ಫಿಲ್ಮ್‌ ಅಕಾಡೆಮಿ ಅವಾಂತರ -ಭಾಗ 5 | ಫಿಲ್ಮ್‌ ಫೆಸ್ಟಿವಲ್‌ ವಿಕೇಂದ್ರೀಕರಣ ಏಕೆ ಆಗುತ್ತಿಲ್ಲ?

Date:

Advertisements

ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ನೇರ ಕಾರಣವಾಗುವ ಚಲನಚಿತ್ರೋತ್ಸವವನ್ನು ವೀಕೇಂದ್ರೀಕರಿಸಲು ರಾಜ್ಯ ಸರ್ಕಾರವೂ ಆಲೋಚಿಸಿಲ್ಲ. ಇದರ ಬಗ್ಗೆ ವಾರ್ತಾ ಇಲಾಖೆಯು ಸುತ್ತೋಲೆ ಹೊರಡಿಸಿಲ್ಲ ಅಥವಾ ಯಾವುದೇ ಸಲಹೆ- ನಿರ್ದೇಶನಗಳನ್ನೂ ಅಕಾಡೆಮಿಗೆ ನೀಡಿಲ್ಲ. ಚಿತ್ರರಂಗದಿಂದಲೂ ಒತ್ತಡ ಉಂಟಾಗಿಲ್ಲ.

“ಒಂದು ಚಿತ್ರದ ಭವಿಷ್ಯ ನಿರ್ಧರಿಸುವಲ್ಲಿ ಪ್ರೇಕ್ಷಕರ ಪಾತ್ರ ದೊಡ್ಡದು. ಸಿನೆಮಾವನ್ನು ಅರ್ಥೈಸಿಕೊಳ್ಳುವ ಪ್ರೇಕ್ಷಕರು ಇದ್ದಾಗ ಒಳ್ಳೆಯ ಚಿತ್ರ ನಿರ್ಮಾಣವಾಗುತ್ತದೆ. ಗಮನಾರ್ಹ ಸಿನೆಮಾ ನಿರ್ಮಾಣದಲ್ಲಿ ಪ್ರೇಕ್ಷಕರ ಪಾತ್ರವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ” ಎಂದು ಖ್ಯಾತ ನಿರ್ದೇಶಕ-ನಿರ್ಮಾಪಕ ಪ್ರಕಾಶ್ ಝಾ ಹೇಳುತ್ತಾರೆ. ಇಂಥ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸುವಲ್ಲಿ ಸಿನೆಮಾ ಅಕಾಡೆಮಿಗಳು ಪ್ರಮುಖ ಪಾತ್ರ ವಹಿಸಬಲ್ಲವು.

“ಚಲನಚಿತ್ರ ಅಕಾಡೆಮಿಯ ಮೂಲ ಉದ್ದೇಶವೇನು ಎಂದು ಹೆಚ್ಚಿನವರು ಯೋಚಿಸಲು ಸಹ ಹೋಗಿಲ್ಲ. ಫಿಲ್ಮ್ ಫೆಸ್ಟಿವಲ್ ಮಾಡುವುದೊಂದೇ ಅಕಾಡೆಮಿ ಗುರಿಯಲ್ಲ. ಆದರೆ ಇದನ್ನು ಬಿಟ್ಟು ಚಿತ್ರೋದ್ಯಮದ ಬೆಳವಣಿಗೆಗೆ ಪೂರಕವಾಗುವಂಥ ಕಾರ್ಯಗಳನ್ನು ಮಾಡಬಹುದು ಎಂಬ ಐಡಿಯಾ ಸಹ ಇದ್ದಂತೆ ಕಾಣುವುದಿಲ್ಲ. ತಿಳಿದುಕೊಳ್ಳುವ ಆಸಕ್ತಿಯೂ ಇಲ್ಲ. ಪ್ರೇಕ್ಷಕರನ್ನೂ ಸೇರಿದಂತೆ ಸಿನೆಮಾ ಕ್ಷೇತ್ರದ ವಿವಿಧ ವಿಭಾಗಗಳವರನ್ನೂ ಮತ್ತಷ್ಟು ಎಜುಕೇಟ್ ಮಾಡಬಹುದು. ಜೊತೆಗೆ ಫಿಲ್ಮ್ ಫೆಸ್ಟಿವಲ್ ವಿಕೇಂದ್ರೀಕರಣವನ್ನೂ ಮಾಡಬೇಕು” ಎಂದು ಹಿರಿಯ ಪತ್ರಕರ್ತ, ಖ್ಯಾತ ನಿರ್ದೇಶಕ ಎನ್.ಎಸ್. ಶಂಕರ್ ತೀವ್ರವಾಗಿ ಪ್ರತಿಕ್ರಿಯಿಸುತ್ತಾರೆ.

