ಅನೇಕ ಪೋಷಕರು ಹಣ್ಣಿನ ಜ್ಯೂಸ್ಗಳನ್ನು ಸಾಫ್ಟ್ ಡ್ರಿಂಕ್ಸ್ಗಳಿಗೆ ಆರೋಗ್ಯಕರ ಪರ್ಯಾಯ ಎಂದು ಭಾವಿಸುತ್ತಾರೆ. ಆದರೆ, ಬಾಲ್ಯದಿಂದಲೇ ಭಾರೀ ಪ್ರಮಾಣದಲ್ಲಿ ಫ್ರೂಟ್ ಜ್ಯೂಸ್ ಮತ್ತು ಸಕ್ಕರೆ ಮಿಶ್ರಿತ ಪಾನೀಯಗಳನ್ನು ಸೇವಿಸುವುದರಿಂದ, ದೊಡ್ಡವರಾದ ನಂತರ ಅಧಿಕ ರಕ್ತದೊತ್ತಡ (ಹೈಪರ್ಟೆನ್ಷನ್) ಆವರಿಸುವ ಅಪಾಯ ಹೆಚ್ಚಾಗುತ್ತದೆ ಎಂದು ‘ಸರ್ಕ್ಯುಲೇಶನ್’ ನಿಯತಕಾಲಿಕೆಯಲ್ಲಿ ಪ್ರಕಟವಾದ ಹೊಸ ಸಂಶೋಧನೆಯೊಂದು ಎಚ್ಚರಿಸಿದೆ.
ಅಮೆರಿಕದಲ್ಲಿ ಸುಮಾರು 25,000ಕ್ಕೂ ಹೆಚ್ಚು ಜನರನ್ನು 25 ವರ್ಷಗಳ ಕಾಲ ಸುದೀರ್ಘ ಅಧ್ಯಯನಕ್ಕೆ ಒಳಪಡಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಬಾಲ್ಯದಲ್ಲಿ ದಿನಕ್ಕೆ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸಕ್ಕರೆ ಮಿಶ್ರಿತ ಪಾನೀಯಗಳನ್ನು ಕುಡಿಯುತ್ತಿದ್ದ ಮಕ್ಕಳಲ್ಲಿ, ದೊಡ್ಡವರಾದ ಮೇಲೆ ಅಧಿಕ ರಕ್ತದೊತ್ತಡ ಬರುವ ಅಪಾಯವು ವಾರಕ್ಕೆ ಮೂರಕ್ಕಿಂತ ಕಡಿಮೆ ಬಾರಿ ಸೇವಿಸುವವರಿಗಿಂತ 52%ರಷ್ಟು ಹೆಚ್ಚಿರುವುದು ಕಂಡುಬಂದಿದೆ. ಹಾಗೆಯೇ ದಿನಕ್ಕೆ ಒಂದೂವರೆ ಅಥವಾ ಅದಕ್ಕಿಂತ ಹೆಚ್ಚು ಲೋಟ ಹಣ್ಣಿನ ಜ್ಯೂಸ್ ಕುಡಿಯುತ್ತಿದ್ದ ಮಕ್ಕಳಲ್ಲಿ ಈ ಅಪಾಯ 35%ರಷ್ಟು ಹೆಚ್ಚಾಗಿದೆ ಎಂದು ಅಧ್ಯಯನ ವಿವರಿಸಿದೆ.
“ಈ ಅಧ್ಯಯನದ ಅರ್ಥ ಹಣ್ಣುಗಳನ್ನು ತಿನ್ನುವುದು ಅಪಾಯಕಾರಿ ಎಂದಲ್ಲ. ದೇಹಕ್ಕೆ ಸಕ್ಕರೆಯ ಪ್ರಮಾಣ ಎಷ್ಟು ಮುಖ್ಯವೋ, ಅದು ದೇಹಕ್ಕೆ ಯಾವ ರೂಪದಲ್ಲಿ ಸಿಗುತ್ತದೆ ಎಂಬ ಮೂಲವೂ ಅಷ್ಟೇ ಮುಖ್ಯ. ಇಡೀ ಹಣ್ಣನ್ನು ಸೇವಿಸಿದಾಗ ಸಿಗುವ ಸಕ್ಕರೆಯು, ದ್ರವ ರೂಪದ ಪಾನೀಯವಾಗಿ ಸೇವಿಸುವ ಸಕ್ಕರೆಗಿಂತ ತೀರ ಭಿನ್ನವಾಗಿ ವರ್ತಿಸುತ್ತದೆ. ಪ್ರತಿದಿನ ಕುಡಿಯುವ ಒಂದು ಲೋಟ ಸಿಹಿ ಪಾನೀಯದ ಬದಲಿಗೆ ಇಡೀ ಹಣ್ಣನ್ನು ತಿಂದರೆ ರಕ್ತದೊತ್ತಡದ ಅಪಾಯ 22%ರಷ್ಟು ಕಡಿಮೆಯಾಗುತ್ತದೆ. ಹಣ್ಣಿನ ಜ್ಯೂಸ್ ಬದಲಿಗೆ ಇಡೀ ಹಣ್ಣನ್ನು ಸೇವಿಸಿದರೆ ಈ ಅಪಾಯ 19%ರಷ್ಟು ಕಡಿಮೆಯಾಗುತ್ತದೆ” ಎಂದು ಅಧ್ಯಯನ ಸ್ಪಷ್ಟಪಡಿಸಿದೆ.
