ರಾಹುಲ್ ಜನಿಸಿದಾಗ ಕುಮಾರ್ ದಂಪತಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ರಾಹುಲ್ ಹುಟ್ಟಿನಿಂದಲೇ ಸೀಳು ತುಟಿ ಮತ್ತು ಸೀಳು ಅಂಗುಳದೊಂದಿಗೆ ಜನಿಸಿದ್ದನು. ಆದರೆ, ಈಗ ಮುಂದುವರಿದಿರುವ ವಿಜ್ಞಾನ ಯುಗದಲ್ಲಿ ಭರವಸೆ ಇಟ್ಟ ಅವರು ತಮ್ಮ ಮಗನಿಗೆ ಸೂಕ್ತ ಚಿಕಿತ್ಸೆ ನೀಡಲು ಅಣಿಯಾದರು. ಫಲವಾಗಿ ರಾಹುಲ್ ಮೂರು ತಿಂಗಳಿನವನಿದ್ದಾಗ ಸೀಳು ತುಟಿಯ ಶಸ್ತ್ರಚಿಕಿತ್ಸೆ ಮಾಡಿ ಜೋಡಿಸಲಾಯಿತು. ಒಂದು ವರ್ಷದ ಬಳಿಕ ಅಂಗುಳದ ಶಸ್ತ್ರಚಿಕಿತ್ಸೆಯೂ ಮಾಡಲಾಯಿತು. ಇನ್ನು ತಮ್ಮ ಮಗ ಸಾಮಾನ್ಯ ಮಕ್ಕಳಂತೆ ತಿಂದುಂಡು ಮಾತನಾಡುತ್ತಾ ಬೆಳೆಯುತ್ತಾನೆ ಎಂದು ಕುಮಾರ್ ದಂಪತಿ ಈಗ ನಿರಾಳರಾಗಿದ್ದರು.
“ನಮ್ಮ ಮಗನ ಶಸ್ತ್ರಚಿಕಿತ್ಸೆಗಳೆರಡೂ ಆಗಿದೆ. ಈಗ ನಮ್ಮ ಮಗ ಮಾತನಾಡುತ್ತಾನಲ್ವಾ?” ಎಂದು ಕುಮಾರ್‌ರವರ ಪತ್ನಿ ಗಂಡನ ಬಳಿ ಕೌತುಕರಾಗಿ ಕೇಳಿದರು. ಅದಕ್ಕೆ ಹೌದೆಂಬಂತೆ ಕುಮಾರ್ ತಲೆಯಾಡಿಸಿದರು. ಇದನ್ನು ಕಂಡ ಪ್ಲಾಸ್ಟಿಕ್ ಸರ್ಜನ್ ರಾಹುಲ್‌ನ ಶಸ್ತ್ರಚಿಕಿತ್ಸೆಯ ಬಳಿಕ ಮಾತಿನ ತರಬೇತಿಗಾಗಿ ಸ್ಪೀಚ್ ಥೆರಪಿ ವಿಭಾಗದಲ್ಲಿ ಭೇಟಿ ನೀಡುವಂತೆ ಹೇಳಿದರು. ದಂಪತಿಗಳು ಆತಂಕದಿಂದ ತಲೆ ಅಲ್ಲಾಡಿಸಿ, ವೈದ್ಯರು ಹೇಳಿದಂತೆ ಸ್ಪೀಚ್ ಥೆರಪಿಗಾಗಿ ಡಾ. ಅನಿಶಾರವರ ಬಳಿ ತೆರಳಿದರು.
ಡಾ.ಅನಿಶಾರಿಗೆ ಕುಮಾರ್ ದಂಪತಿಗಳ ಆತಂಕದ ಅರಿವಾಯ್ತು. “ರಾಹುಲ್ ಸರ್ಜರಿಯಾದ ಬಳಿಕವೂ ಸ್ಪೀಚ್ ಥೆರಪಿ ಯಾಕೆ ಬೇಕೆಂದು ನೀವು ಆತಂಕ ಪಡುತ್ತಿದ್ದೀರಲ್ಲವೇ!” ಎಂದು ನಿಧಾನವಾಗಿ ಅವರೊಂದಿಗೆ ಸಂಭಾಷಣೆಗಿಳಿದರು.
