ʼರೆಡ್ ಕಾರ್ಡ್ʼ ಸುದ್ದಿ ತಳ್ಳಿ ಹಾಕಿದ ನಿರ್ಮಾಪಕರ ಪರಿಷತ್ತಿನ ಅಧ್ಯಕ್ಷ ಮುರಳಿ
ಕಲಾವಿದರ ಸಂಘದ ಚುನಾವಣೆ ಹೊಸ್ತಿಲಲ್ಲೇ ಮುನ್ನೆಲೆಗೆ ಬಂದ ಅಸಹಕಾರ ಪ್ರಕರಣ
ಕಾಲಿವುಡ್‌ನ ಸ್ಟಾರ್ ನಟರಾದ ವಿಶಾಲ್, ಸಿಲಂಬರಸನ್ ಸೇರಿದಂತೆ 5 ಮಂದಿ ಖ್ಯಾತನಾಮರಿಗೆ ತಮಿಳುನಾಡು ಚಲನಚಿತ್ರ ನಿರ್ಮಾಪಕರ ಪರಿಷತ್ತು ʼರೆಡ್ ಕಾರ್ಡ್ʼ ನೀಡಲು ಚಿಂತನೆ ನಡೆಸಿದೆ ಎಂದು ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕರ ಪರಿಷತ್ತಿನ ಅಧ್ಯಕ್ಷ ತೆನೆಂದಾಲ್ ಮುರಳಿ ʼರೆಡ್ ಕಾರ್ಡ್ʼ ಜಾರಿಗೊಳಿಸುವ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.
ವಿಶಾಲ್, ಸಿಲಂಬರಸನ್, ಹಾಸ್ಯನಟ ಯೋಗಿಬಾಬು, ಖಳನಟ ಎಸ್.ಜೆ ಸೂರ್ಯ ಮತ್ತು ಪೋಷಕ ನಟ ಅಥರ್ವ್ ಈ ಐವರು ಕಲಾವಿದರು ಸಿನಿಮಾಗಳಲ್ಲಿ ನಟಿಸುವುದಾಗಿ ಒಪ್ಪಿ ಮುಂಗಡವನ್ನು ಪಡೆದು ನಂತರ ಶೂಟಿಂಗ್‌ಗಾಗಿ ಸಮಯ ನೀಡದೆ ಸತಾಯಿಸುತ್ತಿದ್ದಾರೆ ಎಂದು ಕೆಲವು ನಿರ್ಮಾಪಕರು ತಮಿಳುನಾಡಿನ ಚಲನಚಿತ್ರ ನಿರ್ಮಾಪಕರ ಪರಿಷತ್ತಿಗೆ ದೂರು ಸಲ್ಲಿಸಿದ್ದಾರೆ.
ನಿರ್ಮಾಪಕ ಈಶಾರಿ ಗಣೇಶ್, ನಟ ಸಿಲಂಬರಸನ್ ತಮ್ಮಿಂದ ಮುಂಗಡ ಪಡೆದು ಈಗ ಸಹಕರಿಸುತ್ತಿಲ್ಲ ಎಂದು ದೂರಿದ್ದಾರೆ. ಬಾಲು ಎಂಬ ನಿರ್ಮಾಪಕರು ವಿಶಾಲ್ ವಿರುದ್ಧ ಅಸಹಕಾರದ ಆರೋಪ ಮಾಡಿದ್ದು, ಜ್ಞಾನವೇಲ್ ರಾಜ ಎಂಬುವವರು ಎಸ್.ಜೆ ಸೂರ್ಯ ವಿರುದ್ಧ ಅಶಿಸ್ತಿನ ದೂರು ನೀಡಿದ್ದಾರೆ. ಮಧಿಯಳಗನ್ ಎಂಬುವವರು ಅಥರ್ವ್ ವಿರುದ್ಧ ದೂರು ಸಲ್ಲಿಸಿದ್ದು, ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಹಾಸ್ಯನಟ ಯೋಗಿಬಾಬು ವಿರುದ್ಧ ಸಮಯ ನೀಡದೆ ಸತಾಯಿಸಿದ್ದಾರೆಂದು ಹಲವು ನಿರ್ಮಾಪಕರು ಆರೋಪ ಮಾಡಿದ್ದಾರೆ.
