ಗ್ಯಾಂಗ್‌ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡು ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬುಧವಾರ (ಅ.23) ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಜಾರ್ಖಂಡ್‌ನ ಜೆಮ್‌ಶೆಡ್‌ಪುರದ ತರಕಾರಿ ವ್ಯಾಪಾರಿ ಶೇಖ್ ಹುಸೇನ್ ಶೇಖ್ ಮೌಸಿನ್ (24) ಎಂದು
ಗುರುತಿಸಲಾಗಿದೆ.
ಕಳೆದ ಅಕ್ಟೋಬರ್ 18 ರಂದು ನಗರದ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂ ವಾಟ್ಸಾಪ್ ಗ್ರೂಪ್‌ಗೆ ಬೆದರಿಕೆ ಸಂದೇಶ ಕಳುಹಿಸಿದ್ದ ವ್ಯಕ್ತಿ, ಸಲ್ಮಾನ್ ಖಾನ್ ಜೀವಂತವಾಗಿರಲು ಬಯಸಿದರೆ ಮತ್ತು ಲಾರೆನ್ಸ್ ಬಿಷ್ಣೋಯ್ ಅವರೊಂದಿಗಿನ ದ್ವೇಷವನ್ನು ಕೊನೆಗೊಳಿಸಲು ಬಯಸಿದರೆ ಅವರು 5 ಕೋಟಿ ರೂ. ಪಾವತಿಸಬೇಕು. ಒಂದು ವೇಳೆ ಹಣ ನೀಡದಿದ್ದರೆ ಸಲ್ಮಾನ್ ಖಾನ್ ಸ್ಥಿತಿ ಬಾಬಾ ಸಿದ್ದಿಕ್‌ಗಿಂತ ಕೆಟ್ಟದಾಗುತ್ತದೆ, ಎಂದು ಸಂದೇಶ ಕಳುಹಿಸಿದ್ದ.
ಈ ಸುದ್ದಿ ಓದಿದ್ದೀರಾ? ಈದಿನ ಸಂಪಾದಕೀಯ | ಮಳೆ ನಿರ್ವಹಣೆಗೆ ಬೇಕು 500 ವರ್ಷಗಳ ದೂರದೃಷ್ಟಿ
ಇದರ ಬೆನ್ನಲ್ಲೇ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಮುಂಬೈ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು.
ಪೊಲೀಸರ ಕಾರ್ಯಾಚರಣೆ ವೇಳೆ ಆರೋಪಿ ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿರುವುದು ಗೊತ್ತಾಗಿದೆ. ಅದರಂತೆ ಅಲ್ಲಿನ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬುಧವಾರ ಬಂಧಿಸಿದ್ದು ಗುರುವಾರ ಮುಂಬೈಗೆ ಕರೆತರಲಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