ಸರ್ಜರಿ ಮಾಡಿಯಾಗಿದೆಯಲ್ವಾ ಇನ್ನೇಕೆ ರಾಹುಲ್‌ಗೆ ಸ್ಪೀಚ್ ಥೆರಪಿ ಬೇಕು? ಸರ್ಜರಿ ಆದ ಬಳಿಕ ನಮ್ಮ ಮಗು ಮಾತಾಡುವುದಿಲ್ಲವೇ? ಎಂದು ಕುಮಾರ್ ಆತಂಕದಿಂದ ಡಾ. ಅನಿಶಾರನ್ನು ಪ್ರಶ್ನಿಸಿದರು.
ನಸುನಕ್ಕ ಡಾ. ಅನಿಶಾ, “ಆತಂಕ ಪಡಬೇಡಿ. ಸರ್ಜರಿಯಿಂದ ಮಗುವಿನ ಬೆಳವಣಿಗೆ ಹಾಗೂ ದೈಹಿಕ ಬೇಡಿಕೆಗಳು ಪೂರ್ಣವಾಗಿವೆ. ಆದರೆ, ಸ್ಪೀಚ್ ಥೆರಪಿ ಮಾಡುವುದರಿಂದ ಸೀಳು ತುಟಿ ಮತ್ತು ಅಂಗುಳಿನ ಸ್ಥಿತಿಯಲ್ಲಿದ್ದಾಗ ಮಗು ಮಾತಾಡುತ್ತಿದ್ದ ರೀತಿಯನ್ನು ಸರಿಪಡಿಸಲು ಹಾಗೂ ಮಗುವಿಗೆ ಸ್ಪಷ್ಟವಾಗಿ ಮಾತನಾಡುವುದಕ್ಕೆ ತರಬೇತಿ ನೀಡಲು ಸ್ಪೀಚ್ ಥೆರಪಿ ಅತ್ಯಗತ್ಯ. ಒಂದು ವೇಳೆ, ಸರ್ಜರಿ ಆಗಿದೆ ಎಂದು ನೀವು ಸ್ಪೀಚ್ ಥೆರಪಿ ನೀಡದೇ ಹೋದಲ್ಲಿ ಮಗುವಿಗೆ ಸ್ಪಷ್ಟವಾಗಿ ಮಾತಾಡಲು ಕಷ್ಟವಾಗಬಹುದು ಅಥವಾ ಸ್ಪಷ್ಟವಾಗಿ ಉಚ್ಛಾರ ಮಾಡಲು ಮಗುವಿಗೆ ಸಾಧ್ಯವಾಗದೇ ಹೋಗಬಹುದು” ಎಂದು ಅವರಿಗೆ ತಿಳಿಸಿ ಹೇಳಿದರು.
“ಆದರೆ, ಮಗು ಇನ್ನು ಎಳೆಯ ಪ್ರಾಯದವನು. ಒಂದಿಷ್ಟು ದೊಡ್ಡವನಾಗುವವರೆಗೆ ಕಾದು ನೋಡಿದರೆ ಅವನು ಮಾತಾಡಿಯಾನು. ನನ್ನ ಚಿಕ್ಕಪ್ಪ ಬಹಳ ತಡವಾಗಿ ಮಾತಾಡಲು ಆರಂಭಿಸಿದ್ದರೆಂದು ನನ್ನ ಅಜ್ಜಿ ಹೇಳುತ್ತಿದ್ದರು. ಹಾಗಿರುವಾಗ ರಾಹುಲ್ ಕೂಡ ಒಂದಿಷ್ಟು ದೊಡ್ಡವನಾದರೆ ಮಾತಾಡಿಯಾನು ಅಲ್ಲವೇ?” ಎಂದು ಕುಮಾರ್ ಪ್ರಶ್ನಿಸಿದರು.
“ಹೌದು. ರಾಹುಲ್ ಮುಂಬರುವ ದಿನಗಳಲ್ಲಿ ಮಾತಾಡಬಹುದು. ಆದರೆ, ಆತನ ಮಾತು ಸ್ಪಷ್ಟವಾಗಿಯೇ ಇರುವುದೆಂದು ಹೇಳಲಾಗದು. ಆದರೆ, ಸ್ಪೀಚ್ ಥೆರಪಿ ಮಾಡುವುದರಿಂದ ಮಾತಿನಲ್ಲಿ ಸ್ಪಷ್ಟತೆಯನ್ನು ತರಬಹುದು. ಈ ಥೆರಪಿಯಿಂದ ಆತನ ದೈಹಿಕ ಬೆಳವಣಿಗೆಯ ಜೊತೆಗೆ ಮಾತಿನ ಕೌಶಲ್ಯವೂ ಬೆಳೆಯುವುದು”. ಎಂದು ಡಾ. ಅನಿಶಾ ಹೆತ್ತವರ ಆತಂಕವನ್ನು ನೀಗಿಸುತ್ತಾ ಮಾತಾಡತೊಡಗಿದರು.
