ಚೊಚ್ಚಲ ಚಿತ್ರದಲ್ಲಿ ಸೋಲನುಭವಿಸಿದ್ದ ವಿಕ್ರಮ್
ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಗಮನ ಸೆಳೆದ ಕ್ರೇಜಿಸ್ಟಾರ್ ಪುತ್ರ
ಸ್ಯಾಂಡಲ್‌ವುಡ್‌ನ ಹಿರಿಯ ನಟ ರವಿಚಂದ್ರನ್ ಅವರ ಕಿರಿಯ ಪುತ್ರ ವಿಕ್ರಮ್ ನಟನೆಯ ಚೊಚ್ಚಲ ಚಿತ್ರ ʼತ್ರಿವಿಕ್ರಮʼ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಮೊದಲ ಚಿತ್ರದ ಸೋಲನ್ನು ಒಪ್ಪಿಕೊಂಡಿರುವ ವಿಕ್ರಮ್ ಇದೀಗ ಎರಡನೇ ಚಿತ್ರವನ್ನು ಘೋಷಿಸಿದ್ದಾರೆ.
ವಿಕ್ರಮ್ ನಟನೆಯ ಎರಡನೇ ಚಿತ್ರಕ್ಕೆ ʼಮುಧೋಳ್ʼ ಎಂದು ಹೆಸರಿಡಲಾಗಿದ್ದು, ಬುಧವಾರ ಬೆಂಗಳೂರಿನ ನವರಂಗ್ ಚಿತ್ರರಂಗದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಈ ನೂತನ ಚಿತ್ರದ ಟೈಟಲ್ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ.
ಅಂದಾಜು 3 ನಿಮಿಷಗಳ ಟೀಸರ್‌ನಲ್ಲಿ ವಿಕ್ರಮ್ ಜೈಲು ಶಿಕ್ಷೆ ಅನುಭವಿಸುತ್ತಿರುವ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಮಿಂಚಿದ್ದು, ಆ್ಯಕ್ಷನ್ ದೃಶ್ಯಗಳು ಗಮನ ಸೆಳೆಯುವಂತಿವೆ. ಆದರೆ, ಟೈಟಲ್ ಟೀಸರ್‌ನಲ್ಲಿ ಬಳಕೆಯಾಗಿರುವ ಹಿನ್ನೆಲೆ ಸಂಗೀತ ತಮಿಳಿನ ಹಿರಿಯ ನಟ ಕಮಲ್ ಹಾಸನ್ ಅಭಿನಯದ ʼವಿಕ್ರಮ್ʼ ಸಿನಿಮಾದ ಸಂಗೀತವನ್ನು ಹೋಲುವಂತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಟೈಟಲ್‌ಗೆ ಸರಿ ಹೊಂದುವಂತೆ ಮುಧೋಳ ನಾಯಿಯನ್ನು ಕೂಡ ಚಿತ್ರದಲ್ಲಿ ಪ್ರಮುಖವಾಗಿ ಬಳಸಿಕೊಂಡಿರುವುದು ವಿಶೇಷ.
ತಮಿಳು, ತೆಲುಗು ಚಿತ್ರರಂಗಗಳಲ್ಲಿ ಸಹಾಯಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಕಾರ್ತಿಕ್ ರಾಜನ್ ʼಮುಧೋಳ್ʼ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಆ್ಯಕ್ಷನ್ ಪ್ಯಾಕ್ ಕಥಾಹಂದರವುಳ್ಳ ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕ ಉತ್ತರ ಪ್ರದೇಶದಂತಾಗಬೇಕು ಎಂದ ಸುಮಲತಾ : ತರಾಟೆ ತೆಗೆದುಕೊಂಡ ಕನ್ನಡಿಗರು
ʼತಂಡವ್ ಸ್ಟುಡಿಯೋಸ್ʼ ಬ್ಯಾನರ್‌ನಡಿ ರಕ್ಷಾ ವಿಜಯಕುಮಾರ್ ಹಾಗೂ ಸಿಲ್ಜು ಕಣ್ಣನ್ ಬಂಡವಾಳ ಹೂಡಿರುವ ʼಮುಧೋಳ್ʼ ಚಿತ್ರಕ್ಕೆ ಯುವರಾಜ್ ಚಂದ್ರನ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಈಗಾಗಲೇ 30 ದಿನಗಳ ಕಾಲ ಚಿತ್ರೀಕರಣ ಪೂರ್ಣಗೊಂಡಿದೆ. ಅಭಿಲಾಶ್, ರಘು ಮ್ಯೂಟಂಟ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಉಳಿದ ಕಲಾವಿದರ ಬಗ್ಗೆ ಸದ್ಯದಲ್ಲೇ ಮಾಹಿತಿ ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿದೆ.