ಪುಣೆಯಲ್ಲಿರುವ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ಅಧ್ಯಕ್ಷರಾಗಿ ಜನಪ್ರಿಯ ತಮಿಳು ನಟ ಆರ್ ಮಾಧವನ್ ನೇಮಕವಾಗಿದ್ದಾರೆ. ಈ ವಿಷಯವನ್ನು ಹಂಚಿಕೊಂಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ಮಾಧವನ್ ಅವರಿಗೆ ಶುಭಾಶಯ ಕೋರಿದ್ದಾರೆ.
ಪುಣೆಯ ಫಿಲಂ ಮತ್ತು ಟೆಲಿವಿಷನ್ ಇನ್ಸ್ಟಿಟ್ಯೂಟ್ ಭಾರತದಲ್ಲಿ ಸಿನಿಮಾ ಮತ್ತು ಕಿರುತೆರೆ ಅಧ್ಯಯನಕ್ಕೆ ಮೀಸಲಾದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯೆನಿಸಿದೆ. ಕನ್ನಡದ ಗಿರೀಶ್ ಕಾಸರವಳ್ಳಿ, ಮಲೆಯಾಳಂನ ಆಡೂರು ಗೋಪಾಲಕೃಷ್ಣನ್, ರಾಜ್ಕುಮಾರ್ ಹಿರಾನಿ ಸೇರಿದಂತೆ ಅನೇಕ ಪ್ರತಿಭಾವಂತ ನಿರ್ದೇಶಕರು, ನಾಸಿರುದ್ದೀನ್ ಶಾ, ಓಂಪುರಿ, ಶಬಾನಾ ಆಜ್ಮಿಯಂಥ ನಟ ನಟಿಯರನ್ನು ಕೊಟ್ಟ ಖ್ಯಾತಿಗೆ ಎಫ್ಟಿಐಐ ಒಳಗಾಗಿದೆ.
ಪ್ರಖ್ಯಾತ ನಿರ್ದೇಶಕ ಶೇಖರ್ ಕಪೂರ್ ಎಫ್ಟಿಐಐನ ಕೊನೆಯ ನಿರ್ದೇಶಕರಾಗಿದ್ದರು. ಮಾಧವನ್ ತಮಿಳು ನಟರಾದರೂ ಹಿಂದಿ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ ದೇಶದ ಸಿನಿಪ್ರಿಯರಿಗೆ ಪರಿಚಿತರಾಗಿದ್ದಾರೆ. ಅವರ ನಟನೆಯ ವಿಜ್ಞಾನಿ ನಂಬಿನಾರಾಯಣನ್ ಜೀವನ ಆಧರಿಸಿದ ರಾಕೆಟ್ರಿ-ದಿ ನಂಬಿ ಎಫೆಕ್ಟ್ ಸಿನಿಮಾ 69ನೇ ರಾಷ್ಟ್ರೀಯ ಪ್ರಶಸ್ತಿಗಳ ಪೈಕಿ ಅತ್ಯುತ್ತಮ ಚಲನಚಿತ್ರ ಎನ್ನುವ ಪ್ರಶಸ್ತಿ ಪಡೆದುಕೊಂಡಿದೆ.