ಜೆ.ಪಿ ನಡ್ಡಾ ಜೊತೆಗೆ ಹುಬ್ಬಳ್ಳಿಯಿಂದ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಸುದೀಪ್
ಕೆಲವೇ ಹೊತ್ತಿನಲ್ಲಿ ನಾಮಪತ್ರ ಸಲ್ಲಿಸಲಿರುವ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ತಮ್ಮ ಸ್ವಕ್ಷೇತ್ರ ಶಿಗ್ಗಾವಿಯಲ್ಲಿ ನಾಮ ಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆ ಅವರ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ನಟ ಕಿಚ್ಚ ಸುದೀಪ್ ಹೆಲಿಕಾಪ್ಟರ್ ಮೂಲಕ ಶಿಗ್ಗಾವಿಗೆ ಬಂದಿಳಿದಿದ್ದು, ಬೊಮ್ಮಾಯಿ ಅವರ ರೋಡ್ ಶೋನಲ್ಲಿ ಪಾಲ್ಗೊಂಡಿದ್ದಾರೆ.
ಬುಧವಾರ ಬೆಳಗ್ಗೆ ಖಾಸಗಿ ವಿಮಾನದಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿಳಿದ ಸುದೀಪ್, ನಂತರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆಗೆ ಹುಬ್ಬಳ್ಳಿಯಿಂದ ಶಿಗ್ಗಾವಿಗೆ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದಾರೆ. ನಡ್ಡಾ ಮತ್ತು ಬೊಮ್ಮಾಯಿ ಅವರ ಜೊತೆಗಿನ ಸೆಲ್ಫೀ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು, “ಶ್ರೀ ಕನಕದಾಸರು ಮತ್ತು ಶ್ರೀ ಸಂತ ಶಿಶುನಾಳರು ಹುಟ್ಟಿದ ಶಿಗ್ಗಾವಿ ತಾಲೂಕಿನಿಂದಲೇ ಪ್ರಚಾರ ಶುರು ಮಾಡುತ್ತಿರುವುದು ನಿಜಕ್ಕೂ ಹೆಮ್ಮ ಮತ್ತು ಸಂತೋಷದ ಸಂಗತಿ” ಎಂದು ಬರೆದುಕೊಂಡಿದ್ದಾರೆ.
ಈಗಾಗಲೇ ಶಿಗ್ಗಾವಿ ಪಟ್ಟಣದ ಚೆನ್ನಮ್ಮ ವೃತ್ತದಿಂದ ತಹಶೀಲ್ದಾರ್ ಕಚೇರಿ ವರೆಗೆ ಬಸವರಾಜ ಬೊಮ್ಮಾಯಿ ಅವರ ರೋಡ್ ಶೋ ಆರಂಭಗೊಂಡಿದ್ದು, ಜೆ.ಪಿ ನಡ್ಡಾ, ನಳಿನ್ ಕುಮಾರ್ ಕಟೀಲ್, ಸುದೀಪ್ ಮುಂತಾದವರು ಪಾಲ್ಗೊಂಡಿದ್ದಾರೆ. ಹಲವಾರು ಬಿಜೆಪಿಯ ಕಾರ್ಯಕರ್ತರು ಕೂಡ ಈ ರೋಡ್ ಶೋನಲ್ಲಿ ಭಾಗಿಯಾಗಿದ್ದು, ಕೆಲವೇ ಹೊತ್ತಿನಲ್ಲಿ ಬಸವರಾಜ ಬೊಮ್ಮಾಯಿ ತಮ್ಮ ಪಕ್ಷದ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.