ಭರತ್ ಫಿಲಂಸ್ ಲಾಂಛನದಲ್ಲಿ ವಿ ಜೆ ಭರತ್ ನಿರ್ಮಿಸಿ, ನಿರ್ದೇಶಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ “ಖೇಲಾ” ಚಿತ್ರದ ʼಪುಣ್ಯಾತ್ ಗಿತ್ತೀʼ ಹಾಡು ಬಿಡುಗಡೆಯಾಗಿದ್ದು, ಭರ್ಜರಿ ಪ್ರಶಂಸೆ ಗಿಟ್ಟಿಸುತ್ತಿದೆ.
ಖ್ಯಾತ ಗಾಯಕ ವೇಲ್ ಮುರುಗನ್ ಹಾಡಿರುವ ಈ ಹಾಡಿಗೆ ಪ್ರಮೋದ್ ಜೋಯಿಸ್ ಸಾಹಿತ್ಯ ಬರೆದಿದ್ದು, ಎಂ.ಎಸ್ ತ್ಯಾಗರಾಜ್ ಸಂಗೀತ ಸಂಯೋಜಿಸಿದ್ದಾರೆ. ʼಭರತ್ ಫಿಲಂಸ್ʼ ಯೂಟ್ಯೂಬ್ ಚಾನೆಲ್ನಲ್ಲಿ ಹಾಡು ಬಿಡುಗಡೆಯಾಗಿದ್ದು, ಈಗಾಗಲೇ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.
ʼಶ್ರಾವಣಿ ಸುಬ್ರಹ್ಮಣ್ಯʼ ಹಾಗೂ ʼಮೈನಾʼ ಧಾರಾವಾಹಿಗಳ ಖ್ಯಾತಿಯ ವಿಹಾನ್ ಪ್ರಭಂಜನ್ ನಾಯಕನಾಗಿ ಹಾಗೂ ಆಶಿಕ ರಾವ್ ನಾಯಕಿಯಾಗಿ ನಟಿಸಿದ್ದು, ವಿಶೇಷ ಪಾತ್ರದಲ್ಲಿ ಸಂಗೀತ ಭಟ್, ಯುವರಾಜ್ ಗೌಡ ಸೇರಿದಂತೆ ಯುವ ಕಲಾವಿದರ ತಾರಾಗಣ ಚಿತ್ರಕ್ಕಿದೆ.
ಚಿತ್ರದ ಕುರಿತು, “ನಾನು ಕನ್ನಡದ ಹಿರಿಯ ನಿರ್ಮಾಪಕ ಹಾಗೂ ನಿರ್ದೇಶಕ ವಿಷ್ಣುಕಾಂತ್ ಅವರ ಪುತ್ರ. ಅಪ್ಪನ ಮಾರ್ಗದರ್ಶನದಲ್ಲಿ ಚೊಚ್ಚಲ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದೇನೆ. ಪ್ರಮುಖವಾಗಿ ಇದೊಂದು ಪ್ರೇಮ ಕಥಾನಕವಾಗಿದ್ದರೂ, ತಾಯಿ-ಮಗನ ಬಾಂಧವ್ಯ, ಸಸ್ಪೆನ್ಸ್, ಥ್ರಿಲ್ಲರ್ ಜತೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ತಾಯಂದಿರ ದಿನದಂದು ಮೊದಲ ಹಾಡು ಬಿಡುಗಡೆಯಾಗಿತ್ತು. ಇಂದು “ಪುಣ್ಯಾತ್ ಗಿತ್ತೀ” ಹಾಡನ್ನು ಬಿಡುಗಡೆ ಮಾಡಿದ್ದೇವೆ. ಎಲ್ಲಾ ಹಾಡುಗಳು ಉತ್ತಮವಾಗಿ ಮೂಡಿ ಬಂದಿದೆ. ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಒಂದು ಹಾಡು ಹಾಗು ಒಂದು ಫೈಟ್ ನ ಚಿತ್ರೀಕರಣ ಮಾತ್ರ ಬಾಕಿ ಇದೆ” ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಭರತ್ ವಿ.ಜೆ ತಿಳಿಸಿದರು.
ಇದನ್ನೂ ಓದಿ: ʼಮಾದೇವʼ ಪ್ರಿ ರಿಲೀಸ್ ಇವೆಂಟ್; ‘ಎದೇಲಿ ತಂಗಾಳಿ’ ಹಾಡು ಬಿಡುಗಡೆ
“ತಾಯಂದಿರ ದಿನದಂದು ಬಿಡುಗಡೆಯಾದ ತಾಯಿ-ಮಗನ ಬಾಂಧವ್ಯದ ಹಾಡು ಈಗಾಗಲೇ ಜನಪ್ರಿಯವಾಗಿದೆ. ಇಂದು ಬಿಡುಗಡೆಯಾಗಿರುವ ʼಪುಣ್ಯಾತ್ ಗಿತ್ತೀʼ ಹಾಡು ಕೂಡ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ನಾನು ಈ ಚಿತ್ರದ ನಾಯಕ .ಚಿತ್ರದಲ್ಲಿ ಕಾಲೇಜು ಹುಡುಗ” ಎಂದು ನಾಯಕ ವಿಹಾನ್ ಪ್ರಭಂಜನ್ ಹೇಳಿದರು.
ಚಿತ್ರದಲ್ಲಿ ಐದು ಹಾಡುಗಳಿದ್ದು, ಈ ಹಾಡು ಸೇರಿದಂತೆ ಎರಡು ಹಾಡುಗಳನ್ನು ಪ್ರಮೋದ್ ಜೋಯಿಸ್ ಬರೆದಿದ್ದಾರೆ ಎಂದರು ಸಂಗೀತ ನಿರ್ದೇಶಕ ಎಂ.ಎಸ್.ತ್ಯಾಗರಾಜ್.