ಪ್ರತಿ ಪೀಳಿಗೆಯೂ ತನ್ನ ಕಾಲದ ಸವಾಲುಗಳಿಗೆ ತನ್ನದೇ ರೀತಿಯಲ್ಲಿ ಉತ್ತರ ನೀಡುತ್ತದೆ. ದೆಹಲಿಯ ಪ್ರತಿಭಟನೆ ಇಡೀ ʼಜೆನ್ ಝೀʼ ಪೀಳಿಗೆಯ ಪ್ರತಿನಿಧಿ ಎಂದು ಹೇಳುವುದು ಅತಿಶಯೋಕ್ತಿಯಾಗಬಹುದು. ಆದರೆ ಈ ಬೆಳವಣಿಗೆ, ಈ ಪೀಳಿಗೆಯ ಬಗ್ಗೆ ಸಮಾಜ ಕಟ್ಟಿಕೊಂಡಿದ್ದ ಹಲವು ಪೂರ್ವಗ್ರಹಗಳನ್ನು ಪ್ರಶ್ನಿಸುವ ಅವಕಾಶವನ್ನಂತೂ ಕೊಟ್ಟಿದೆ. ಬಹುಶಃ ಈ ಪೀಳಿಗೆಯನ್ನು ಮರುಪರಿಚಯಿಸಿಕೊಳ್ಳುವ ಸಮಯ ಬಂದಿದೆ. ಬದಲಾಗಬೇಕಿರುವುದು ʼಜೆನ್ ಝೀ ಅಲ್ಲʼ, ಅವರನ್ನು ನೋಡುವ ನಮ್ಮ ದೃಷ್ಟಿಕೋನ.
ಸಮಾಜದಲ್ಲಿ ಜೆನ್ ಝೀ ಕುರಿತು ಒಂದು ಸಾಮಾನ್ಯ ಕಲ್ಪನೆ ಇದೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಆಚೆಗೆ ಹೆಚ್ಚಿನ ಆಸಕ್ತಿ ತೋರದ, ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳಿಂದ ದೂರ ಉಳಿದಿರುವ, ಇಂಟರ್ನೆಟ್ ಬಳಸಿಕೊಂಡು ಕಾಲ ಕಳೆಯುವ ಪೀಳಿಗೆ ಇದು ಎಂಬುದೇ ಆ ಕಲ್ಪನೆ. ಆದರೆ ಈ ಪೀಳಿಗೆಯನ್ನು ಅದರ ಜೀವನಶೈಲಿಯಿಂದ ಅಳೆಯುವುದು ದೊಡ್ಡ ಮೂರ್ಖತನ ಎಂಬುದನ್ನು ದೆಹಲಿಯ ಬೆಳವಣಿಗೆಗಳು ಸಾಬೀತುಪಡಿಸಿವೆ. ಮೂರೊತ್ತು ಮೊಬೈಲ್ ಹಿಡಿದಿರುವ ಕೈಗಳು ಅಗತ್ಯ ಬಂದಾಗ ಪ್ರಶ್ನೆಗಳನ್ನೂ ಎತ್ತಬಲ್ಲವು ಎಂಬ ಹೊಸ ವ್ಯಾಖ್ಯಾನವನ್ನು ಜೆನ್ ಝೀಗಳೇ ಬರೆದುಕೊಳ್ಳುತ್ತಿರುವ ಈ ಬೆಳವಣಿಗೆಗಳು ಚರ್ಚೆಗೆ ಎಡೆ ಮಾಡಿಕೊಟ್ಟಿವೆ.
NEET ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ, ಅದರ ಸುತ್ತ ರೂಪುಗೊಂಡ ಯುವಜನರ ಆಕ್ರೋಶ, ಸೋನಂ ವಾಂಗ್ಚುಕ್ ಅವರ ಉಪವಾಸ ಹಾಗೂ ಸಿಜೆಪಿ ನೇತೃತ್ವದಲ್ಲಿ ಕಾವೇರಿರುವ ಹೋರಾಟ.. ಇವೆಲ್ಲವೂ ಯುವಕರ ಮೇಲಿದ್ದ ಹುಸಿ ಕಲ್ಪನೆಗಳ ಮಂಜಿನ ತೆರೆಯನ್ನ ನಿಧಾನವಾಗಿ ಸರಿಸುತ್ತಿವೆ. ಈ ಯುವಕರು ಮೊಬೈಲ್ ನಲ್ಲೇ ಮುಳುಗಿರುತ್ತಾರೆ, ಇವರಿಗೆ ಸಾಮಾಜಿಕ ಸಮಸ್ಯೆಗಳಿಗಿಂತ ರೀಲ್ಸ್, ಲೈಕ್ಸ್‌ಗಳೇ ಮುಖ್ಯ ಎಂದು ಭಾವಿಸಿದ್ದವರೇ, ಅಗತ್ಯ ಬಿದ್ದಾಗ ವ್ಯವಸ್ಥೆಯನ್ನು ಪ್ರಶ್ನಿಸಲು, ಅನ್ಯಾಯದ ವಿರುದ್ಧ ಹೋರಾಟ ಮಾಡಲು ಅವರು ಬೀದಿಗಿಳಿಯಬಲ್ಲರು ಎಂಬುದನ್ನು ಕಣ್ಣಾರೆ ಕಂಡು ದಂಗಾಗಿದ್ದಾರೆ!
ಈ ಬದಲಾದ ಮನಸ್ಥಿತಿಯ ಅತ್ಯಂತ ಸ್ಪಷ್ಟ ಅಭಿವ್ಯಕ್ತಿ ಸೋಮವಾರ ದೆಹಲಿಯ ‘ಸಂಸತ್ ಚಲೋ’ ಪ್ರತಿಭಟನೆಯಲ್ಲಿ ಕಂಡುಬಂತು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಾವಿರಾರು ವಿದ್ಯಾರ್ಥಿಗಳು, ಯುವಕರು ಹಾಗೂ ವಿವಿಧ ರಾಜ್ಯಗಳಿಂದ ಬಂದ ಪ್ರತಿಭಟನಾಕಾರರು ಸಂಸತ್ ಕಡೆಗೆ ಮೆರವಣಿಗೆ ನಡೆಸಿದರು. ಬ್ಯಾರಿಕೇಡ್‌ಗಳನ್ನು ಮುರಿದು ಮುಂದೆ ಸಾಗಲು ಯತ್ನಿಸಿದ ಪ್ರತಿಭಟನಾಕಾರರನ್ನು ತಡೆಯಲು ದೆಹಲಿ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು, ಲಾಠಿ ಪ್ರಹಾರ ನಡೆಸಿದರು ಮತ್ತು ಹಲವು ಕಡೆ ಬಲಪ್ರಯೋಗಕ್ಕೆ ಮುಂದಾದರು. ಕೆಲವೆಡೆ ಕಲ್ಲುತೂರಾಟವೂ ನಡೆದ ಪರಿಣಾಮ ಪರಿಸ್ಥಿತಿ ಉದ್ವಿಗ್ನಗೊಂಡಿತು. ನೂರಾರು ವಿದ್ಯಾರ್ಥಿಗಳು ಮತ್ತು ಯುವಕರು ಗಾಯಗೊಂಡರು. ಪೊಲೀಸರು ನಡೆದುಕೊಂಡ ರೀತಿಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕ್ರೋಶ ವ್ಯಕ್ತವಾಯಿತು.