ನಷ್ಟಕ್ಕೊಳಗಾಗಿರುವ ನಿರ್ಮಾಪಕರ ದೂರನ್ನು ಸ್ವೀಕರಿಸಿರುವ ಪರಿಷತ್ತಿನ ಅಧ್ಯಕ್ಷ ತೆನೆಂದಾಲ್ ಮುರಳಿ, “ಕಲಾವಿದರ ವಿರುದ್ಧ ʼರೆಡ್ ಕಾರ್ಡ್ʼನಂತಹ ಕಠಿಣ ಕ್ರಮವನ್ನು ಜಾರಿ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಈ ವಿಚಾರವನ್ನು ಕಲಾವಿದರ ಸಂಘದ ಅಧ್ಯಕ್ಷರಾದ ನಾಸರ್ ಅವರ ಗಮನಕ್ಕೂ ತಂದಿದ್ದೇವೆ. ಅವರೇ ಮಧ್ಯಸ್ಥಿಕೆ ವಹಿಸಿ ನಿರ್ಮಾಪಕರು ಮತ್ತು ಕಲಾವಿದರ ನಡುವೆ ಇರುವ ಗೊಂದಲವನ್ನು ಬಗೆಹರಿಸಬೇಕು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಆಪಾದಿತ ಕಲಾವಿದರನ್ನು ಬಹಿಷ್ಕರಿಸುವಂತೆ ನಿರ್ಮಾಪಕರಿಗೆ ಕರೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಬೆಂಬಲಿಸಿದ್ದ ಸುದೀಪ್‌ಗೆ ಸಚಿವ ಕೆ.ಎನ್ ರಾಜಣ್ಣ ಕಿವಿಮಾತು
ಇದೇ ಜೂನ್ 23ರಂದು ತಮಿಳುನಾಡಿನ ಕಲಾವಿದರ ಸಂಘದ ಚುನಾವಣೆ ನಡೆಯಲಿದೆ. ನಟ ವಿಶಾಲ್ ಅವರ ಬಣ ಮತ್ತು ನಿರ್ಮಾಪಕ ಈಶಾರಿ ಗಣೇಶ್ ಅವರ ಬಣ ಈ ಚುನಾವಣೆಯಲ್ಲಿ ಎದುರಾಗಿ ಸ್ಫರ್ಧಿಸುತ್ತಿವೆ. ಚುನಾವಣೆ ಹೊಸ್ತಿಲಲ್ಲೇ ಈ ರೀತಿ ಪರಸ್ಪರರ ಮೇಲೆ ಅಸಹಕಾರ ಮತ್ತು ಅಶಿಸ್ತಿನ ಆರೋಪಗಳು ಕೇಳಿಬಂದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.
ರೆಡ್ ಕಾರ್ಡ್ ಎಂದರೇನು?
ʼರೆಡ್ ಕಾರ್ಡ್ʼ ವಿಚಾರ ಸದ್ಯ ತಮಿಳು ಚಿತ್ರರಂಗದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಸಿನಿಮಾಗೆ ಸಂಬಂಧಿಸಿದ ಯಾವುದೇ ಕಲಾವಿದ ಅಥವಾ ತಂತ್ರಜ್ಞರುಗಳು ವೃತ್ತಿಧರ್ಮಕ್ಕೆ ವಿರುದ್ಧವಾಗಿ, ಅಶಿಸ್ತಿನಿಂದ ವರ್ತಿಸಿದಾಗ ಅಂತಹ ವ್ಯಕ್ತಿಗಳ ಮೇಲೆ ನಿರ್ಮಾಪಕರ ಪರಿಷತ್ತು ಅಥವಾ ಕಲಾವಿದರ ಸಂಘ ʼರೆಡ್ ಕಾರ್ಡ್ʼ ಜಾರಿ ಮಾಡಬಹುದು. ಒಂದು ವೇಳೆ ‘ರೆಡ್ ಕಾರ್ಡ್’ ಜಾರಿಯಾದರೆ ಆರೋಪಿತ ವ್ಯಕ್ತಿ ಚಿತ್ರರಂಗದ ಭಾಗವಾಗಿರುವ ಈ ಸಂಘ, ಸಂಸ್ಥೆಗಳು ಸೂಚಿಸಿದಷ್ಟು ದಿನಗಳ ಕಾಲ ನಟನೆ, ನಿರ್ದೇಶನದಂತಹ ಸಿನಿಮಾ ಚಟುವಟಿಕೆಗಳಿಂದ ದೂರವಿರಬೇಕಾಗುತ್ತದೆ. ಇಲ್ಲವೇ ನಿರ್ಮಾಪಕರಿಗಾದ ನಷ್ಟವನ್ನು ಭರಿಸಿ, ಸಂಧಾನ ಮಾಡಿಕೊಂಡರೆ ಮಾತ್ರ ʼರೆಡ್ ಕಾರ್ಡ್ʼ ತೆರವಾಗುತ್ತದೆ. ಅಸಹಕಾರದ ಕಾರಣಕ್ಕೆ ಈ ಹಿಂದೆ ತಮಿಳಿನ ಖ್ಯಾತ ಹಾಸ್ಯನಟ ವಡಿವೇಲು ಅವರಿಗೆ ನಿರ್ಮಾಪರ ಪರಿಷತ್ತು ʼರೆಡ್ ಕಾರ್ಡ್ʼನೀಡಿತ್ತು.