ಖಾಸಗಿ ವಾಹಿನಿ ‘ಕಲರ್ಸ್ ಕನ್ನಡ’ದಲ್ಲಿ ಪ್ರಸಾರವಾಗುತ್ತಿರುವ ‘ಬಿಗ್‌ಬಾಸ್ 11’ ರಿಯಾಲಿಟಿ ಶೋನಲ್ಲಿ ಮಹಿಳೆಯರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ. ಮಹಿಳೆಯರ ಹಕ್ಕುಗಳನ್ನು ದಮನ ಮಾಡಿ, ಮಹಿಳಾ ಸ್ಪರ್ಧಿಗಳಿಗೆ ಸಾರ್ವಜನಿಕವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ವಕೀಲೆ ರಕ್ಷಿತಾ ಪಿ ಸಿಂಗ್ ಆರೋಪಿಸಿದ್ದಾರೆ. ಕರ್ನಾಟಕ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಕಳೆದ ಭಾನುವಾರದಿಂದ ‘ಬಿಗ್‌ಬಾಸ್ 11’ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ನಟ ಸುದೀಪ್ ಅವರು ಕಾರ್ಯಕ್ರಮದ ನಿರೂಪಣೆ ಮುಂದುವರೆಸಿದ್ದಾರೆ. ಬಿಗ್‌ಬಾಸ್ ಸೆಟ್‌ನಲ್ಲಿ ಸ್ವರ್ಗ ಮತ್ತು ನರಕ ಎಂದು ವಿಭಜಿಸಿ, ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಇದರಲ್ಲಿ, ನರಕವೆಂದು ವರ್ಗೀಕರಿಸಲಾದ ಭಾಗದಲ್ಲಿ ಸ್ಪರ್ಧಿಗಳನ್ನು ಕೈದಿಗಳಂತೆ ಇರಿಸಲಾಗಿದೆ. ಆದರೆ, ಭಾರತದ ನಾಗರಿಕರನ್ನು ಬಂಧನದಲ್ಲಿರಿಸುವ ಹಕ್ಕು ಖಾಸಗಿ ವ್ಯಕ್ತಿಗಳಿಗೆ ಇರುವುದಿಲ್ಲ. ಈ ಕಾನೂನನ್ನು ಬಿಗ್‌ಬಾಸ್ ತಂಡ ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ದೂರು ನೀಡಿರುವ ರಕ್ಷಿತಾ ಪಿ ಸಿಂಗ್, “ಬಿಗ್‌ಬಾಸ್-11 ಕಾರ್ಯಕ್ರಮದಲ್ಲಿ ಪುರುಷ ಮತ್ತು ಮಹಿಳೆಯರನ್ನು ಒಂದು ಜೈಲಿನ ರೂಪದಲ್ಲಿರುವ ಬಂದಿಖಾನೆಯಂತಹ ಕೊಠಡಿಯಲ್ಲಿ ನೂರಾರು ಕ್ಯಾಮರಗಳಲ್ಲಿ ರೆಕಾರ್ಡ್ ಆಗುವಂತೆ ಅಕ್ರಮಬಂಧನದಲ್ಲಿ ಇರಿಸಲಾಗಿದೆ. ಇವರಿಗೆ ಕೇವಲ ಗಂಜಿಯನ್ನು ಆಹಾರವಾಗಿ ನೀಡಲಾಗುತ್ತಿದೆ. ಹೀಗೆ, ಸಂವಿಧಾನ ಪ್ರಕಾರ ನಾಗರಿಕರಿಗೆ ಪೌಷ್ಟಿಕ ಆಹಾರವನ್ನು ಕೊಡದಿರುವುದು ಅಪರಾಧವಾಗುತ್ತದೆ. ಅದರಲ್ಲೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಮಲಗುವ ವ್ಯವಸ್ಥೆ ನೀಡದೆ ಹಿಂಸಿಸಲಾಗುತ್ತಿದೆ. ಅಲ್ಲದೆ, ದೈಹಿಕ ಬಾದೆ ತೀರಿಸಿಕೊಳ್ಳಲು ಮತ್ತೊಬ್ಬರ ಅನುಮತಿ ಮೇರೆಗೆ ಶೌಚಾಲಯ ಉಪಯೋಗಿಸಬೇಕಾದಂತಹ ಬಲವಂತಕ್ಕೆ ಒಳಪಡಿಸುವುದು ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ” ಎಂದು ವಿವರಿಸಿದ್ದಾರೆ.

“ಬಿಗ್‌ಬಾಸ್ 11ರ ಕಾರ್ಯಕ್ರಮದಲ್ಲಿ ಸ್ಪರ್ಧಿಗಳೊಂದಿಗೆ ಕಾನೂನು ಬದ್ಧವಾಗಿ ಒಪ್ಪಂದ ಮಾಡಿಕೊಂಡಿದ್ದು ಇಂತಹ ನಿರ್ಬಂಧಗಳನ್ನು ಹೇರುವುದು ಸಂವಿಧಾನಬಾಹಿರವಾಗಿದೆ. ಮಹಿಳೆಯರಿಗೆ ಸೂಕ್ತ ಸೌಲಭ್ಯಗಳನ್ನು ನೀಡದೆ ಆಹಾರ ನಿರಾಕರಿಸುವ ಮೂಲಕ ಅವರ ಹಕ್ಕುಗಳನ್ನು ದಮನ ಮಾಡುತ್ತಿರುವ ಬಿಗ್ ಬಾಸ್ 11ರ ಕಾರ್ಯಕ್ರಮ ನಿರ್ವಹಿಸುತ್ತಿರುವ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.