“ಸಿನೆಮಾ ಮಾಧ್ಯಮ ಎಂದರೇನು ಎಂದು ಕಲಿಸುವುದು, ಸಿನೆಮಾ ವ್ಯಾಕರಣವನ್ನು ಅರ್ಥ ಮಾಡಿಕೊಳ್ಳುವ ಪ್ರೇಕ್ಷಕ ವರ್ಗವನ್ನು ಸೃಷ್ಟಿಸುವುದು, ಬೆಳೆಸುವುದು ಚಲನಚಿತ್ರ ಅಕಾಡೆಮಿಯ ಪ್ರಮುಖ ಕೆಲಸಗಳಲ್ಲಿ ಸೇರಿದೆ” ಎಂದು ಸಿನೆಮಾ ಕ್ಷೇತ್ರದ ಹಿರಿಯ ಪತ್ರಕರ್ತ ಬಾ.ನಾ. ಸುಬ್ರಮಣ್ಯ (ಬಾನಾಸು) ಅಭಿಪ್ರಾಯಪಡುತ್ತಾರೆ.

ಕರ್ನಾಟಕ ಸರ್ಕಾರದ ಉನ್ನತ ಅಧಿಕಾರಿಯಾಗಿದ್ದ ಹೆಸರು ನಮೂದಿಸಲು ಇಷ್ಟಪಡದ, ಓರ್ವರು “ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಬಂದ ಹೆಚ್ಚಿನವರಿಗೆ ಅಕಾಡೆಮಿಯ ಉದ್ದೇಶವೇ ಗೊತ್ತಿಲ್ಲ. ಅದು ಸಿನೆಮಾ ಶೈಕ್ಷಣಿಕ ಚಟುವಟಿಕೆಗಳ ಕ್ಷೇತ್ರ, ಸದಭಿರುಚಿಯ ಸಿನೆಮಾ ಸಂಸ್ಕೃತಿಯನ್ನು, ಇಂಥ ಸಿನೆಮಾಗಳು ಹೆಚ್ಚುಹೆಚ್ಚು ನಿರ್ಮಾಣವಾಗುವಂಥ ವಾತಾವರಣವನ್ನು, ತೀಕ್ಷ್ಣ ವಿಮರ್ಶಾತ್ಮಕ ಪ್ರೇಕ್ಷಕರನ್ನು ಬೆಳೆಸುವುದು ಅಕಾಡೆಮಿ ಗುರಿಯಾಗಿರಬೇಕು” ಎಂದು ಹೇಳುತ್ತಾರೆ.

“ಬೆಂಗಳೂರು ಒಂದರಲ್ಲೇ ಫಿಲ್ಮ್ ಫೆಸ್ಟಿವಲ್ ಮಾಡುತ್ತಿದ್ದರೆ ಸಿನೆಮಾ ಸಂಸ್ಕೃತಿ ಬೆಳೆಸಲು ಸಾಧ್ಯವಿಲ್ಲ. ಕರ್ನಾಟಕದ ಬೇರೆ ಬೇರೆ ಕಡೆ ಆಯೋಜನೆ ಮಾಡಬೇಕು. ರಾಜಧಾನಿಯಲ್ಲಿ ಚಲನಚಿತ್ರೋತ್ಸವ ಮಾಡಿದಾಗ ಮೂರುವರೆಯಿಂದ ನಾಲ್ಕು ಸಾವಿರ ಮಂದಿ ಭಾಗವಹಿಸಬಹುದು. ಜಿಲ್ಲಾ ಕೇಂದ್ರಗಳಲ್ಲಿ ತಾಲ್ಲೂಕು ಕೇಂದ್ರಗಳಲ್ಲಿ ಸಣ್ಣಸಣ್ಣ ಪ್ರಮಾಣದಲ್ಲಿ ಮಾಡಿದರೆ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಒಳಗೊಳ್ಳಬಹುದು. ಈ ಕಾರ್ಯಕ್ರಮಕ್ಕೆ ಸರ್ಕಾರ ಈಗ ಅಕಾಡೆಮಿಗೆ ಕೊಡುತ್ತಿರುವ ಹಣವೇ ಸಾಕು ಎಂದು ಸಿನೆಮಾ ತಜ್ಞ ಪ್ರದೀಪ್ ಕೆಂಚನೂರು ಪ್ರತಿಪಾದಿಸುತ್ತಾರೆ.

ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ನೇರ ಕಾರಣವಾಗುವ ಚಲನಚಿತ್ರೋತ್ಸವವನ್ನು ವೀಕೇಂದ್ರೀಕರಿಸಲು ರಾಜ್ಯ ಸರ್ಕಾರವೂ ಆಲೋಚಿಸಿಲ್ಲ. ಇದರ ಬಗ್ಗೆ ಅಕಾಡೆಮಿ ಉಸ್ತುವಾರಿ ಹೊಣೆ ಹೊತ್ತ ವಾರ್ತಾ ಇಲಾಖೆಯು ಸುತ್ತೋಲೆ ಹೊರಡಿಸಿಲ್ಲ ಅಥವಾ ಯಾವುದೇ ಸಲಹೆ- ನಿರ್ದೇಶನಗಳನ್ನೂ ಅಕಾಡೆಮಿಗೆ ನೀಡಿಲ್ಲ. ಚಿತ್ರರಂಗದಿಂದಲೂ ಒತ್ತಡ ಉಂಟಾಗಿಲ್ಲ.

ಈ ಕಾರಣಗಳಿಂದ ಬೆಂಗಳೂರಿನಲ್ಲಿ ಪ್ರತಿವರ್ಷ ಜಾತ್ರೆಯ ಮಾದರಿಯಲ್ಲಿ ಫಿಲ್ಮ್ ಫೆಸ್ಟಿವಲ್ ನಡೆಯುತ್ತಿದೆ. ಜಾತ್ರೆಯ ಮಾದರಿಯಲ್ಲಿ ಎಂದು ಹೇಳುವುದಕ್ಕೂ ನಿರ್ದಿಷ್ಟ ಕಾರಣವಿದೆ. ಫೆಸ್ಟಿವಲ್ ಪಾಸ್ ಪಡೆದುಕೊಂಡು ಬರುವವರಲ್ಲಿ ನಿರ್ದಿಷ್ಟ ಸಿನೆಮಾ ನೋಡಬೇಕು ಎಂದು ನಿಶ್ಚಯಿಸಿಕೊಂಡು ಬರುವವರೂ ಇರುತ್ತಾರೆ. ಇಂಥವರು ದೊಡ್ಡದೊಡ್ಡ ಸರತಿ ಸಾಲುಗಳ ಕಾರಣದಿಂದ ಸಿನೆಮಾ ನೋಡಲಾಗದ ಸಾಧ್ಯತೆಯೇ ಹೆಚ್ಚು.

