ಕನ್ನಡ ತಮಿಳಿನಿಂದ ಹುಟ್ಟಿದೆ ಎಂದು ಹೇಳಿಕೆ ನೀಡಿದ ತಮಿಳು ನಟ ಕಮಲ್ ಹಾಸನ್ ಕ್ಷಮೆಯಾಚಿಸುವಂತೆ ಕನ್ನಡಪರ ಸಂಘಟನೆಗಳು ಆಗ್ರಹಿಸಿದೆ. ಆದರೆ ನಟ ಕ್ಷಮೆ ಕೇಳಲು ನಿರಾಕರಿಸಿದ್ದಾರೆ. ಈ ಬೆನ್ನಲ್ಲೇ ಕ್ಷಮೆ ಕೇಳದಿದ್ದರೆ ಕಮಲ್ ಹಾಸನ್ ಸಿನಿಮಾವನ್ನು ಬಹಿಷ್ಕರಿಸಲಾಗುವುದು ಎಂದು ಚಿತ್ರರಂಗ ಹೇಳಿದೆ. ಈ ಎಲ್ಲಾ ಬೆಳವಣಿಗೆ ನಡುವೆ ‘ಥಗ್ ಲೈಫ್’ ಸಿನಿಮಾ ತಡೆಯದಂತೆ ಸಿನಿಮಾ ತಂಡವು ಕರ್ನಾಟಕ ಹೈಕೋರ್ಟ್ ಮೊರೆಹೋಗಿದೆ.
ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರದ ಸಹ-ನಿರ್ಮಾಪಕರಾದ ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ‘ಥಗ್ ಲೈಫ್’ ಸಿನಿಮಾ ತಡೆಯದಂತೆ ಹೈಕೋರ್ಟ್ ಮೆಟ್ಟಿಲೇರಿದೆ. ರಾಜ್ಯದಲ್ಲಿ ಯಾವುದೇ ಅಡೆತಡೆಯಿಲ್ಲದೆ ಚಿತ್ರವನ್ನು ಪ್ರದರ್ಶಿಸಲು ಅವಕಾಶ ನೀಡುವಂತೆ ನಿರ್ದೇಶನ ನೀಡುವಂತೆ ಕೋರಿದೆ.
ಇದನ್ನು ಓದಿದ್ದೀರಾ? ಕನ್ನಡ ತಮಿಳಿನಿಂದ ಹುಟ್ಟಿದೆ ಹೇಳಿಕೆ: ತಪ್ಪಾಗಿದ್ದರೆ ಮಾತ್ರ ಕ್ಷಮೆ ಕೇಳುವೆ ಎಂದ ಕಮಲ್ ಹಾಸನ್
ನಟ ಕಮಲ್ ಹಾಸನ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸದಿದ್ದರೆ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್‌ಸಿಸಿ) ಸಹ ಘೋಷಿಸಿದೆ. ಆದರೆ ಕಮಲ್ ಹಾಸನ್ ಮಾತ್ರ ಕ್ಷಮೆಯಾಚಿಸಲು ನಿರಾಕರಿಸಿದ್ದು, ಇದೀಗ ಚಿತ್ರ ತಂಡ ಹೈಕೋರ್ಟ್ ಮೆಟ್ಟಿಲೇರಿದೆ.
ಇನ್ನು ಚಿತ್ರತಂಡವು “ನಟನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ವಾಸ್ತವವಾಗಿ ತಮಿಳುನಾಡು ಮತ್ತು ಕರ್ನಾಟಕದ ಜನರ ನಡುವಿನ ಸೌಹಾರ್ದತೆಯನ್ನು ಎತ್ತಿ ತೋರಿಸುವ ಉದ್ದೇಶವನ್ನು ಈ ಚಿತ್ರ ಹೊಂದಿದೆ” ಎಂದು ವಾದಿಸಿದೆ.
“ಉದ್ದೇಶಪೂರ್ವಕವಾಗಿ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಇದರಿಂದಾಗಿ ಅನಗತ್ಯ ಆಕ್ರೋಶ ಉಂಟಾಗಿದೆ. ಹಾಗಾಗಿ 300 ಕೋಟಿ ರೂಪಾಯಿ ವೆಚ್ಚದ ಈ ಚಿತ್ರದ ಪ್ರದರ್ಶನವನ್ನು ಕರ್ನಾಟಕದಲ್ಲಿ ತಡೆಯುವ ಯಾವುದೇ ಪ್ರಯತ್ನವನ್ನು ತಡೆಯಲು ನ್ಯಾಯಾಲಯ ಮಧ್ಯಪ್ರವೇಶಿಸಬೇಕು” ಎಂದು ಚಿತ್ರತಂಡ ಒತ್ತಾಯಿಸಿದೆ.
ಮಣಿರತ್ನಂ ನಿರ್ದೇಶನದ ಥಗ್ ಲೈಫ್ ಚಿತ್ರದಲ್ಲಿ ತ್ರಿಶಾ ಕೃಷ್ಣನ್ ಮತ್ತು ಟಿಆರ್ ಸಿಲಂಬರಸನ್ ಕೂಡ ನಟಿಸಿದ್ದಾರೆ, ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ.
