ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಕ್ರಮಕ್ಕೆ ಆಗ್ರಹ
ʼಬೇಟಿ ಬಚಾವೋʼ ಎಂದ ಬಹುಭಾಷಾ ನಟ ಪ್ರಕಾಶ್ ರಾಜ್
ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿರುವ ಕುಸ್ತಿ ಫೆಡರೇಷನ್ (ಡಬ್ಲ್ಯೂಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿ ಪಟುಗಳಿಗೆ ಸ್ವರಾ ಭಾಸ್ಕರ್, ಮಂಸೋರೆ, ಪ್ರಕಾಶ್ ರಾಜ್ ಸೇರಿದಂತೆ ಹಲವು ಸಿನಿಮಾ ತಾರೆಯರು ಬೆಂಬಲ ಸೂಚಿಸಿದ್ದಾರೆ.
ಪ್ರತಿಭಟನಾನಿರತ ಕುಸ್ತಿ ಪಟುಗಳಿಗೆ ತಾವು ಬೆಂಬಲ ಸೂಚಿಸಿ ತಾವು ಮಾತನಾಡಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸ್ವರಾ ಭಾಸ್ಕರ್, “ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಕುಸ್ತಿಪಟುಗಳು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ರಸ್ತೆಯಲ್ಲಿ ಪ್ರತಿಭಟನೆ ನಡೆಸುವಂಥ ಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ನಾಚಿಕೆಗೇಡು. ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಮೇಲೆ ಕ್ರಮಕೈಗೊಳ್ಳುವ ಬದಲು ಅವರನ್ನು ರಕ್ಷಿಸುವುದರಲ್ಲೇ ಮಗ್ನವಾಗಿದೆ. ಇದೇ ಪ್ರತಿಭಟನಾನಿರತ ಮಹಿಳಾ ಕುಸ್ತಿಪಟುಗಳು ಪದಕಗಳನ್ನು ಗೆದ್ದು ಬಂದಾಗ ಅವರನ್ನು ಅಭಿನಂದಿಸಲು, ಅವರ ಜೊತೆ ಫೋಟೋ ತೆಗಿಸಿಕೊಳ್ಳಲು ಓಡೋಡಿ ಬರುತ್ತಿದ್ದ ಆಡಳಿತರೂಢ ಪಕ್ಷದ ನಾಯಕರು ಈಗ ಅದೇ ಮಹಿಳಾ ಕ್ರೀಡಾಳುಗಳು ತಮ್ಮ ಮೇಲೆ ದೌರ್ಜನ್ಯ ನಡೆದಿದೆ ಎಂದು ರಸ್ತೆಗಿಳಿದು ಅಳಲು ತೋಡಿಕೊಳ್ಳುತ್ತಿದ್ದಾರೆ. ಆದರೆ, ಆ ನಾಯಕರು ಈಗ್ಯಾಕೆ ಹತ್ತಿರ ಸುಳಿಯುತ್ತಿಲ್ಲ. ಈ ದೇಶದಲ್ಲಿ ಜನಪ್ರಿಯತೆ ಗಳಿಸಿರುವ ಕ್ರೀಡಾಳುಗಳ ಪರಿಸ್ಥಿತಿಯೇ ಹೀಗಾದರೆ, ಸಮಾನ್ಯ ಮಹಿಳೆಯರ ಗತಿಯೇನು” ಎಂದು ಪ್ರಶ್ನಿಸಿದ್ದಾರೆ. ಪ್ರತಿಭಟನಾನಿರತರಿಗೆ ದೇಶವ್ಯಾಪಿಯಾಗಿ ಬೆಂಬಲ ಸೂಚಿಸುವಂತೆ ಕರೆ ನೀಡಿದ್ದಾರೆ.