“ಮಾತು ಹಾಗೂ ಭಾಷಾ ತರಬೇತಿಯು ಆರಂಭಿಕ ಹಸ್ತಕ್ಷೇಪದ ಕೀಲಿಕೈ ಇದ್ದಂತೆ. ಎಷ್ಟು ಬೇಗ ನಾವು ಆರಂಭಿಸುತ್ತೇವೋ ಅಷ್ಟೇ ಉತ್ತಮ ಫಲಿತಾಂಶ ಪಡೆಯುತ್ತೇವೆ. ಸೀಳು ತುಟಿಯನ್ನು ಹೊಂದಿದ ಮಕ್ಕಳಿಗೆ ಸರ್ಜರಿಗೂ ಮೊದಲಿನಿಂದಲೇ ಸ್ಪೀಚ್ ಥೆರಪಿ ನೀಡಲಾಗುತ್ತದೆ. ಹೆಚ್ಚಿನ ಬಾರಿ ಈ ಸ್ಪೀಚ್ ಥೆರಪಿಯನ್ನು ತಾಯಂದಿರಿಗೆ/ ಹೆತ್ತವರಿಗೆ ತರಬೇತಿ ನೀಡುವ ಮೂಲಕ ನೀಡಲಾಗುತ್ತದೆ. ಮಗುವಿನ ಸರ್ಜರಿಯ ಅವಧಿಯವರೆಗೂ ಹೆತ್ತವರೇ ಸ್ಪೀಚ್ ಥೆರಪಿಸ್ಟ್ ಹೇಳಿದಂತೆ ಮಗುವಿಗೆ ಮನೆಯಲ್ಲಿ ಮಾತುಗಾರಿಕೆಯ ವಾತಾವರಣ ನಿರ್ಮಿಸಲು ಪ್ರೋತ್ಸಾಹಿಸಲಾಗುತ್ತದೆ. ಇದರಿಂದಾಗಿ ಮಗುವಿನ ವಯಸ್ಸಿಗೆ ತಕ್ಕಂತೆ ಆತನ ಭಾಷಾ ಕೌಶಲ್ಯವೂ ಅಭಿವೃದ್ಧಿಯಾಗುತ್ತದೆ. ಈಗ ರಾಹುಲ್ ಬಹಳ ಮೆಲ್ಲನೆ ಮಾತಾಡುತ್ತಿರಬಹುದು. ಆದ್ರೆ ಆತನಿಗೆ ಸರಿಯಾಗಿ ಸ್ಪೀಚ್ ಥೆರಪಿ ನೀಡಿದಲ್ಲಿ ಈ ಸಮಸ್ಯೆಯನ್ನು ಹೋಗಲಾಡಿಸಿ ಆತನ ಮಾತಿನಲ್ಲಿ ಸ್ಪಷ್ಟತೆ ಬರುವಂತೆ ಮಾಡಬಹುದು. ಕೇವಲ ಕಷ್ಟಸಾಧ್ಯವಾದ ಘಟನೆಗಳಿಗೆ ನಾವು ಸ್ಪೀಚ್ ಥೆರಪಿ ಕೊಡಬೇಕು ಎಂದಲ್ಲ, ಬದಲಾಗಿ ಸಣ್ಣ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಕಂಡುಕೊಂಡರೆ ಅವು ಮುಂದೊಂದು ದಿನ ಕ್ಲಿಷ್ಟವಾಗುವುದಿಲ್ಲ. ನಾವು ಹೇಳುತ್ತಿರುವುದು ನಿಮಗೆ ಅರ್ಥ ಆಗ್ತಾ ಇದೆ ಎಂದು ಭಾವಿಸ್ತೇನೆ…” ಎಂದು ಡಾ. ಅನಿಶಾ ಹೆತ್ತವರನ್ನು ನೋಡಿ ಮೆಲ್ಲನೆ ಪ್ರಶ್ನಿಸಿದರು. ಹೆತ್ತವರು ಹೌದೆಂಬಂತೆ ತಲೆಯಾಡಿಸಿದರು.