ಜೆನ್ ಝೀ ಸುತ್ತ ಗಿರಕಿ ಹೊಡೆಯುತ್ತಿರುವ ಕೆಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮೊದಲು, ಜೆನ್ ಝೀ ಯುವಜನತೆ ಬಗ್ಗೆ ಸಮಾಜ ಕಟ್ಟಿಕೊಂಡಿರುವ ಕಲ್ಪನೆಯನ್ನು ಅರ್ಥಮಾಡಿಕೊಳ್ಳಬೇಕಿದೆ. ಸುಮಾರು 1997ರಿಂದ 2012ರ ನಡುವೆ ಜನಿಸಿದವರನ್ನು ಸಾಮಾನ್ಯವಾಗಿ ʼಜೆನ್ ಝೀʼ ಎಂದು ಕರೆಯಲಾಗುತ್ತದೆ. ಈ ಪೀಳಿಗೆಯ ವಿಶೇಷತೆ ಎಂದರೆ, ಇವರು ಡಿಜಿಟಲ್ ಜಗತ್ತನ್ನು ಕಂಡವರಲ್ಲ; ಡಿಜಿಟಲ್ ಜಗತ್ತಿನಲ್ಲೇ ಹುಟ್ಟಿದವರು. ಹಿಂದಿನ ಪೀಳಿಗೆಗಳು ಪತ್ರಿಕೆ, ರೇಡಿಯೊ, ದೂರದರ್ಶನದ ಮೂಲಕ ಮಾಹಿತಿ ಪಡೆಯುತ್ತಿದ್ದರೆ, ಜೆನ್ ಝೀ ಸ್ಮಾರ್ಟ್‌ಫೋನ್, ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಜಗತ್ತನ್ನು ಅರ್ಥಮಾಡಿಕೊಳ್ಳುತ್ತಿದೆ.
ಹಿಂದಿನ ಪೀಳಿಗೆಗಳ ರಾಜಕೀಯ ಚಟುವಟಿಕೆಗಳು ಭೌತಿಕ ಸ್ಥಳಗಳಲ್ಲಿ ನಡೆಯುತ್ತಿದ್ದವು. ವಿಶ್ವವಿದ್ಯಾಲಯದ ಆವರಣ, ವಿದ್ಯಾರ್ಥಿ ಸಂಘಟನೆಗಳ ಕಚೇರಿ, ಬೀದಿ ಸಭೆಗಳು, ಮೆರವಣಿಗೆಗಳು.. ಇವೇ ಸಂಘಟನೆಯ ಕೇಂದ್ರವಾಗಿದ್ದವು. ಆದರೆ ಇಂದಿನ ಯುವಜನರ ಸಂಘಟನೆಯ ಸ್ಥಳ ಮೊಬೈಲ್. ಒಂದು ಪೋಸ್ಟ್, ಒಂದು ವೈರಲ್ ವಿಡಿಯೊ, ಅಥವಾ ಒಂದು ಆನ್‌ಲೈನ್ ಸಮುದಾಯವೇ ಸಾವಿರಾರು ಜನರನ್ನು ಒಂದೇ ವಿಚಾರದ ಸುತ್ತ ಒಟ್ಟುಗೂಡಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಡಿಜಿಟಲ್ ಜೀವನ ಶೈಲಿ ಎಂದರೆ ರಾಜಕೀಯ ನಿರಾಸಕ್ತಿ ಎಂದರ್ಥವಲ್ಲ. ರಾಜಕೀಯದಲ್ಲಿ ಭಾಗವಹಿಸುವ ವಿಧಾನ ಮಾತ್ರ ಬದಲಾಗಿದೆ ಎಂದರ್ಥ.
ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆಯೂ ಟೀಕೆಗಳಿವೆ. ಅಲ್ಗಾರಿದಮ್‌ಗಳು ವ್ಯಕ್ತಿಯ ಆಸಕ್ತಿಗೆ ತಕ್ಕಂತೆ ಮಾಹಿತಿ ತೋರಿಸುತ್ತವೆ. ಇದರಿಂದ ಒಂದೇ ರೀತಿಯ ಅಭಿಪ್ರಾಯಗಳ ನಡುವೆ ಸಿಲುಕುವ ಅಪಾಯವಿದೆ. ವಿಭಿನ್ನ ಅಭಿಪ್ರಾಯಗಳನ್ನು ಕೇಳುವ ಅವಕಾಶ ಕಡಿಮೆಯಾಗಬಹುದು. ರಾಜಕೀಯ ಧ್ರುವೀಕರಣ ಹೆಚ್ಚಾಗಬಹುದು ಎಂಬ ವಾದವಿದೆ. ಆದರೆ ಇದೇ ವೇದಿಕೆ ಮತ್ತೊಂದು ರೀತಿಯ ಶಕ್ತಿಯನ್ನೂ ಹೊಂದಿದೆ. ಒಂದು ಸಣ್ಣ ಹಳ್ಳಿಯ ವಿದ್ಯಾರ್ಥಿಯ ಸಮಸ್ಯೆಯ ಫೋಟೋ, ಪರೀಕ್ಷಾ ಅಕ್ರಮದ ಒಂದು ವಿಡಿಯೋ ಅಥವಾ ಒಂದು ಅನ್ಯಾಯದ ದೃಶ್ಯ ಕೆಲವೇ ಗಂಟೆಗಳಲ್ಲಿ ದೇಶದ ಗಮನ ಸೆಳೆಯಬಹುದು. ಹಿಂದೆ ಒಂದು ಸಮಸ್ಯೆ ರಾಷ್ಟ್ರವ್ಯಾಪಿ ತಲುಪಲು ಪತ್ರಿಕೆಗಳು ಮತ್ತು ಮಾಧ್ಯಮ ಸಂಸ್ಥೆಗಳು ನಿರಂತರವಾಗಿ ಕೆಲಸ ಮಾಡಬೇಕಿತ್ತು. ಈಗ ಒಬ್ಬ ಸಾಮಾನ್ಯ ನಾಗರಿಕನ ಮೊಬೈಲ್ ಕ್ಯಾಮೆರಾ ಕೂಡ ಒಂದು ಚರ್ಚೆಯ ಕೇಂದ್ರವಾಗಬಹುದು.
ಭಾರತದ ವಿದ್ಯಾರ್ಥಿ ಚಳವಳಿಗಳ ಇತಿಹಾಸವನ್ನು ನೋಡಿದರೆ, ಯುವಕರು ಯಾವಾಗಲೂ ಸಾಮಾಜಿಕ ಬದಲಾವಣೆಯ ಪ್ರಮುಖ ಶಕ್ತಿಯಾಗಿದ್ದಾರೆ. 1970ರ ದಶಕದ ವಿದ್ಯಾರ್ಥಿ ಚಳವಳಿಗಳು ದೇಶದ ರಾಜಕೀಯದ ಮೇಲೆ ದೊಡ್ಡ ಪರಿಣಾಮ ಬೀರಿದವು. 2011ರ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲೂ ಯುವಜನರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿತ್ತು. 2012ರ ನಿರ್ಭಯ ಪ್ರಕರಣದ ನಂತರ ದೇಶದಾದ್ಯಂತ ನಡೆದ ಪ್ರತಿಭಟನೆಗಳು ಯುವಕರ ಸಾಮಾಜಿಕ ಸಂವೇದನೆಯನ್ನು ತೋರಿಸಿದ್ದವು. ಇಂದಿಗೂ ಹೋರಾಟ ಮುಂದುವರೆದಿದೆ. ಆದರೆ ಇಂದಿನ ಜೆನ್ ಝೀಯ ಹೋರಾಟದ ಸ್ವರೂಪ ಕೊಂಚ ವಿಭಿನ್ನವಾಗಿದೆಯಷ್ಟೇ. ಹಳೆಯ ಪೀಳಿಗೆಯ ಕೈಯಲ್ಲಿ ಕರಪತ್ರಗಳಿದ್ದವು; ಇಂದಿನವರ ಕೈಯಲ್ಲಿ ಸ್ಮಾರ್ಟ್‌ಫೋನ್ ಇದೆ.

