- ಸುಡಾನ್‌ನಿಂದ ಬಂದವರಲ್ಲಿ ಕೇರಳ ಮೂಲದವರು ಹೆಚ್ಚು
- ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 6 ದಿನ ಕ್ವಾರಂಟೈನ್
ರಾಜಧಾನಿ ಬೆಂಗಳೂರಿನಲ್ಲಿ ಹಳದಿ ಜ್ವರದ ಭೀತಿ ಹೆಚ್ಚಾಗಿದೆ. ಯುದ್ಧಪೀಡಿತ ಸುಡಾನ್‌ನಿಂದ ಆಪರೇಷನ್ ಕಾವೇರಿ ಅಡಿಯಲ್ಲಿ ರಕ್ಷಣೆ ಮಾಡಿ ಭಾರತಕ್ಕೆ ಬಂದವರಲ್ಲಿ 78 ಮಂದಿ ಲಸಿಕೆ ಪಡೆದ ಪ್ರಮಾಣ ಪತ್ರ ಹೊಂದಿಲ್ಲದ ಕಾರಣ, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ದೇಶದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್‌ಗೆ ಒಳಗಾಗುತ್ತಿರುವವರ ಸಂಖ್ಯೆ ಕ್ಷೀಣಿಸಿದೆ. ಆದರೆ, ಹಳದಿ ಜ್ವರ ಮತ್ತು ಅಕಾಲಿಕ ಮಳೆಯ ಪರಿಣಾಮ ಬೆಂಗಳೂರಿನಲ್ಲಿ ಮಲೇರಿಯಾ ಮತ್ತು ಚಿಕನ್ ಗುನ್ಯಾಗೆ ಒಳಾಗುತ್ತಿರುವವರಲ್ಲಿ ಕ್ರಮೇಣ ಏರಿಕೆ ಕಂಡಿದೆ.
ಸುಡಾನ್‌ನಿಂದ ಬೆಂಗಳೂರಿಗೆ ಬಂದಿಳಿದವರಲ್ಲಿ, ಕೇರಳ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕರ್ನಾಟಕ, ತೆಲಂಗಾಣ, ತಮಿಳುನಾಡಿನವರು ನಂತರದ ಸ್ಥಾನದಲ್ಲಿದ್ದಾರೆ. ಹೀಗಾಗಿ, ಲಸಿಕೆ ಪಡೆಯದವರನ್ನು ಆರು ದಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ. ಕಣ್ಣು ಉರಿ, ಹಳದಿ ಕಣ್ಣು, ಜ್ವರ, ಶೀತ, ಸುಸ್ತು, ಮೈ ಕೈ ನೋವು ಇವುಗಳು ಹಳದಿ ಜ್ವರದ ಲಕ್ಷಣಗಳಾಗಿವೆ. ಕ್ವರಂಟೈನ್‌ನಲ್ಲಿರುವವರಿಗೆ ಈ ಲಕ್ಷಣಗಳು ಕಂಡುಬಂದಿಲ್ಲ. ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ತಾಪಮಾನ ಹೆಚ್ಚಳ; ಮಧ್ಯಾಹ್ನದ ಕಾರ್ಯಕ್ರಮ ರದ್ದುಮಾಡಿ | 10 ಮುಖ್ಯ ಅಂಶ
ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದ 229 ಮಂದಿ ಭಾನುವಾರ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಇವರಲ್ಲಿ 31 ಮಂದಿ ಲಸಿಕೆ ಹಾಕಿಸಿಕೊಳ್ಳದವರನ್ನು ಕ್ವಾರಂಟೈನ್ ಮಾಡಲಾಗಿದೆ. ಆಪರೇಷನ್ ಕಾವೇರಿ ಕಾರ್ಯಾಚರಣೆಯಡಿ ಒಟ್ಟು ದೇಶದ ವಿವಿಧ ರಾಜ್ಯಗಳ 582 ಮಂದಿ ಬೆಂಗಳೂರಿಗೆ ಬಂದಿಳಿದಿದ್ದಾರೆ.
ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕಾ, ಉಗಾಂಡ, ನೈಜೀರಿಯಾ, ಕೀನ್ಯಾ ಸೇರಿ ಕೆಲ ದೇಶಗಳಲ್ಲಿ ಹಳದಿ ಜ್ವರ ಹೆಚ್ಚಳವಾಗಿದೆ. ಹೀಗಾಗಿ ಹಳದಿಜ್ವರ ಕಾಣಿಸಿಕೊಂಡ ದೇಶಗಳಿಂದ ಬರುವವರು ಕಡ್ಡಾಯವಾಗಿ ಹಳದಿ ಜ್ವರದ ಲಸಿಕೆ ಪಡೆದು, ಅದಕ್ಕೆ ಸಂಬಂಧಿಸಿದ ದಾಖಲಾತಿ ತೋರಿಸಿದರಷ್ಟೆ ಅವರನ್ನು ಬಿಡಲಾಗುತ್ತದೆ. ಇಲ್ಲವಾದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಮಾಡಿ ರೋಗಗಳ ಗುಣ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೆ ಆಸ್ಪತ್ರೆಯಿಂದ ತೆರಳುವಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಹೇಳಿದೆ.