ʼಕಾಂತಾರʼದಂತಹ ವಿಶ್ವವಿಖ್ಯಾತ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ʼಜಸ್ಟ್ ಮಾರೀಡ್ʼ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. abbs studios ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ ಆರ್ ಬಾಬಿ ಈ ಪ್ರೇಮ ಕಥಾನಕವನ್ನು ನಿರ್ಮಾಣ ಮಾಡಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಸಿ ಆರ್ ಬಾಬಿ ಅವರ ಚೊಚ್ಚಲ ನಿರ್ದೇಶನದಲ್ಲಿ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ ʼಜಸ್ಟ್ ಮ್ಯಾರೀಡ್ʼ ಚಿತ್ರ ತೆರೆಗೆ ಬರಲು ಅಣಿಯಾಗಿದೆ. ಇತ್ತೀಚೆಗೆ ಈ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರವನ್ನು ನೀಡಿದೆ. ಸದ್ಯದಲ್ಲೇ ನಿರ್ಮಾಪಕರು ಬಿಡುಗಡೆ ದಿನಾಂಕವನ್ನು ತಿಳಿಸಲಿದ್ದಾರೆ.
ಪ್ರೇಮಕಥೆಯೊಂದಿಗೆ ಕೌಟುಂಬಿಕ ಕಥಾಹಂದರವನ್ನೂ ಹೊಂದಿರುವ ʼಜಸ್ಟ್ ಮ್ಯಾರೀಡ್ʼ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟೀಸರ್ಗೆ ಪ್ರೇಕ್ಷಕರು ಪ್ರಶಂಸೆಯ ಮಳೆಯನ್ನೇ ಸುರಿಸಿದ್ದಾರೆ. ತೆರೆಯ ಮೇಲೆ ಚಿತ್ರವನ್ನು ನೋಡುವ ಕಾತುರದಲ್ಲಿದ್ದಾರೆ.
ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಭಾರತದ ಹೆಸರಾಂತ ಹಾಗೂ ಅನುಭವಿ ಕಲಾವಿದರ ದೊಡ್ದ ತಾರಾಬಳಗವೇ ಇದೆ. ದೇವರಾಜ್, ಅಚ್ಯುತಕುಮಾರ್, ಮಾಳವಿಕ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ, ಸಂಗೀತ, ಅನಿಲ್, ವೇದಿಕಾ ಕಾರ್ಕಳ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಾದಕ ದ್ರವ್ಯ ಸಾಗಾಟ ಆರೋಪ : ಕಲಬುರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಚ್ಚಾಟನೆ
ಚಿತ್ರದಲ್ಲಿ ಆರು ಸುಮಧುರ ಹಾಡುಗಳಿದ್ದು, ಅಜನೀಶ್ ಲೋಕನಾಥ್ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿ ಆರ್ ಬಾಬಿಯವರು ಕಥೆ ಬರೆದಿದ್ದಾರೆ. ಚಿತ್ರಕಥೆ ಸಿ ಆರ್ ಬಾಬಿ ಹಾಗೂ ಧನಂಜಯ್ ರಂಜನ್ ಅವರದು. ರಘು ನಿಡುವಳ್ಳಿ ಈ ಚಿತ್ರದ ಸಂಭಾಷಣೆಕಾರರು.
ಪಿ ಜಿ ಛಾಯಾಗ್ರಹಣ, ಶ್ರೀಕಾಂತ್ ಮತ್ತು ಪ್ರತೀಕ್ ಶೆಟ್ಟಿ ಸಂಕಲನ, ಅಮರ್ ಕಲಾ ನಿರ್ದೇಶನ, ವಿಕ್ರಮ್ ಸಾಹಸ ನಿರ್ದೇಶನ ಹಾಗೂ ಬಾಬಾ ಭಾಸ್ಕರ್, ಶಾಂತಿ ಅರವಿಂದ್ ಅವರ ನೃತ್ಯ ನಿರ್ದೇಶನವಿರುವ ‘ಜಸ್ಟ್ ಮ್ಯಾರೀಡ್’ ಚಿತ್ರದ ಹಾಡುಗಳನ್ನು ಕೆ ಕಲ್ಯಾಣ್, ಡಾ.ವಿ.ನಾಗೇಂದ್ರಪ್ರಸಾದ್, ಪ್ರಮೋದ್ ಮರವಂತೆ, ಧನಂಜಯ್ ರಂಜನ್ ಮತ್ತು ಶಶಿ ಕಾವೂರ್ ಬರೆದಿದ್ದಾರೆ.