ಅಕಾಲಿಕ ಮಳೆಯಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಅಲ್ಲದೇ, ನಗರದಲ್ಲಿ ಕಾಲರಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಈ ಮಧ್ಯೆ ಕುದುರೆಯಲ್ಲಿ ‘ಗ್ಲಾಂಡರ್ಸ್’ ಎಂಬ ರೋಗ ಪತ್ತೆಯಾಗಿದೆ. ಈ ಹಿನ್ನೆಲೆ, ಡಿ.ಜೆ.ಹಳ್ಳಿ ಸುತ್ತಮುತ್ತ `ರೋಗಪೀಡಿತ ವಲಯ’ ಎಂದು ಪಶುಸಂಗೋಪನೆ ಹಾಗೂ ಹೈನುಗಾರಿಕೆ ಇಲಾಖೆ ಘೋಷಣೆ ಮಾಡಿದೆ.
ಬೆಂಗಳೂರು ಉತ್ತರ ತಾಲೂಕಿನ ಡಿ.ಜೆ.ಹಳ್ಳಿಯ ಕುದುರೆಯೊಂದರಲ್ಲಿ ಮಾರಕ ಗ್ಲಾಂಡರ್ಸ್ ರೋಗ ದೃಢಪಟ್ಟಿದೆ. ಇದೊಂದು ಸೋಂಕು ರೋಗವಾಗಿದೆ. ರೋಗಗ್ರಸ್ಥ ಕುದುರೆ ಸಾವನ್ನಪ್ಪಿದ್ದು, ಮತ್ತೊಂದು ಕುದುರೆಗೆ ಈ ಸೋಂಕು ತಗುಲಿದೆ. ಬೆಂಗಳೂರು ಉತ್ತರ ತಾಲೂಕಿನ ಡಿಜೆ ಹಳ್ಳಿಯ ಮೋದಿ ರಸ್ತೆಯಲ್ಲಿರುವ ಖಾಲಿದ್ ಷರೀಫ್ ಎಂಬುವವರಿಗೆ ಸೇರಿದ ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ಕಾಣಿಸಿಕೊಂಡಿದೆ.
ಹಾಗಾಗಿ, ಡಿ.ಜೆ.ಹಳ್ಳಿ ಕೇಂದ್ರ ಸ್ಥಾನದಿಂದ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯನ್ನು ರೋಗ ಪೀಡಿತ ವಲಯ ಎಂದು ಪಶುಸಂಗೋಪನೆ ಹಾಗೂ ಹೈನುಗಾರಿಕೆ ಇಲಾಖೆ ಘೋಷಣೆ ಮಾಡಿದೆ. 5 ರಿಂದ 25 ಕಿ.ಮೀ. ಪ್ರದೇಶವನ್ನು ‘ಜಾಗೃತ ವಲಯ’ ಎಂದು ಘೋಷಿಸಲಾಗಿದೆ.
ಈ ಪ್ರದೇಶದ ಒಳಗೆ ಮತ್ತು ಹೊರಗೆ ಕುದುರೆ, ಕತ್ತೆ ಹಾಗೂ ಹೇಸರಗತ್ತೆಗಳ ಚಲನವಲನ ನಿರ್ಭಂಧಿಸಲಾಗಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ. ಕುದುರೆ ಹಾಗೂ ಕತ್ತೆಗಳಿಂದ ಇತರ ಪ್ರಾಣಿಗಳಿಗೂ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಈ ನಿರ್ಬಂಧ ಹಾಕಲಾಗಿದೆ.
ಏನಿದು ‘ಗ್ಲಾಂಡರ್ಸ್’ ರೋಗ?
ಗ್ಲಾಂಡರ್ಸ್ ಒಂದು ಸಾಂಕ್ರಾಮಿಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದ್ದು ಸಾಮಾನ್ಯವಾಗಿ ಕುದುರೆಗಳು, ಕತ್ತೆಗಳು ಹಾಗೂ ಹೇಸರಗತ್ತೆಗಳಿಗೆ ಈ ಸೋಂಕು ತಗುತ್ತದೆ.
ಇದು ಬರ್ಖೋಲ್ಡೆರಿಯಾ ಮಲ್ಲಿ ಎಂಬ ಬ್ಯಾಕ್ಟೀರಿಯಂದಿಂದ ಉಂಟಾಗುತ್ತದೆ. ಶ್ವಾಸನಾಳ ಮತ್ತು ಶ್ವಾಸಕೋಶಗಳಲ್ಲಿ ಗಂಟುಗಳು ಮತ್ತು ಹುಣ್ಣು ಉಂಟುಮಾಡುತ್ತದೆ. ಇದನ್ನು ಫಾರ್ಸಿ ಎಂದು ಕರೆಯಲಾಗುತ್ತದೆ. ಇದು ಉಲ್ಬಣವಾದರೆ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಈ ಗ್ಲಾಂಡರ್ಸ್ ರೋಗ ಜೂನೋಟಿಕ್ ಕಾಯಿಲೆಯಾಗಿದ್ದು, ಇದು ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ.
ಸೋಂಕು ಪೀಡಿತ ಪ್ರಾಣಿಯ ಸಂಪರ್ಕಕ್ಕೆ ಬರುವ ಪ್ರಾಣಿ ನಿರ್ವಾಹಕರು ಅಥವಾ ಇತರರು ಸೋಂಕಿಗೆ ತುತ್ತಾಗುವ ಅಪಾಯವಿದೆ. ನಿಯಮಿತ ತಪಾಸಣೆಯ ಮೂಲಕ ರೋಗವನ್ನು ನಿಯಂತ್ರಿಸಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ತಾಪಮಾನ ಹೆಚ್ಚಳ | ಕಪ್ಪು ಕೋಟಿನಿಂದ ತಾತ್ಕಾಲಿಕ ಮುಕ್ತಿ ಪಡೆದ ರಾಜ್ಯದ ವಕೀಲರು
ಡಿಜೆ ಹಳ್ಳಿಯಲ್ಲಿ ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ಪತ್ತೆಯಾದ ಹಿನ್ನಲೆ ಪ್ರಾಣಿ ನಿರ್ವಾಹಕರಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದರೆ ಕೂಡಲೇ ಅವರು ತಪಾಸಣೆಗೆ ಒಳಗಾಗಬೇಕು ಎಂದು ಸಚಿವಾಲಯ ಆದೇಶಿಸಿದೆ.
ಎಲ್ಲ ಪ್ರಾಣಿ ನಿರ್ವಾಹಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತೇವೆ. ಈ ಸೋಂಕು ತಗುಲಿದರೆ ಇದು ಅವರ ಅಂಗಗಳ ಮೇಲೆ ವೇಗವಾಗಿ ಪರಿಣಾಮ ಬೀರುತ್ತದೆ ಮತ್ತು ಸಾವಿಗೆ ಕಾರಣವಾಗಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೆಂಗಳೂರಿನಲ್ಲಿ 1,200 ಕುದುರೆಗಳಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ರೇಸ್‌ಕುದುರೆಗಳ ಪರೀಕ್ಷೆಯ ವರದಿಯನ್ನು ಕೇಳಲಾಗುವುದು ಎಂದು ತಿಳಿಸಿದ್ದಾರೆ.