ಡಾ. ಅನುಶಾ ಮುಂದುವರೆದು “ಸಾಮಾನ್ಯವಾಗಿ ಹೆತ್ತವರು ತಮ್ಮ ಮಗು ನೈಸರ್ಗಿಕವಾಗಿ ಯಾರ ಸಹಾಯವೂ ಇಲ್ಲದೇ ಸಾಮಾನ್ಯರಂತೆ ಮಾತಾಡ್ತಾನೆ ಬಿಡು. ಸ್ಪೀಚ್ ಥೆರಪಿ ಏನೂ ಬೇಡ ಎಂದುಕೊಳ್ಳುತ್ತಾರೆ. ಆದ್ರೆ ಸ್ಪೀಚ್ ಥೆರಪಿ ಮಾಡುವುದರಿಂದ ಆತನ ಮಾತುಗಾರಿಕೆಯ ಮೈಲುಗಲ್ಲುಗಳು ತಪ್ಪಿ ಹೋಗುವುದಿಲ್ಲ. ಇಂತಿಷ್ಟೇ ಅವಧಿಯಲ್ಲೇ ಮಗು ಇಷ್ಟೇ ಮಾತಾಡಬೇಕು ಎಂದು ಹೇಳುವ ಈ ಮೈಲುಗಲ್ಲನ್ನು ಸರಿಯಾಗಿ ಕಲಿಯಲು ಮಗುವಿಗೆ ಸ್ಪೀಚ್ ಥೆರಪಿಯ ಅಗತ್ಯತೆ ಇದೆ. ಇದು ರಾಹುಲ್‌ನ ವಿಷಯದಲ್ಲಿಯೂ ಹೀಗಯೇ ಇದೆ. ರಾಹುಲ್ ಸ್ಪೀಚ್ ಥೆರಪಿ ಪಡೆಯುವುದರಿಂದ ಆತನಿಗೆ ಮಾತಾಡಲು ಬೇಕಾಗುವ ಸಹಾಯ ಖಂಡಿತ ಸಿಗುತ್ತದೆ” ಎಂದರು.
ಕುಮಾರ್‌ರವರ ಪತ್ನಿ ಒಂದಿಷ್ಟು ಕ್ರಿಯಾಶೀಲರಾದರು. ಅವರು ಕೂಡಲೇ, “ಡಾಕ್ಟರ್…ಸ್ಪೀಚ್ ಥೆರಪಿ ಮಾಡದಿದ್ದರೇ ರಾಹುಲ್‌ನ ಮಾತುಗಾರಿಕೆಯಲ್ಲಿ ತೊಂದರೆಗಳು ಎದುರಾಗ್ಬಹುದು ಅಂತ ನೀವು ಹೇಳ್ತಾ ಇದ್ದೀರಲ್ವಾ? ಒಂದು ವೇಳೆ ಥೆರಪಿ ಮಾಡಿದ್ರೆ ಆ ಸಮಸ್ಯೆ ನಿವಾರಣೆಯಾಗುತ್ತಾ? ಅವನ ಬೆಳವಣಿಗೆಯ ಹಂತಗಳಿಗೆ ತಕ್ಕ ಹಾಗೆ ಸ್ಪೀಚ್ ಥೆರಪಿ ಕೊಡಬೇಕಾದ ಅಗತ್ಯತೆ ಇದೆಯೇ? ಅಥವಾ ವರ್ಷಗಳೇ ಬೇಕಾಗ್ಬಹುದಾ?” ಎಂದು ಮುಂದಾಲೋಚನೆಯೊಂದಿಗೆ ಪ್ರಶ್ನಿಸಿದರು.
“ಖಂಡಿತವಾಗಿಯೂ…” ಎಂದ ಡಾ. ಅನೀಶಾ ಅವರಿಗೆ ಭರವಸೆ ನೀಡಿದರು.
“ಕೆಲವು ಪೋಷಕರು ಸೀಳು ತುಟಿ/ಅಂಗುಳಿನ ಶಸ್ತ್ರಚಿಕಿತ್ಸೆಯ ಬಳಿಕ ತಮ್ಮ ಮಗು ಬೆಳೆದು ದೊಡ್ಡದಾದಂತೆ ಸಾಮಾನ್ಯರ ಹಾಗೆ ಮಾತಾಡಬಹುದು ಎಂದುಕೊಳ್ಳುತ್ತಾರೆ. ಇನ್ನು ಕೆಲವು ಪೋಷಕರು ತಮ್ಮ ಮಗುವಿನ ಶಸ್ತ್ರಚಿಕಿತ್ಸೆಯ ಬಳಿಕವು ಮಾತಾಡಲು ಸಮರ್ಥವಾಗುವುದೋ ಇಲ್ಲವೋ ಎಂಬ ಸಂಶಯವನ್ನು ಹೊಂದಿರುತ್ತಾರೆ. ಆದರೆ, ಸ್ಪೀಚ್ ಥೆರಪಿ ಮಾಡುವುದರಿಂದ ಯಾವುದೇ ವಯಸ್ಸಿನಲ್ಲಿಯೂ ಮಾತಿನ ನಿಖರತೆ ಮತ್ತು ಸ್ಪಷ್ಟತೆಯನ್ನು ತರಬೇತುಗೊಳಿಸಲು ಸಾಧ್ಯವಿದೆ. ಹಾಗಾಗಿ ಎಷ್ಟು ಬೇಗ ಆರಂಭಿಸುತ್ತೀರೋ ಅಷ್ಟೇ ಪ್ರಯೋಜನ ಇದರಿಂದ ಲಭಿಸುತ್ತದೆ. ನಮ್ಮಲ್ಲಿ ಥೆರಪಿ ಪಡೆದ ಹಲವು ಮಕ್ಕಳು ಇದರಿಂದ ಪ್ರಯೋಜನ ಪಡೆದುಕೊಂಡಿದ್ದಾರೆ” ಎಂದರು.
