ಬುಧವಾರ (ಜ.22ರಂದು) ಘೋಷಿಸಲಾಗಿದ್ದ 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪೈಕಿ ‘ಅತ್ಯುತ್ತಮ ನಟ’ ರಾಜ್ಯ ಪ್ರಶಸ್ತಿಯನ್ನು ಕಿಚ್ಚ ಸುದೀಪ್ ಅವರು ನಿರಾಕರಿಸಿದ್ದಾರೆ. ‘ಪೈಲ್ವಾನ್’ ಸಿನಿಮಾದಲ್ಲಿ ಸುದೀಪ್ ನಟನೆಗಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿ ಘೋಷಿಸಲಾಗಿತ್ತು. ಆದರೆ ಈ ಪ್ರಶಸ್ತಿಯನ್ನು ನಟ ನಿರಾಕರಿಸಿದ್ದಾರೆ.
ಈ ಬಗ್ಗೆ ನಟ ಸುದೀಪ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಗೌರವಾನ್ವಿತ ಕರ್ನಾಟಕ ಸರ್ಕಾರ ಮತ್ತು ತೀರ್ಪುಗಾರರ ಸದಸ್ಯರೇ, ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಒಂದು ಸೌಭಾಗ್ಯ ಮತ್ತು ಈ ಗೌರವ ಸಲ್ಲಿಸಿದ ಗೌರವಾನ್ವಿತ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಆದರೆ ನಾನು ಹಲವು ವರ್ಷಗಳಿಂದ ಪ್ರಶಸ್ತಿಗಳನ್ನು ಪಡೆಯುವುದನ್ನು ನಿಲ್ಲಿಸಿದ್ದೇನೆ ಎಂಬುದನ್ನು ನಾನು ತಿಳಿಸಲೇಬೇಕು” ಎಂದು ಬರೆದಿದ್ದಾರೆ.
ಇದನ್ನು ಓದಿದ್ದೀರಾ? 2019ನೇ ಸಾಲಿನ ರಾಜ್ಯ ಪ್ರಶಸ್ತಿ | ಕಿಚ್ಚ ಸುದೀಪ್ & ಅನುಪಮಾ ಗೌಡಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ
“ನಾನು ವಿವಿಧ ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ತಮ್ಮ ಹೃದಯಾಂತರಾಳದಿಂದ ಕಲೆಗೆ ಗಮನಕೊಟ್ಟಿರುವ ಅನೇಕ ಅರ್ಹ ನಟರಿದ್ದಾರೆ. ನಾನು ಮಾಡುವುದಕ್ಕಿಂತ ಅಧಿಕ ಪ್ರತಿಷ್ಠಿತ ಕಾರ್ಯಗಳನ್ನು ಅವರು ಮಾಡಿದ್ದಾರೆ. ಆ ಪೈಕಿ ಒಬ್ಬರು ಈ ಪ್ರಶಸ್ತಿಯನ್ನು ಸ್ವೀಕರಿಸುವುದನ್ನು ನೋಡುವುದು ನನಗೆ ಸಂತೋಷ ನೀಡುತ್ತದೆ” ಎಂದು ಸುದೀಪ್ ತಿಳಿಸಿದ್ದಾರೆ.
Respected Government of Karnataka and Members of the Jury,
— Kichcha Sudeepa (@KicchaSudeep) January 23, 2025
It is truly a privilege to have received the state award under the best actor category, and I extend my heartfelt thanks to the respected jury for this honor. However, I must express that I have chosen to stop receiving…
“ಜನರನ್ನು ರಂಜಿಸುವ ನನ್ನ ಸಮರ್ಪಣೆಯು ಎಂದಿಗೂ ಪ್ರಶಸ್ತಿಗಳ ನಿರೀಕ್ಷೆಯಿಲ್ಲದೆ ಹಾಗೆಯೇ ಇರುತ್ತದೆ. ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ತೀರ್ಪುಗಾರರ ನಿರ್ಧಾರವು ನನಗೆ ಇನ್ನಷ್ಟು ಉತ್ತೇಜನವನ್ನು ನೀಡುತ್ತದೆ” ಎಂದು ಹೇಳಿದ್ದಾರೆ.
“ಈ ಪ್ರಶಸ್ತಿಯು ನನ್ನ ಸ್ವತಃ ಕಾರ್ಯದ ಪ್ರತಿಫಲವಾಗಿರುವುದರಿಂದ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಪ್ರತಿಯೊಬ್ಬ ತೀರ್ಪುಗಾರ ಸದಸ್ಯರಿಗೂ ನಾನು ಕೃತಜ್ಞನಾಗಿದ್ದೇನೆ” ಎಂದಿರುವ ಕಿಚ್ಚ ಹಾಗೆಯೇ ಪ್ರಶಸ್ತಿ ನಿರಾಕರಿಸುವ ತನ್ನ ನಿರ್ಧಾರವು ಉಂಟುಮಾಡಬಹುದಾದ ಯಾವುದೇ ನಿರಾಶೆಗಾಗಿ ತಾನು ತೀರ್ಪುಗಾರ ಸದಸ್ಯರು ಮತ್ತು ರಾಜ್ಯ ಸರ್ಕಾರಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ವಂಚನೆ ಆರೋಪ | ನಿರ್ಮಾಪಕ ಕುಮಾರ್ ವಿರುದ್ಧ ಕಿಚ್ಚ ಸುದೀಪ್ ಮಾನನಷ್ಟ ಮೊಕದ್ದಮೆ
“ನೀವು ನನ್ನ ಆಯ್ಕೆಯನ್ನು ಗೌರವಿಸುತ್ತೀರಿ ಮತ್ತು ನನ್ನನ್ನು ಬೆಂಬಲಿಸುತ್ತೀರಿ ಎಂದು ನಂಬುತ್ತೇನೆ. ಮತ್ತೊಮ್ಮೆ ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ತೀರ್ಪುಗಾರ ಸದಸ್ಯರು ಮತ್ತು ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಎಕ್ಸ್‌ನಲ್ಲಿ ಸುದೀಪ್ ಪೋಸ್ಟ್ ಮಾಡಿದ್ದಾರೆ.
ನಿನ್ನೆ 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಅತ್ಯುತ್ತಮ ನಟಿ ಪ್ರಶಸ್ತಿಗೆ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಗೌಡ ಮತ್ತು ಅತ್ಯುತ್ತಮ ನಟ ಪ್ರಶಸ್ತಿಗೆ ಕಿಚ್ಚ ಸುದೀಪ್ ಪಾತ್ರರಾಗಿದ್ದಾರೆ. ಆದರೆ ಈ ಪೈಕಿ ಸುದೀಪ್ ಇಂದು ಪ್ರಶಸ್ತಿ ನಿರಾಕರಿಸಿದ್ದಾರೆ.
‘ಪೈಲ್ವಾನ್’ ಚಿತ್ರದ ಅಭಿನಯಕ್ಕಾಗಿ ಸುದೀಪ್ ಅವರಿಗೆ ಅತ್ಯುತ್ತಮ ನಟ ಮತ್ತು ದಯಾಳ್ ಪದ್ಮನಾಭನ್ ನಿರ್ದೇಶನದ ‘ತ್ರಯಂಬಕಂ’ ಚಿತ್ರದ ನಟನೆಗಾಗಿ ಅನುಪಮಾ ಗೌಡ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಘೋಷಿಸಲಾಗಿತ್ತು. ಇನ್ನೂ ಐದು ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಣೆ ಬಾಕಿಯಿದೆ.
