ್ರಸ್ತರಿಗೆ ಶಾಶ್ವತ ಪರಿಹಾರಕ್ಕೆ ಬೇಡಿಕೆ ಇಟ್ಟ ಸೋನು ಸೂದ್
“ಒಬ್ಬರು ಜನಪ್ರಿಯತೆಯನ್ನು ಗಳಿಸಲು ಪ್ರಾರಂಭಿಸಿದಾಗ ಅವರು ಜೀವನದಲ್ಲಿ ಮೇಲೆ ಏರಲು ಪ್ರಾರಂಭಿಸುತ್ತಾರೆ. ಆದರೆ ಎತ್ತರ ಹೆಚ್ಚಾದಂತೆ ಆಮ್ಲಜನಕವೂ ಕಡಿಮೆಯಾಗುತ್ತದೆ. ನಾನು ಮೇಲೆ ಏರಿದರೆ ಅಲ್ಲಿ ಎಷ್ಟು ಕಾಲ ಉಳಿಯಲು ಸಾಧ್ಯ ಎಂಬುದು ಮುಖ್ಯ” ಎಂದು ವಿವರಿಸಿದರು.
ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ಅವರು 2022 ರಲ್ಲಿ ಕಾಂಗ್ರೆಸ್ ಸೇರಿದರು. ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಮೊಗಾ ಕ್ಷೇತ್ರದಲ್ಲಿ ಸ್ಪರ್ಧಿಸಿದರು. ಆದರೆ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಅಮನದೀಪ್ ಕೌರ್ ಅರೋರಾ ಎದುರು ಪರಾಭವಗೊಂಡರು.
