ಅಪಘಾತವಾಗಿದ್ದು ಹೇಗೆ ಎಂಬ ಬಗ್ಗೆ ಸುಳಿವು ನೀಡದ ಚಿತ್ರತಂಡ
ಟ್ವೀಟ್ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ನಟಿ ಅದಾ ಶರ್ಮಾ
ತಿರುಚಿದ ಕಥಾಹಂದರದ ಕಾರಣಕ್ಕೆ ವಿವಾದಕ್ಕೊಳಗಾಗಿರುವ ʼದಿ ಕೇರಳ ಸ್ಟೋರಿʼ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ತೆಲಂಗಾಣದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ತೆರಳುತ್ತಿದ್ದ ಚಿತ್ರತಂಡಕ್ಕೆ ಅಪಘಾತವಾಗಿದೆ. ಆದರೆ, ವಾಹನದಲ್ಲಿದ್ದ ಎಲ್ಲರೂ ಕ್ಷೇಮವಾಗಿದ್ದಾರೆ ಎಂದು ಚಿತ್ರದ ನಾಯಕಿ ಅದಾ ಶರ್ಮಾ ಮಾಹಿತಿ ಹಂಚಿಕೊಂಡಿದ್ದಾರೆ.
ʼದಿ ಕೇರಳ ಸ್ಟೋರಿʼ ಚಿತ್ರದ ನಿರ್ದೇಶಕ ಸುದಿಪ್ತೋ ಸೇನ್, ನಾಯಕಿ ಅದಾ ಶರ್ಮಾ ಸೇರಿದಂತೆ ಚಿತ್ರತಂಡದ ಸದಸ್ಯರು ಭಾನುವಾರ ತೆಲಂಗಾಣದ ಕರೀಂ ನಗರದಲ್ಲಿ ಆಯೋಜಿಸಲಾಗಿದ್ದʼಹಿಂದೂ ಏಕತಾ ಯಾತ್ರಾʼದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಈ ವೇಳೆ ಅವರಿದ್ದ ವಾಹನ ಅಪಘಾತಕ್ಕೀಡಾಗಿದ್ದು, ಅದಾ ಶರ್ಮಾ, ಸುದಿಪ್ತೋ ಸೇರಿದಂತೆ ಹವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಆದರೆ, ಅಪಘಾತ ಸಂಭವಿಸಿದ್ದು ಹೇಗೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಹಿನ್ನೆಲೆ ಚಿತ್ರತಂಡ ಪಾಲ್ಗೊಳ್ಳಬೇಕಿದ್ದ ʼಹಿಂದೂ ಏಕತಾ ಯಾತ್ರಾʼ ಕೂಡ ರದ್ದಾಗಿದೆ.
ಈ ಸುದ್ದಿ ಓದಿದ್ದೀರಾ? ಟ್ರಾಫಿಕ್‌ನಿಂದ ಪಾರಾಗಲು ಅಪರಿಚಿತನ ಬೈಕ್ ಏರಿದ ಅಮಿತಾಬ್ ಬಚ್ಚನ್
ಅಪಘಾತದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅದಾ ಶರ್ಮಾ, “ನಾನು ಕ್ಷೇಮವಾಗಿದ್ದೇನೆ, ಅಪಘಾತದ ಸುದ್ದಿ ಹರಿದಾಡುತ್ತಿರುವುದರಿಂದ ಹಲವಾರು ಮಂದಿ ಸಂದೇಶ ಕಳುಹಿಸಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಚಿತ್ರತಂಡದ ಎಲ್ಲರೂ ಆರೋಗ್ಯವಾಗಿದ್ದೇವೆ. ಅಂತಹ ದೊಡ್ಡ ಅಪಘಾತವೇನಲ್ಲ, ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಕಾಳಜಿಗೆ ಧನ್ಯವಾದ ಎಂದಿದ್ದಾರೆ.
ಕೇರಳದ ಯುವತಿಯರನ್ನು ಬಲವಂತವಾಗಿ ಮತಾಂತರಿಸಿ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆ ಮಾಡಲಾಗಿದೆ ಎಂಬ ಎಳೆಯ ಸುತ್ತʼದಿ ಕೇರಳ ಸ್ಟೋರಿʼ ಚಿತ್ರ ಮೂಡಿಬಂದಿದೆ. ಆದರೆ, ಈ ಚಿತ್ರ ತಿರುಚಿದ ಕಥಾಹಂದರವನ್ನು ಹೊಂದಿದೆ ಎಂಬ ಆರೋಪವಿದೆ. ವಿವಾದಕ್ಕೆ ಕಾರಣವಾಗಿರುವ ಈ ಚಿತ್ರವನ್ನು ಪಶ್ಚಿಮ ಬಂಗಾಳ ಸರ್ಕಾರ ನಿಷೇಧಿಸಿದ್ದು, ತಮಿಳುನಾಡಿನಲ್ಲೂ ಪ್ರದರ್ಶನಗಳು ರದ್ದುಗೊಂಡಿವೆ.