ಹಣ್ಣುಗಳನ್ನು ಜ್ಯೂಸ್ ಮಾಡಿ ಕುಡಿಯುವುದಕ್ಕೂ ಮತ್ತು ಇಡೀ ಹಣ್ಣನ್ನು ತಿನ್ನುವುದಕ್ಕೂ ಜೈವಿಕವಾಗಿ ಬಹಳಷ್ಟು ವ್ಯತ್ಯಾಸವಿದೆ. ಹಣ್ಣಿನಲ್ಲಿರುವ ನಾರಿನಂಶವು (ಫೈಬರ್) ಜಠರ ಖಾಲಿಯಾಗುವುದನ್ನು ಹಾಗೂ ದೇಹಕ್ಕೆ ಸಕ್ಕರೆ ಹೀರಿಕೊಳ್ಳುವುದನ್ನು ನಿಧಾನಗೊಳಿಸುತ್ತದೆ. ಇದರಿಂದ, ರಕ್ತದಲ್ಲಿ ಗ್ಲೂಕೋಸ್ ಮತ್ತು ಇನ್ಸುಲಿನ್ ಮಟ್ಟಗಳು ನಿಧಾನವಾಗಿ ಏರುತ್ತವೆ. ಆದರೆ, ಜ್ಯೂಸ್ ಮಾಡಿದಾಗ ಈ ಹೆಚ್ಚಿನ ನಾರಿನಂಶವು ನಾಶವಾಗುವುದರಿಂದ, ಸಕ್ಕರೆಯು ರಕ್ತಕ್ಕೆ ತಕ್ಷಣವೇ ಭಾರೀ ಪ್ರಮಾಣದಲ್ಲಿ ಹೀರಿಕೊಳ್ಳಲ್ಪಡುತ್ತದೆ. ರಕ್ತದಲ್ಲಿ ಗ್ಲೂಕೋಸ್ ಮತ್ತು ಇನ್ಸುಲಿನ್ ಮಟ್ಟಗಳು ಪದೇ ಪದೇ ದಿಢೀರನೆ ಏರುವುದರಿಂದ ಇನ್ಸುಲಿನ್ ನಿರೋಧಕತೆ ಹೆಚ್ಚಾಗುತ್ತದೆ. ನರಮಂಡಲದ ಮೇಲಿನ ಒತ್ತಡ ಹೆಚ್ಚುತ್ತದೆ. ಮೂತ್ರಪಿಂಡಗಳು ಸೋಡಿಯಂ ಅನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತದೆ. ಅಲ್ಲದೆ, ರಕ್ತದೊತ್ತಡ ಮತ್ತು ದೇಹದ ದ್ರವ ಸಮತೋಲನವನ್ನು ನಿಯಂತ್ರಿಸುವ ‘ರೆನಿನ್-ಆಂಜಿಯೋಟೆನ್ಸಿನ್-ಆಲ್ಡೋಸ್ಟೆರಾನ್’ ಹಾರ್ಮೋನ್ ವ್ಯವಸ್ಥೆಯು ಸಕ್ರಿಯಗೊಂಡು ಅಧಿಕ ರಕ್ತದೊತ್ತಡಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅಧ್ಯಯನ ಸ್ಪಷ್ಟವಾಗಿ ವಿವರಿಸಿದೆ.
ಈ ಲೇಖನ ಓದಿದ್ದೀರಾ?: ಜೆನ್ ಝೀʼ | ಇದು ಹಣೆಪಟ್ಟಿಗಳ ಸೀಳಿ ಟಿಸಿಲೊಡೆದ ಹೊಸ ಪೀಳಿಗೆ!