ಜೆನ್ ಝೀ ಪೀಳಿಗೆಯ ರಾಜಕೀಯ ಪ್ರಜ್ಞೆಯನ್ನು ಅರ್ಥಮಾಡಿಕೊಳ್ಳುವಾಗ ಎದುರಾಗುವ ದೊಡ್ಡ ಸವಾಲೆಂದರೆ, ಅವರ ಪಾಲ್ಗೊಳ್ಳುವಿಕೆಯನ್ನು ಹಳೆಯ ಮಾನದಂಡಗಳಿಂದ ಅಳೆಯುವುದು. ಹಿಂದಿನ ತಲೆಮಾರುಗಳಲ್ಲಿ ರಾಜಕೀಯ ಚಟುವಟಿಕೆ ಎಂದರೆ ಒಂದು ಪಕ್ಷದೊಂದಿಗೆ ಗುರುತಿಸಿಕೊಳ್ಳುವುದು, ವಿದ್ಯಾರ್ಥಿ ಸಂಘಟನೆಯ ಭಾಗವಾಗುವುದು, ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಅಥವಾ ನಿರ್ದಿಷ್ಟ ಸಿದ್ಧಾಂತದ ಪರವಾಗಿ ನಿಲ್ಲುವುದು ಎಂದಿತ್ತು. ಆದರೆ ಇಂದಿನ ಯುವಜನರು ಯಾವಾಗಲೂ ಸಾಂಪ್ರದಾಯಿಕ ರಾಜಕೀಯ ಸಂಘಟನೆಗಳಿಗೆ, ಸಿದ್ಧಾಂತಗಳಿಗೆ ಜೋತು ಬೀಳದೆ, ತಮ್ಮ ಬದುಕಿನ ಮೇಲೆ ನೇರ ಪರಿಣಾಮ ಬೀರುವ ವಿಚಾರಗಳ ಸುತ್ತ ಅವರು ಒಗ್ಗೂಡುತ್ತಿದ್ದಾರೆ. ನೀಟ್ ಪರೀಕ್ಷೆಯ ವಿವಾದವನ್ನು ಇದೇ ಹಿನ್ನೆಲೆಯಲ್ಲಿ ನೋಡಬೇಕಾಗಿದೆ. ಇದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಬೆಸೆದುಕೊಂಡಿದ್ದ ಪ್ರಶ್ನೆಯಾಗಿತ್ತು. ಪರೀಕ್ಷೆಯ ವಿಶ್ವಾಸಾರ್ಹತೆ ಕುಸಿದಾಗ ಅವರಲ್ಲಿ ಆತಂಕ ಮತ್ತು ಅಸಮಾಧಾನ ಸಹಜವಾಗಿಯೇ ಉದ್ಭವವಾದವು. ವರ್ಷಗಳ ಕಾಲ ಓದಿ, ಕುಟುಂಬದ ನಿರೀಕ್ಷೆಗಳನ್ನು ಹೊತ್ತು ಪರೀಕ್ಷೆಗೆ ಸಿದ್ಧರಾಗುವ ವಿದ್ಯಾರ್ಥಿಗಳಿಗೆ, ವ್ಯವಸ್ಥೆಯಲ್ಲಿನ ಒಂದು ಲೋಪವೂ ವೈಯಕ್ತಿಕ ಅನ್ಯಾಯದ ಅನುಭವವನ್ನೇ ನೀಡುತ್ತದೆ.
ಇದೇ ಕಾರಣಕ್ಕೆ ದೆಹಲಿಯ ಪ್ರತಿಭಟನೆಯನ್ನು ರಾಜಕೀಯ ಘರ್ಷಣೆಯಾಗಿ ನೋಡುವುದು ಸರಿಯಲ್ಲ. ಅದರ ಹಿಂದೆ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆ, ಪರಿಶ್ರಮಕ್ಕೆ ಸಿಗಬೇಕಾದ ನ್ಯಾಯ, ಅವಕಾಶಗಳ ಸಮಾನತೆ ಮತ್ತು ಆಡಳಿತದ ಹೊಣೆಗಾರಿಕೆಯಂತಹ ಗಂಭೀರ ಪ್ರಶ್ನೆಗಳಿವೆ. ಯುವಕರು ಬೀದಿಗೆ ಬಂದದ್ದು, ತಮ್ಮ ಭವಿಷ್ಯವನ್ನು ನಿರ್ಧರಿಸುವ ವ್ಯವಸ್ಥೆಗಳು ಹೆಚ್ಚು ಪಾರದರ್ಶಕವಾಗಬೇಕು ಎಂಬ ಒತ್ತಾಯದೊಂದಿಗೆ.