ಈ ಹಿನ್ನೆಲೆಯಲ್ಲಿ ಹಿಂದಿನ ದಿನವೇ ಮುಂಗಡ ಸೀಟು ಕಾಯ್ದಿರಿಸುವಿಕೆ ವ್ಯವಸ್ಥೆ ಮಾಡಬೇಕು. ಆಗ ಪ್ರೇಕ್ಷಕರು ತಮ್ಮ ತಮ್ಮ ಆಯ್ಕೆಯ ನಿರ್ದಿಷ್ಟ ಸಿನೆಮಾಗಳಿಗೆ ಸೀಟು ಕಾಯ್ದಿರಿಸುತ್ತಾರೆ. ಇಂಥ ವ್ಯವಸ್ಥೆ ಈಗಾಗಲೇ ದೇಶದ ಬೇರೆಡೆ ನಡೆಯುವ ಫಿಲ್ಮ್ ಫೆಸ್ಟಿವಲ್ ನಲ್ಲಿ ಇದೆ. ಹೀಗೆ ಮಾಡುವುದರಿಂದ ಬೇರೆ ಬೇರೆ ಸ್ಕ್ರೀನ್ ಪ್ರವೇಶದ್ವಾರದ ಮುಂದೆ ಬಹು ಉದ್ದನೆಯ ಸಾಲು ನಿರ್ಮಾಣವಾಗುವುದನ್ನು ತಡೆಯಬಹುದು. ಮುಖ್ಯವಾಗಿ ಪ್ರೇಕ್ಷಕರು ವೆಬ್‌ಸೈಟ್ ಅಥವಾ ವಿತರಿಸಲಾದ ಸಿನೆಮಾ ಕೈಪಿಡಿ ಪುಸ್ತಕಗಳಲ್ಲಿರುವ ಸಾರಾಂಶ ತಿಳಿಯುತ್ತಾರೆ. ತಮ್ಮ ಅಭಿರುಚಿಯ ಸಿನೆಮಾ ಆಯ್ದುಕೊಳ್ಳುತ್ತಾರೆ. ಈ ವರ್ಷದಿಂದಲೇ ಇಂಥ ವ್ಯವಸ್ಥೆ ಮಾಡಲು ಸಾಧ್ಯವಿದೆ.

ಜಾತ್ರೆ ಎಂದು ಹೇಳಲು ಮತ್ತೊಂದು ಕಾರಣವೂ ಇದೆ. ಸಿನೆಮಾ ಆಸಕ್ತರು, ಚಿತ್ರ ಸಮಾಜಗಳ ಸದಸ್ಯರು, ವಿದ್ಯಾರ್ಥಿಗಳು ಅಕಾಡೆಮಿ ನಿಗದಿಪಡಿಸಿದ ಹಣ ನೀಡಿ ಆನ್‌ಲೈನ್ ನಲ್ಲಿ ನೋಂದಾಯಿಸಿಕೊಳ್ಳುತ್ತಾರೆ. ಅವರ ವಾಟ್ಸ್ಯಾಪ್ ನಂಬರಿಗೆ ಸ್ಕ್ಯಾನಿಂಗ್ ಕೋಡ್ ಮತ್ತು ನಂಬರ್ ಕಳಿಸಿದರೆ ಪಾಸುಗಳನ್ನು ಪ್ರಿಂಟ್ ಮಾಡುವ, ಈ ಪಾಸುಗಳನ್ನು ಅವರು ಪಡೆದುಕೊಳ್ಳಲು ದೂರ ಸ್ಥಳಗಳಿಂದ ಬರುವ ಪ್ರಮೇಯ ತಪ್ಪಿಸಬಹುದು. ಮುಖ್ಯವಾಗಿ ಪಾಸುಗಳನ್ನು ಪ್ರಿಂಟ್ ಮಾಡಲು ವಿನಿಯೋಗಿಸುವ ಲಕ್ಷಾಂತರ ರೂಪಾಯಿ ಹಣ ಉಳಿತಾಯ ಮಾಡಬಹುದು. ಇದನ್ನು ಮಾಡಲು ಸಾಧ್ಯವಿದ್ದರೂ ಏಕೆ ಮಾಡಿಲ್ಲ, ಮಾಡುವುದಿಲ್ಲ?