ಇದರ ಜೊತೆಗೆ, ಪಾನೀಯಗಳಲ್ಲಿರುವ ಅತಿಯಾದ ಫ್ರಕ್ಟೋಸ್ ಅಂಶವು ಪ್ರಧಾನವಾಗಿ ಲಿವರ್ನಲ್ಲಿ ಚಯಾಪಚಯಗೊಳ್ಳುತ್ತದೆ (ಮೆಟಬಾಲೈಸ್). ಇದು ಕೊಬ್ಬಿನ ಸಂಶ್ಲೇಷಣೆಗೆ ಚಾಲನೆ ನೀಡಿ ಫ್ಯಾಟಿ ಲಿವರ್, ಟ್ರೈಗ್ಲಿಸರೈಡ್ಗಳ ಹೆಚ್ಚಳ ಹಾಗೂ ಕಿಬ್ಬೊಟ್ಟೆಯ ಕೊಬ್ಬು ಶೇಖರಣೆಗೆ ಕಾರಣವಾಗುತ್ತದೆ. ಈ ಅನಾರೋಗ್ಯಕರ ಕೊಬ್ಬು ಉರಿಯೂತದ ಸೈಟೊಕಿನ್ಗಳನ್ನು ಬಿಡುಗಡೆ ಮಾಡುತ್ತದೆ. ರಕ್ತನಾಳಗಳ ಸಡಿಲಿಕೆಗೆ ನೆರವಾಗುವ ನೈಟ್ರಿಕ್ ಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಫ್ರಕ್ಟೋಸ್ ಚಯಾಪಚಯವು ಯೂರಿಕ್ ಆಸಿಡ್ ಅನ್ನು ಸಹ ಉತ್ಪಾದಿಸುವುದರಿಂದ, ಅದು ರಕ್ತನಾಳಗಳ ಕಾರ್ಯವೈಖರಿಯನ್ನು ಹಾಳುಗೆಡವಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಆದರೆ, ಇಡೀ ಹಣ್ಣಿನಲ್ಲಿ ನಾರಿನಂಶ, ಪೋಟ್ಯಾಸಿಯಮ್, ಆಂಟಿಆಕ್ಸಿಡೆಂಟ್ಗಳು ಹಾಗೂ ಪಾಲಿಫಿನಾಲ್ಗಳಿರುತ್ತವೆ. ಪೊಟ್ಯಾಸಿಯಮ್ ದೇಹದಿಂದ ಹೆಚ್ಚುವರಿ ಸೋಡಿಯಂ ಹೊರಹಾಕಲು ನೆರವಾದರೆ, ಪಾಲಿಫಿನಾಲ್ಗಳು ರಕ್ತನಾಳಗಳ ಆರೋಗ್ಯವನ್ನು ಕಾಪಾಡುತ್ತವೆ. ಹೀಗಾಗಿ ಇಡೀ ಹಣ್ಣಿನ ಮೂಲಕ ದೇಹ ಸೇರುವ ಫ್ರಕ್ಟೋಸ್ ಯಾವುದೇ ಹೃದಯಸಂಬಂಧಿ ಅಪಾಯವನ್ನು ತರುವುದಿಲ್ಲ ಎಂದು ಅಧ್ಯಯನ ಹೇಳಿದೆ.
ಮಾರುಕಟ್ಟೆಯಲ್ಲಿ ಪ್ಯಾಕ್ ಮಾಡಿದ ಫ್ರೂಟ್ ಜ್ಯೂಸ್ಗಳು, ಸಿಹಿ ಹಾಲಿನ ಪಾನೀಯಗಳು ಹಾಗೂ ಸ್ಪೋರ್ಟ್ಸ್ ಡ್ರಿಂಕ್ಸ್ಗಳನ್ನು ಮಕ್ಕಳಿಗೆ ವ್ಯಾಪಕವಾಗಿ ನೀಡಲಾಗುತ್ತಿರುವ ಭಾರತದಂತಹ ದೇಶಗಳಿಗೆ ಈ ಅಧ್ಯಯನವು ಅತ್ಯಂತ ಪ್ರಸ್ತುತವಾಗಿದೆ. ಹಲವು ಪೋಷಕರು ಜ್ಯೂಸ್ಗಳನ್ನು ಪರ್ಯಾಯ ಆರೋಗ್ಯಕರ ಪಾನೀಯವೆಂದು ಪರಿಗಣಿಸುತ್ತಾರೆ. ಆದರೆ, 100%ರಷ್ಟು ನೈಸರ್ಗಿಕ ಜ್ಯೂಸ್ ಎಂದು ಬರೆದಿದ್ದರೂ, ಅದರಲ್ಲಿ ನೈಸರ್ಗಿಕ ಸಕ್ಕರೆ ಸಾಂದ್ರತೆ ಹೆಚ್ಚಿರುತ್ತದೆ ಮತ್ತು ನಾರಿನಂಶ ಇರುವುದಿಲ್ಲ. ಹಾಗಾಗಿ, ಇದನ್ನು ದಿನನಿತ್ಯದ ಆರೋಗ್ಯಕರ ಪಾನೀಯವೆಂದು ಕುಡಿಯುವುದರ ಬದಲಿಗೆ ಅಪರೂಪಕ್ಕೊಮ್ಮೆ ಕುಡಿಯುವ ಪಾನೀಯವಾಗಿ ಬಳಸಬೇಕು. ಮಕ್ಕಳಿಗೆ ನೀರಿನ ಜೊತೆಗೆ ಹಾಲನ್ನು ನೀಡುವುದು ಮತ್ತು ಸ್ನ್ಯಾಕ್ಸ್ ರೂಪದಲ್ಲಿ ಇಡೀ ಹಣ್ಣುಗಳನ್ನು ತಿನ್ನಲು ಪ್ರೋತ್ಸಾಹಿಸುವುದು ಉತ್ತಮ. ಬಾಲ್ಯದಲ್ಲಿ ರೂಢಿಸಿಕೊಂಡ ಇಂತಹ ಆರೋಗ್ಯಕರ ಆಹಾರ ಪದ್ಧತಿಗಳು ಮುಂದಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಮಗುವನ್ನು ಕಾಪಾಡುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.




