ಏಪ್ರಿಲ್ 28ಕ್ಕೆ ತೆರೆಗೆ ಬರಲಿದೆ ʼರಾಘುʼ ಸಿನಿಮಾ
ಏಕಪಾತ್ರ ಅಭಿನಯದ ಪ್ರಯೋಗಾತ್ಮಕ ಚಿತ್ರ
ಸ್ಯಾಂಡಲ್‌ವುಡ್‌ನ ಖ್ಯಾತ ನಟ ವಿಜಯ್ ರಾಘವೇಂದ್ರ ಅಭಿನಯದ ʼರಾಘುʼ ಸಿನಿಮಾದ ಬಹುನಿರೀಕ್ಷಿತ ಟ್ರೈಲರ್ ಭಾನುವಾರ ಬಿಡುಗಡೆಯಾಗಿದೆ. ವಿಜಯ್ ರಾಘವೇಂದ್ರ ಏಕಾಂಗಿಯಾಗಿ ನಟಿಸಿರುವ ಈ ಪ್ರಯೋಗಾತ್ಮಕ ಚಿತ್ರದ ಟ್ರೈಲರ್ ಸಿನಿ ರಸಿಕರಲ್ಲಿ ಕುತೂಹಲ ಹೆಚ್ಚಿಸಿದೆ.
ಎರಡು ನಿಮಿಷಗಳ ಟ್ರೈಲರ್‌ನಲ್ಲಿ ವಿಜಯ್ ರಾಘವೇಂದ್ರ ಏಕಾಂಗಿಯಾಗಿ ಕಾಣಿಸಿಕೊಂಡಿದ್ದಾರೆ. ವ್ಯಕ್ತಿಯೊಬ್ಬನ ದುರಂತಮಯ ಬದುಕಿನ ಸುತ್ತ ಚಿತ್ರದ ಕಥೆಯನ್ನು ಹೆಣೆಯಾಗಿದೆ ಎಂಬುದು ಟ್ರೈಲರ್‌ನಲ್ಲಿ ಸೂಚ್ಯವಾಗಿ ತೋರಿಸಲಾಗಿದೆ. ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ಹಿರಿಯ ನಟ ಶಿವರಾಜ್ ಕುಮಾರ್ ಕಂಠದಾನ ಮಾಡಿರುವುದು ವಿಶೇಷ.
ʼಆನʼ ಮತ್ತು ʼಬ್ಯಾಂಗ್ʼ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಎಂ. ಆನಂದ್ ರಾಜ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಕ್ರೈಂ ಮತ್ತು ಥ್ರಿಲ್ಲರ್ ಎಳೆಯನ್ನು ಹೊಂದಿರುವ ಈ ಚಿತ್ರದಲ್ಲಿ ಪ್ರಧಾನ ಪಾತ್ರವನ್ನು ಹೊರತುಪಡಿಸಿ ಬೇರೆ ಯಾವ ಪಾತ್ರಗಳು ಇಲ್ಲ. ಇಡೀ ಚಿತ್ರದುದ್ದಕ್ಕೂ ವಿಜಯ್ ರಾಘವೇಂದ್ರ ಒಬ್ಬರೇ ಕಾಣಸಿಗುತ್ತಾರೆ.
ವಿಜಯ್ ರಾಘವೇಂದ್ರ ಮತ್ತು ಆನಂದ್ ರಾಜ್ ಕಾಂಬಿನೇಶನ್‌ನಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ರಿತ್ವಿಕ್ ಮುರಳಿಧರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಡಿಕೆಎಸ್ ಸ್ಟುಡಿಯೋ ಮತ್ತು ಕೋಟಾ ಫಿಲಂ ಫ್ಯಾಕ್ಟರಿ ಪ್ರೊಡಕ್ಷನ್ ಹೌಸ್ ಬ್ಯಾನರ್‌ನಡಿ ರನ್ವಿತ್ ಶಿವಕುಮಾರ್ ಹಾಗೂ ಅಭಿಷೇಕ್ ಚಿತ್ರವನ್ನು ನಿರ್ಮಿಸಿದ್ದಾರೆ. ಏಕಪಾತ್ರ ಅಭಿನಯದ ಈ ಚಿತ್ರ ಏಪ್ರಿಲ್ 28ರಂದು ತೆರೆಗೆ ಬರಲಿದೆ.