ಹಣ ನೀಡಿ ನೋಂದಣಿ ಮಾಡಿಕೊಂಡ ಪ್ರತಿನಿಧಿಗಳಲ್ಲಿ ಬಹುತೇಕರಿಗೆ ಫಿಲ್ಮ್ ಫೆಸ್ಟಿವಲ್ ಪಾಸು, ಸಿನೆಮಾಗಳ ಸಾರಾಂಶವಿರುವ ಕೈಪಿಡಿ ದೊರೆಯುವುದಿಲ್ಲ. “ಲಭ್ಯತೆ ಇದ್ದರೆ ಮಾತ್ರ ಕೊಡಲಾಗುವುದು” ಎಂದು ಅಕಾಡೆಮಿ ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸಿದೆ. ಇದರ ಅರ್ಥವೇನು? ಹಣ ಕೊಟ್ಟವರು ಕೈಪಿಡಿ ಕೇಳಬಾರದೇ? ಹೀಗೆ ಫೆಸ್ಟಿವಲ್ ಬ್ಯಾಗ್, ಕೈಪಿಡಿ ದೊಡ್ಡ ಪ್ರಮಾಣದಲ್ಲಿ ಕೊರತೆಯಾಗಲು ಕಾರಣವೆಂದರೆ ಅದಕ್ಕೆ ಲೆಕ್ಕಾಚಾರ ಇಲ್ಲದಿರುವುದು, ಪುಗ್ಸಟ್ಟೆ ಕೊಡುವ ವಿಐಪಿ, ವಿವಿಐಪಿ ಪಾಸುಗಳನ್ನು ಲೆಕ್ಕಾಚಾರವಿಲ್ಲದೇ ಮುದ್ರಿಸಿ ಹಂಚುವುದು, ಅವುಗಳ ಜೊತೆಗೆ ಬ್ಯಾಗ್, ಕೈಪಿಡಿ ವಿತರಿಸುವುದೇ ಕಾರಣವಾಗಿದೆ.

ಫಿಲ್ಮ್ ಫೆಸ್ಟಿವಲ್ ಪಾಸುಗಳನ್ನು ಉಚಿತವಾಗಿ ಕೊಡುವ ಅಗತ್ಯವಾದರೂ ಏನು? ಈ ಪದ್ದತಿ ಏಕೆ, ವಿಐಪಿ ಪಾಸುಗಳು ಉಚಿತವೇಕೆ? ಹೀಗೆ ಪ್ರಶ್ನಿಸಿದರೆ ಪತ್ರಕರ್ತರಿಗೆ ಉಚಿತವಾಗಿ ಪಾಸು ಕೊಡುವುದಿಲ್ಲವೇ ಎಂಬ ಪ್ರಶ್ನೆ ಅಕಾಡೆಮಿಯಿಂದ ಎದುರಾಗಬಹುದು! ಚಿತ್ರ ಸಮಾಜದ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಪಾಸು ಕೊಡುವ ಹಾಗೆ ಪತ್ರಕರ್ತರಿಗೂ ನೀಡಬಹುದು!

ಇವೆಲ್ಲ (ಅ)ವ್ಯವಸ್ಥೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಕಾಡೆಮಿಯು ಫಿಲ್ಮ್ ಫೆಸ್ಟಿವಲ್ ವಿಕೇಂದ್ರೀಕರಣಕ್ಕೆ ಮುಂದಾಗುವುದೇ?

ಇದನ್ನೂ ಓದಿ ಫಿಲ್ಮ್‌ ಅಕಾಡೆಮಿ ಅವಾಂತರ – ಭಾಗ 4 | ಲೈಬ್ರರಿಗಾಗಿ ಬಿಡಿಎ ಕೊಟ್ಟ ಕೋಟ್ಯಂತರ ರೂಪಾಯಿ ಏನಾಯಿತು?

Advertisements
ಕುಮಾರ ರೈತ
ಕುಮಾರ ರೈತ
+ posts

ಪತ್ರಕರ್ತ, ಕೃಷಿ ಇವರ ಆಸಕ್ತಿಯ ಕ್ಷೇತ್ರ. ಹಲವು ಪತ್ರಿಕೆಗಳಿಗೆ ಕೃಷಿ ಲೇಖನಗಳನ್ನು ಬರೆಯುತ್ತಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಕುಮಾರ ರೈತ
ಕುಮಾರ ರೈತ
ಪತ್ರಕರ್ತ, ಕೃಷಿ ಇವರ ಆಸಕ್ತಿಯ ಕ್ಷೇತ್ರ. ಹಲವು ಪತ್ರಿಕೆಗಳಿಗೆ ಕೃಷಿ ಲೇಖನಗಳನ್ನು ಬರೆಯುತ್ತಿದ್ದಾರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X