ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ಮಂಗಳವಾರ ನಿಧನರಾಗಿದ್ದಾರೆ.
81 ವರ್ಷ ಪ್ರಾಯದ ದ್ವಾರಕೀಶ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೃದಯಾಘಾತದಿಂದ ಮಂಗಳವಾರ ನಿಧರಾಗಿದ್ದಾರೆ ಎಂದು ವರದಿಯಾಗಿದೆ.
ಹುಣಸೂರಿನಲ್ಲಿ ಆಗಸ್ಟ್ 19-1942 ರಂದು ಶಮಾರಾವ್ ಮತ್ತು ಜಯಮ್ಮರವರಿಗೆ ಜನಿಸಿದ ದ್ವಾರಕೀಶ್ ಅವರು, ನಟ, ನಿರ್ದೇಶಕ ಮತ್ತು ನಿರ್ಮಾಪಕ ಕೂಡಾ ಹೌದು.
ಶಾರದಾ ವಿಲಾಸ್ ಮತ್ತು ಬನುಮಯ್ಯ ಶಾಲೆಯಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದ ದ್ವಾರಕೀಶ್ ಅವರು, ಸಿಪಿಸಿ ಪಾಲಿಟೆಕ್ನಿಕ್‌ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿದ್ದಾರೆ. ಅದಾದ ಬಳಿಕ ಅವರ ಸೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದರು.
ನಟ, ನಿರ್ದೇಶಕ, ನಿರ್ಮಾಪಕರಾಗಿ ಬಹುಕಾಲ ಕನ್ನಡ ಚಿತ್ರರಂಗದ ಸೇವೆಗೈದ ಕನ್ನಡಿಗರ ಪ್ರೀತಿಯ ‘ಪ್ರಚಂಡ ಕುಳ್ಳ’ ದ್ವಾರಕೀಶ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು.
ಡಾ. ರಾಜ್‌ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರಂತಹ ಮೇರು ನಟರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದರೂ ಹಾಸ್ಯಭರಿತ ನಟನೆಯ ಮೂಲಕ ನೋಡುಗರ ಮನದಲ್ಲಿ ತಮ್ಮದೇ ಆದ ಛಾಪು… pic.twitter.com/ARyuMzFMC0— Siddaramaiah (@siddaramaiah) April 16, 2024
1963ರಲ್ಲಿ ತನ್ನ ವ್ಯಾಪಾರವನ್ನು ತೊರೆದು ಸಿನಿಮಾ ಲೋಕಕ್ಕೆ ಪ್ರವೇಶಿಸಿದ ದ್ವಾರಕೀಶ್ ಅವರು ಕನ್ನಡದ ಕುಳ್ಳ ಎಂದೇ ಖ್ಯಾತರಾಗಿದ್ದಾರೆ. ಕನ್ನಡದ ಪ್ರಮುಖ ನಟರಾದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಜೋಡಿ ಎಂದು ಪ್ರಸಿದ್ಧವಾಗಿತ್ತು.
ದ್ವಾರಕೀಶ್ ಅವರು 1966ರಲ್ಲಿ ತುಂಗಾ ಬ್ಯಾನರ್ಸ್‌ನಡಿ ಮಮತೆಯ ಬಂಧನ ಎಂಬ ಸಿನಿಮಾದ ಸಹ ನಿರ್ಮಾಪಕರಾದರು. 1969ರಲ್ಲಿ ಡಾ. ರಾಜ್‌ಕುಮಾರ್ ಮತ್ತು ಭಾರತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಸೂಪರ್‌ಹಿಟ್ ಸಿನಿಮಾ ಮೇಯರ್ ಮುತ್ತಣ್ಣ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ಮಾಪಕರಾದರು.
ಇನ್ನು ದ್ವಾರಕೀಶ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ನಟ ಸುದೀಪ್, ಡಾ ಶಿವರಾಜ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.