ಸುದೀಪ್ ನಟನೆಯ ಮುಕುಂದ ಮುರಾರಿ ಸಿನಿಮಾ ನಿರ್ಮಿಸಿದ್ದ ಎಂಎನ್ ಕುಮಾರ್
ಮುತ್ತತ್ತಿ ಸತ್ಯರಾಜು ಸಿನಿಮಾ ಮಾಡುವುದಾಗಿ ಮುಂಗಡ ಪಡೆದು ವಂಚಿಸಿದ ಆರೋಪ
ನಟ ಸುದೀಪ್, ತಮ್ಮ ವಿರುದ್ಧ ವಂಚನೆ ಆರೋಪ ಮಾಡಿದ್ದ ಸ್ಯಾಂಡಲ್ವುಡ್ನ ಇಬ್ಬರು ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ನಿರ್ಮಾಪಕರಾದ ಎಂಎನ್ ಸುರೇಶ್ ಮತ್ತು ಕುಮಾರ್ ಅವರಿಗೆ ನೋಟೀಸ್ ನೀಡಿದ್ದಾರೆ.
ಚಲನಚಿತ್ರ ನಿರ್ಮಾಪಕರಾದ ಎಂಎನ್ ಸುರೇಶ್ ಮತ್ತು ಕುಮಾರ್ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ, “ನಟ ಕಿಚ್ಚ ಸುದೀಪ್ ತಮ್ಮ ಜೊತೆಗೆ ಸಿನಿಮಾ ಮಾಡುವುದಾಗಿ ಮುಂಗಡ ಪಡೆದುಕೊಂಡಿದ್ದರು. ಜೊತೆಗೆ ತಾವು ಮಧ್ಯಸ್ಥಿಕೆ ವಹಿಸಿ ಬೇರೊಬ್ಬ ವ್ಯಕ್ತಿಗೆ ಕೂಡ ಹಣ ಕೊಡಿಸಿದ್ದಾರೆ. ಇದಾಗಿ ವರ್ಷಗಳು ಕಳೆದರೂ ನಮ್ಮ ಸಿನಿಮಾದಲ್ಲಿ ನಟಿಸಲು ʼಡೇಟ್ಸ್ʼ ನೀಡುತ್ತಿಲ್ಲ, ಮುಂಗಡವನ್ನು ಕೂಡ ಹಿಂತಿರುಗಿಸುತ್ತಿಲ್ಲ, ನಮ್ಮಿಂದ ಪಡೆದ ಹಣದಲ್ಲೇ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮನೆಯನ್ನು ಖರೀದಿಸಿದ್ದಾರೆ” ಎಂದು ಸುದೀಪ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.
ವಂಚನೆಯ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದ ಸುದೀಪ್ ಇದೀಗ ತಮ್ಮ ವಕೀಲರ ಮೂಲಕ ನಿರ್ಮಾಪಕರಿಗೆ ನೋಟೀಸ್ ನೀಡಿದ್ದು, ತಮ್ಮ ಮೇಲೆ ಆಧಾರ ರಹಿತ ಮತ್ತು ಸುಳ್ಳು ಆಪಾಧನೆಗಳನ್ನು ಮಾಡಿದ್ದಕ್ಕಾಗಿ ಪತ್ರ ಕೈಸೇರಿದ ಮೂರು ದಿನಗಳ ಒಳಗಾಗಿ ಬಹಿರಂಗವಾಗಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಇಬ್ಬರೂ ನಿರ್ಮಾಪಕರಿಗೆ ತಾಕೀತು ಮಾಡಿದ್ದಾರೆ. ಇಲ್ಲವಾದರೆ 10 ಕೋಟಿ ರೂಪಾಯಿಗಳ ಮಾನಹಾನಿ ಮೊಕದ್ದಮೆ ಹೂಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜಪಾನ್ನಲ್ಲಿ ತೆರೆಗೆ ಸಜ್ಜಾದ ʼಕೆಜಿಎಫ್ʼ ಸರಣಿ
ಸುದೀಪ್ ಮೇಲೆ ವಂಚನೆ ಆರೋಪ ಮಾಡುತ್ತಿರುವವರಲ್ಲಿ ಒಬ್ಬರಾದ ಎಂಎನ್ ಕುಮಾರ್, ಈ ಹಿಂದೆ 2016ರಲ್ಲಿ ಉಪೇಂದ್ರ ಮತ್ತು ಸುದೀಪ್ ಮುಖ್ಯಭೂಮಿಕೆಯಲ್ಲಿ ತೆರೆಕಂಡಿದ್ದ ʼಮುಕುಂದ ಮುರಾರಿʼ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಈ ಚಿತ್ರಕ್ಕೆ ನಂದ ಕಿಶೋರ್ ಅವರ ನಿರ್ದೇಶನವಿತ್ತು. ಈ ಚಿತ್ರ ಯಶಸ್ಸು ಕಂಡ ಬಳಿಕ ಸುದೀಪ್ ಜೊತೆಗೆ ʼಮುತ್ತತ್ತಿ ಸತ್ಯರಾಜುʼ ಹೆಸರಿನ ಸಿನಿಮಾ ಮಾಡಲು ಎಂಎನ್ ಸುರೇಶ್ ಮತ್ತು ಕುಮಾರ್ ಮುಂಗಡ ನೀಡಿದ್ದರು ಎನ್ನಲಾಗುತ್ತಿದೆ.