ಸಾಮಾಜಿಕ ಜಾಲತಾಣಗಳ ಮತ್ತೊಂದು ಮುಖವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಹಿಂದೆ ಯಾವುದೇ ಸಮಸ್ಯೆ ಸಾರ್ವಜನಿಕ ಚರ್ಚೆಗೆ ಬರಬೇಕಾದರೆ ದೊಡ್ಡ ಮಾಧ್ಯಮ ಸಂಸ್ಥೆಗಳು ಅಥವಾ ಪ್ರಭಾವಿ ಸಂಘಟನೆಗಳ ಬೆಂಬಲ ಅಗತ್ಯವಿತ್ತು. ಇಂದು ಒಬ್ಬ ಸಾಮಾನ್ಯ ವಿದ್ಯಾರ್ಥಿಯ ಅನುಭವವೂ ಸಾವಿರಾರು ಜನರನ್ನು ತಲುಪಬಹುದು. ಹ್ಯಾಶ್‌ಟ್ಯಾಗ್ ಮೂಲಕವೂ ಸಮಸ್ಯೆ ರಾಷ್ಟ್ರಮಟ್ಟದ ಚರ್ಚೆಯಾಗಿ ಬದಲಾಗಬಹುದು. ಇದೇ ಡಿಜಿಟಲ್ ಯುಗದ ವಾಸ್ತವ. ತಂತ್ರಜ್ಞಾನ ಯುವಕರನ್ನು ನಿಷ್ಕ್ರಿಯರನ್ನಾಗಿ ಮಾಡಿದೆ ಎಂಬ ವಾದದ ಜೊತೆಗೆ, ಅದೇ ತಂತ್ರಜ್ಞಾನ ಅವರಿಗೆ ಧ್ವನಿಯನ್ನೂ ನೀಡಿದೆ ಎಂಬ ಸತ್ಯವನ್ನ ಒಪ್ಪಿಕೊಳ್ಳಬೇಕಿದೆ.
ಜತೆಗೆ ಡಿಜಿಟಲ್ ಬೆಂಬಲ ಯಾವಾಗಲೂ ನೈಜ ಬದಲಾವಣೆಗೆ ಕಾರಣವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಒಂದು ವಿಷಯ ಕೆಲ ದಿನಗಳ ಕಾಲ ಟ್ರೆಂಡ್ ಆಗಬಹುದು. ಜನರ ಗಮನ ಸೆಳೆಯಬಹುದು. ಆದರೆ ದೀರ್ಘಕಾಲದ ನೀತಿ ಬದಲಾವಣೆ ಅಥವಾ ಸಾಮಾಜಿಕ ಪರಿವರ್ತನೆಗೆ ನಿರಂತರ ಸಂಘಟನೆ ಮತ್ತು ಚರ್ಚೆ ಅಗತ್ಯ. ಜೆನ್ ಝೀ ಎದುರಿಸುತ್ತಿರುವ ದೊಡ್ಡ ಸವಾಲು ಇದೇ. ವೇಗವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯ ಅವರಲ್ಲಿದೆ. ಆದರೆ ಆ ಪ್ರತಿಕ್ರಿಯೆಯನ್ನು ದೀರ್ಘಕಾಲದ ಸಾಮಾಜಿಕ ಬದಲಾವಣೆಯಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಿದೆ.

