ದೇಶಾದ್ಯಂತ 157 ಸರ್ಕಾರಿ ನರ್ಸಿಂಗ್ ಕಾಲೇಜು ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
2014ರಿಂದ ಸ್ಥಾಪಿತವಾದ ವೈದ್ಯಕೀಯ ಕಾಲೇಜುಗಳಂತೆಯೇ 157 ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲು ಕೇಂದ್ರ ಸಚಿವಾಲಯ ಬುಧವಾರ ಅನುಮೋದನೆ ನೀಡಿದೆ. ನರ್ಸಿಂಗ್ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮತ್ತು ದೇಶದಲ್ಲಿ ನರ್ಸಿಂಗ್ ಕಾಲೇಜುಗಳ ನಿರ್ಮಾಣದಲ್ಲಿರುವ ಅಸಮಾನತೆಯನ್ನು ನಿವಾರಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಮನ್ಸುಖ್ ಮಾಂಡವಿಯಾ ಅವರು, ಅಸ್ತಿತ್ವದಲ್ಲಿರುವ ವೈದ್ಯಕೀಯ ಕಾಲೇಜುಗಳೊಂದಿಗೆ 1,570 ಕೋಟಿ ರೂಪಾಯಿ ವೆಚ್ಚದಲ್ಲಿ157 ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಹೇಳಿದರು.
ದೇಶದಲ್ಲಿ ಗುಣಮಟ್ಟದ, ಕೈಗೆಟಕುವ ದರದಲ್ಲಿ ಮತ್ತು ಸಮಾನವಾದ ಶುಶ್ರೂಷಾ ಶಿಕ್ಷಣವನ್ನು ಒದಗಿಸುವುದು ಮತ್ತು ನರ್ಸಿಂಗ್ ವೃತ್ತಿಪರರ ಸಂಖ್ಯೆಯನ್ನು ಹೆಚ್ಚಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ವೈದ್ಯಕೀಯ ಕಾಲೇಜುಗಳೊಂದಿಗೆ ಈ ನರ್ಸಿಂಗ್ ಕಾಲೇಜುಗಳ ಸಹ-ಸ್ಥಳವು ಅಸ್ತಿತ್ವದಲ್ಲಿರುವ ಮೂಲಸೌಕರ್ಯ, ಕೌಶಲ್ಯ ಪ್ರಯೋಗಾಲಯಗಳು, ಕ್ಲಿನಿಕಲ್ ಸೌಲಭ್ಯಗಳು ಮತ್ತು ಅಧ್ಯಾಪಕರ ಅತ್ಯುತ್ತಮ ಬಳಕೆಯನ್ನು ಅನುಮತಿಸುತ್ತದೆ. ಎರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲು ಚಿಂತಿಸಲಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ?: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹೆಚ್ಚಳ; ರಾಜ್ಯದಲ್ಲಿ ವರ್ಷಕ್ಕೆ 1.4 ಲಕ್ಷ ಪ್ರಕರಣ ದಾಖಲು