ಕುಸ್ತಿಪಟುಗಳ ಪ್ರತಿಭಟನೆಯನ್ನು ಬೆಂಬಲಿಸಿ ಬಹುಭಾಷಾ ನಟ ಪ್ರಕಾಶ್ ರಾಜ್ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, “ಮನ್ ಕಿ ಬಾತ್ ಸಾಹೇಬರೇ ನಮ್ಮ ಈ ಕ್ರೀಡಾಪಟುಗಳ ಮಾನದ ಬಾತ್ ಬಗ್ಗೆ ಬಾಯಿ ಬಿಚ್ಚುವಿರಾ? ಇದೇ ಕ್ರೀಡಾಳುಗಳು ಗೆದ್ದಾಗ ಅವರ ಜೊತೆ ನೀವು ಸೆಲ್ಫೀ ತೆಗೆದುಕೊಂಡಿದ್ದಾಗಿದೆ. ಈಗ ಅವರಿಗೊಸ್ಕರ ಸ್ವಲ್ಪ ನಿಸ್ವಾರ್ಥಿಯಾಗಿ ವರ್ತಿಸಿ ಹೆಣ್ಣುಮಕ್ಕಳನ್ನು ರಕ್ಷಿಸಿ” ಎಂದಿದ್ದಾರೆ.
ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ವಿಜೇತ ಮಂಸೋರೆ ಕೂಡ ಮಹಿಳಾ ಕುಸ್ತಿಪಡುಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿದ್ದು, “ಕುಸ್ತಿಪಟುಗಳು ಮಾಡುತ್ತಿರುವ ಪ್ರತಿಭಟನೆ ದೇಶಕ್ಕೆ ಮಾಡುತ್ತಿರುವ ಅವಮಾನ ಎಂದಾದರೆ, ಕುಸ್ತಿಪಟುಗಳಿಗೆ ಆಗಿರುವ ದೌರ್ಜನ್ಯ ಇಡೀ ದೇಶದ ಮಹಿಳೆಯರಿಗೆ ಆಗಿರುವ ದೌರ್ಜನ್ಯ, ಅವಮಾನವಲ್ಲವೇ? ಮಹಿಳೆಯರು ದೇಶದ ಪ್ರಜೆಗಳಲ್ಲವೇ? ಅವರಿಗೆ ನ್ಯಾಯ ಕೊಡಿಸಬೇಕಾದ ಕರ್ತವ್ಯ ಇಲ್ಲಿನ ಸರ್ಕಾರದ ಹೊಣೆಯಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಕೇವಲ ಸಿನಿಮಾ ತಾರೆಯರು ಮಾತ್ರವಲ್ಲದೆ ಒಲಂಪಿಕ್ ಪದಕ ವಿಜೇತ ನೀಜರ್ ಚೋಪ್ರಾ, ಕ್ರಿಕೆಟ್ ದಿಗ್ಗಜ ಕಪಿಲ್ ದೇವ್, ಸಾನಿಯಾ ಮಿರ್ಜಾ, ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್ ಸೇರಿದಂತೆ ಹಲವು ಗಣ್ಯರು ಪ್ರತಿಭಟನಾನಿರತ ಕುಸ್ತಿಪಟುಗಳ ಪರ ಬೆಂಬಲ ಸೂಚಿಸಿದ್ದು, ಪ್ರಕರಣದ ತನಿಖೆಗೆ ಆಗ್ರಹಿಸಿದ್ದಾರೆ.
ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ 7 ಮಂದಿ ಮಹಿಳಾ ಕ್ರೀಡಾಪಟುಗಳು ಬ್ರಿಜ್ ಭೂಷಣ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ದೂರುದಾರರಲ್ಲಿ 16ನೇ ವಯಸ್ಸಿನ ಅಪ್ರಾಪ್ತ ಕುಸ್ತಿ ಪಟು ಕೂಡ ಇದ್ದಾರೆ. ಈ ಹಿನ್ನೆಲೆ ಬ್ರಿಜ್ ಭೂಷಣ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆಯೂ ಆಗ್ರಹಗಳು ಕೇಳಿಬಂದಿವೆ. ಭಾರತದ ಜನಪ್ರಿಯ ಕುಸ್ತಿ ಪಟುಗಳಾದ ಬಜರಂಗ್ ಪೂನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಹಲವು ಕುಸ್ತಿಪಟುಗಳು ಕಳೆದ 6 ದಿನಗಳಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.