ಭಾರತದ ಯುವಜನರ ಸಂಖ್ಯೆ ದೊಡ್ಡದು. ಮುಂದಿನ ವರ್ಷಗಳಲ್ಲಿ ಚುನಾವಣಾ ರಾಜಕೀಯದಲ್ಲೂ, ಸಾಮಾಜಿಕ ಚಳವಳಿಗಳಲ್ಲೂ ಜೆನ್ ಝೀ ಪ್ರಮುಖ ಪಾತ್ರ ವಹಿಸಲಿದೆ. ಆದರೆ ಅವರ ರಾಜಕೀಯ ಭಾಗವಹಿಸುವಿಕೆ ಹಿಂದಿನ ತಲೆಮಾರುಗಳಂತೆಯೇ ಇರಲಿದೆ ಎಂದು ನಿರೀಕ್ಷಿಸುವುದು ತಪ್ಪಾಗಬಹುದು. ಈ ಪೀಳಿಗೆ ವ್ಯಕ್ತಿಗಿಂತ ವಿಚಾರಕ್ಕೆ ಹೆಚ್ಚು ಪ್ರತಿಕ್ರಿಯಿಸುವ ಸಾಧ್ಯತೆ ಇದೆ. ಒಂದು ನಿರ್ದಿಷ್ಟ ಪಕ್ಷದೊಂದಿಗೆ ದೀರ್ಘಕಾಲದ ನಿಷ್ಠೆಗಿಂತ, ಒಂದು ನಿರ್ದಿಷ್ಟ ನೀತಿ ಅಥವಾ ಸಮಸ್ಯೆಯ ಆಧಾರದ ಮೇಲೆ ತಮ್ಮ ನಿಲುವು ರೂಪಿಸಿಕೊಳ್ಳಬಹುದು. ಉದ್ಯೋಗ, ಶಿಕ್ಷಣ, ಪರಿಸರ, ತಂತ್ರಜ್ಞಾನ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಮಾನ ಅವಕಾಶಗಳಂತಹ ವಿಷಯಗಳು ಇವರ ರಾಜಕೀಯ ಚರ್ಚೆಯ ಕೇಂದ್ರವಾಗಬಹುದು. ಇದರ ಪರಿಣಾಮವಾಗಿ ರಾಜಕೀಯ ಪಕ್ಷಗಳಿಗೂ ಹೊಸ ಸವಾಲು ಎದುರಾಗಬಹುದು. ಕೇವಲ ಭಾವನಾತ್ಮಕ ವಿಷಯಗಳ ಮೂಲಕ ಯುವಕರನ್ನು ಸೆಳೆಯುವುದು ಸಾಕಾಗದೇ ಇರಬಹುದು. ಅವರ ನೈಜ ಬದುಕಿನ ಸಮಸ್ಯೆಗಳಿಗೆ ಉತ್ತರ ನೀಡಬೇಕಾದ ಅನಿವಾರ್ಯತೆ ಹೆಚ್ಚಬಹುದು.
ಇದನ್ನೂ ಓದಿ: ಮಕ್ಕಳು ಕೇಳಿದ್ದು ಹೊಣೆಗಾರಿಕೆ, ಪ್ರಭುತ್ವ ನೀಡಿದ್ದು ಲಾಠಿ ಏಟು: ಇದು ಮೋದಿ ಆಡಳಿತ
ದೆಹಲಿ ಪ್ರತಿಭಟನೆಯಿಂದ ಇಡೀ ಜೆನ್ ಝೀ ಪೀಳಿಗೆ ರಾಜಕೀಯವಾಗಿ ಪ್ರಬುದ್ಧವಾಗಿದೆ ಎಂಬ ತೀರ್ಮಾನಕ್ಕೆ ಬರುವುದು ಅವಸರದ ಮಾತಾಗಬಹುದು. ಹಾಗೆಯೇ, ಈ ಪೀಳಿಗೆಗೆ ಸಾಮಾಜಿಕ ಪ್ರಜ್ಞೆಯೇ ಇಲ್ಲ ಎಂಬ ಹಳೆಯ ಕಲ್ಪನೆಯನ್ನೂ ಮುಂದುವರಿಸುವುದು ಸರಿಯಲ್ಲ. ಯಾವುದೇ ಪೀಳಿಗೆ ಏಕರೂಪವಾಗಿರುವುದಿಲ್ಲ. ಅದರಲ್ಲಿ ನಿರಾಸಕ್ತರೂ ಇರುತ್ತಾರೆ, ಬದಲಾವಣೆಯನ್ನು ಬಯಸುವವರೂ ಇರುತ್ತಾರೆ. ಕೆಲವರು ತಮ್ಮ ವೈಯಕ್ತಿಕ ಬದುಕಿನಲ್ಲೇ ಮುಳುಗಿರಬಹುದು; ಇನ್ನೂ ಕೆಲವರು ದೊಡ್ಡ ಪ್ರಶ್ನೆಗಳ ಬಗ್ಗೆ ಧ್ವನಿ ಎತ್ತಬಹುದು. ಮೊಬೈಲ್ ಬಳಕೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಯುವಕರಲ್ಲಿ ಸಾಮಾಜಿಕ ಪ್ರಜ್ಞೆ ಕಡಿಮೆಯಾಗಿದೆ ಎಂದು ನಿರ್ಧರಿಸಲಾಗುವುದಿಲ್ಲ. ಅವರ ಅಭಿವ್ಯಕ್ತಿಯ ಮಾಧ್ಯಮ ಬದಲಾಗಿದೆ. ಅವರ ಸಂಘಟನೆಯ ವಿಧಾನ ಬದಲಾಗಿದೆ. ಆದರೆ ಅನ್ಯಾಯದ ವಿರುದ್ಧ ಪ್ರತಿಕ್ರಿಯಿಸುವ ಗುಣವಲ್ಲ ಎಂಬ ಸಂಗತಿಯನ್ನ ದೆಹಲಿಯ ಬೆಳವಣಿಗೆ ಸ್ಪಷ್ಟಪಡಿಸಿದೆ.
