ರಾಜ್ಯದಲ್ಲಿ ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಕುರಿತಾದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜೂನ್ 10ಕ್ಕೆ ಮುಂದೂಡಿದೆ.
ಈ ನಡುವೆ ಜೂನ್ 5ರಂದು ರಾಜ್ಯದಲ್ಲಿ ಸಿನಿಮಾ ಬಿಡುಗಡೆ ಮಾಡದಿರಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ವಾಣಿಜ್ಯ ಮಂಡಳಿ ಜೊತೆಗೆ ನಿರ್ಮಾಪಕರು ಚರ್ಚೆ ನಡೆಸಲು ಸಿದ್ಧರಿದ್ದಾರೆ ಎಂದು ನಿರ್ಮಾಪಕರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಕಮಲ್ ಅವರಿಗೆ ಕ್ಷಮೆ ಕೇಳುವುದಕ್ಕೆ ಹಿಂಜರಿಕೆ ಏಕೆ ಎಂದು ಪ್ರಶ್ನಿಸಿತ್ತು.
ನೀವೇನು ಭಾಷಾತಜ್ಞರೇ ಎಂದು ಹೈಕೋರ್ಟ್ ತರಾಟೆ
“ಕನ್ನಡಿಗರ ಭಾವನೆಗಳಿಗೆ ಹಾನಿ ಮಾಡಿ, ಈಗ ಕ್ಷಮೆ ಕೇಳುವುದಿಲ್ಲ ಎಂದರೆ ಹೇಗೆ? ವಾಕ್ ಸ್ವಾತಂತ್ರ್ಯ ಎಂದರೆ ಬೇರೆಯವರ ಭಾವನೆಗಳಿಗೆ ಹಾನಿ ಮಾಡುವುದಲ್ಲ” ಎಂದು ಕರ್ನಾಟಕ ಹೈಕೋರ್ಟ್ ತಮಿಳು ನಟ ಕಮಲ್ ಹಾಸನ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಇದನ್ನು ಓದಿದ್ದೀರಾ? ‘ಥಗ್ ಲೈಫ್’ ಸಿನಿಮಾ ತಡೆಯದಂತೆ ಹೈಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್ ಚಿತ್ರ ತಂಡ
“ತಮಿಳಿನಿಂದ ಕನ್ನಡ ಜನಿಸಿದೆ ಎಂದು ಹೇಳಲು ಕಮಲ್ ಹಾಸನ್ ಅವರು ಭಾಷಾತಜ್ಞರೇ? ಕ್ಷಮೆ ಕೇಳಿದ್ದರೆ ಎಲ್ಲವೂ ಮುಗಿಯುತ್ತಿತ್ತಲ್ಲವೇ? ಆ ಹೇಳಿಕೆ ನೀಡುವ ಅಗತ್ಯವೇನಿತ್ತು? ಇತಿಹಾಸ ಗೊತ್ತಿಲ್ಲದೇ ಆ ಹೇಳಿಕೆ ನೀಡಿದ್ದೇನೆ ಎಂದು ಕ್ಷಮೆ ಕೇಳಿದ್ದರೆ ಮುಗಿಯುತ್ತಿತ್ತಲ್ಲವೇ? ನೀವೇ ಸೃಷ್ಟಿ ಮಾಡಿರುವ ಸಮಸ್ಯೆಗೆ ಪೊಲೀಸರ ರಕ್ಷಣೆ ಕೋರುತ್ತಿದ್ದೀರಾ” ಎಂದು ಪೀಠ ಪ್ರಶ್ನಿಸಿದೆ.
ಇನ್ನು ವಿಡಿಯೋ ಪರಿಶೀಲಿಸಿದ ನ್ಯಾಯಮೂರ್ತಿಗಳು, “ಯಾರ ಭಾವನೆಯನ್ನೂ ತಮ್ಮ ಮನಸೋಇಚ್ಛೆ ನೋಯಿಸಲು ಬಿಡಲಾಗದು. ಹಲವು ಕೋಟಿ ನಷ್ಟವಾಗುತ್ತದೆ ಎನ್ನುವುದಾದರೆ, ನಿಮಗೆ ಕರ್ನಾಟಕ ಏತಕ್ಕೆ ಬೇಕು. ಅದನ್ನು ಬಿಡಿ. ನೀವು ಇತಿಹಾಸಕಾರರೇನಲ್ಲ ಎಂದ ಮೇಲೆ ಕ್ಷಮೆ ಕೋರಲು ಹೇಳಿ. ಆಡಿದ ಮಾತುಗಳು ಬರುವುದಿಲ್ಲ. ಕ್ಷಮೆ ಕೋರುವುದರ ಮೂಲಕ ಅವುಗಳಿಗೆ ಇತಿಶ್ರೀ ಹಾಡಬೇಕು” ಎಂದರು.