ಪ್ರತಿ ಪೀಳಿಗೆಯೂ ತನ್ನ ಕಾಲದ ಸವಾಲುಗಳಿಗೆ ತನ್ನದೇ ರೀತಿಯಲ್ಲಿ ಉತ್ತರ ನೀಡುತ್ತದೆ. ದೆಹಲಿಯ ಪ್ರತಿಭಟನೆ ಇಡೀ ಜೆನ್ ಝೀ ಪೀಳಿಗೆಯ ಪ್ರತಿನಿಧಿ ಎಂದು ಹೇಳುವುದು ಅತಿಶಯೋಕ್ತಿಯಾಗಬಹುದು. ಆದರೆ ಈ ಬೆಳವಣಿಗೆ, ಈ ಪೀಳಿಗೆಯ ಬಗ್ಗೆ ಸಮಾಜ ಕಟ್ಟಿಕೊಂಡಿದ್ದ ಹಲವು ಪೂರ್ವಗ್ರಹಗಳನ್ನು ಪ್ರಶ್ನಿಸುವ ಅವಕಾಶವನ್ನಂತೂ ಕೊಟ್ಟಿದೆ. ಮೊಬೈಲ್, ರೀಲ್ಸ್, ಮೀಮ್ಸ್ ಮತ್ತು ಸಾಮಾಜಿಕ ಜಾಲತಾಣಗಳ ಜಗತ್ತಿನಲ್ಲೇ ಕಳೆದುಹೋಗಿದ್ದಾರೆ, ರಾಜಕೀಯ-ಸಾಮಾಜಿಕ ಪ್ರಜ್ಞೆ ಇಲ್ಲ, ಕೋಮುವಾದದ ಬಲಿಪಶುಗಳಾಗುತ್ತಿದ್ದಾರೆ ಎಂಬ ಹಣೆಪಟ್ಟಿ ಹೊತ್ತಿದ್ದ ಜೆನ್ ಝೀ, ತನ್ನ ಭವಿಷ್ಯ ಮತ್ತು ನ್ಯಾಯದ ಪ್ರಶ್ನೆ ಎದುರಾದಾಗ ಬೀದಿಗಿಳಿದು ವ್ಯವಸ್ಥೆಯನ್ನೇ ಪ್ರಶ್ನಿಸಬಲ್ಲದು ಎಂಬುದನ್ನು ತೋರಿಸಿದೆ. ಬಹುಶಃ ಈ ಪೀಳಿಗೆಯನ್ನು ಮರುಪರಿಚಯಿಸಿಕೊಳ್ಳುವ ಸಮಯ ಬಂದಿದೆ. ಬದಲಾಗಬೇಕಿರುವುದು ಜೆನ್ ಝೀ ಅಲ್ಲ; ಅವರನ್ನು ನೋಡುವ ನಮ್ಮ ದೃಷ್ಟಿಕೋನ.