“ಸ್ಪೀಚ್ ಥೆರಪಿ ಅಷ್ಟೊಂದು ಪರಿಣಾಮಕಾರಿಯೇ? ನಾವು ಸ್ಪೀಚ್ ಥೆರಪಿಯ ಬಗ್ಗೆ ಮಿಶ್ರ ಅಭಿಪ್ರಾಯ ಹೊಂದಿರುವುದನ್ನು ಕೇಳಿದ್ದೇವೆ. ಕೆಲವರು ಪ್ರಯೋಜನವಿಲ್ಲ ಎನ್ನುತ್ತಾರೆ. ಇನ್ನು ಕೆಲವರು ತುಂಬಾ ಒಳ್ಳೆಯದು ಅನ್ನುತ್ತಾರೆ? ಯಾವುದನ್ನು ನಂಬಬೇಕು!”ಎಂದು ಕುಮಾರ್ ಪ್ರಶ್ನಿಸಿದರು.
“ಖಂಡಿತ. ಇದು ತುಂಬಾ ಪರಿಣಾಮಕಾರಿಯಾಗಿದೆ” ಎಂದು ಡಾ.ಅನಿಶಾ ಆತ್ಮವಿಶ್ವಾಸದಿಂದ ಹೇಳಿದರು.
“ನಿರಂತರ ಸ್ಪೀಚ್ ಥೆರಪಿ ಮತ್ತು ಪೋಷಕರ ಒಳಗೊಳ್ಳುವಿಕೆಯೊಂದಿಗೆ, ಸೀಳು ಹೊಂದಿರುವ ಮಕ್ಕಳಲ್ಲಿ ಅತ್ಯುತ್ತಮ ಮಾತುಗಾರಿಕೆಯ ಫಲಿತಾಂಶಗಳನ್ನು ಸಾಧಿಸಬಹುದು. ಇನ್ನು ನಿಮ್ಮ ಅನುಮಾನಗಳನ್ನು ನಿವಾರಿಸಲು ಈಗಾಲೇ ಥೆರಪಿ ಪಡೆದು ಯಶಸ್ವಿಯಾದವರ ಬಗ್ಗೆ ನಿಮಗೆ ಮಾಹಿತಿ ನೀಡಬಲ್ಲೆ” ಎಂದರು. ಅಂತಿಮವಾಗಿ ಡಾ. ಅನಿಶಾ, ಕುಮಾರ್ ದಂಪತಿಗಳಿಗೆ ಕಾಳಜಿಪೂರ್ಣವಾದ ಮಾತುಗಳನ್ನಾಡಿದರು.
“ಹಣಕಾಸಿನ ಸಮಸ್ಯೆ ಮತ್ತು ಥೆರಪಿಯನ್ನು ಪಡೆಯಲು ಸುಲಭಲಭ್ಯತೆಯ ಸಮಸ್ಯೆಗಳು ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿರುವವರಿಗೆ ಬಹುದೊಡ್ಡ ಸವಾಲಾಗಿವೆ ಎಂಬುದು ನನಗೆ ತಿಳಿದಿದೆ. ಆದರೆ ಈ ವಿಷಯದಲ್ಲಿ ನಿಮ್ಮೆಲ್ಲರಿಗೂ ಸಹಾಯ ಮಾಡುವ ಕಾರ್ಯಕ್ರಮಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಇವೆ. ನಾವು ಆ ಆಯ್ಕೆಗಳನ್ನು ಒಟ್ಟಿಗೆ ಸೇರಿ ಹುಡುಕೋಣಾ” ಹೆತ್ತವರಿಗೆ ಬಲ ತುಂಬಿದರು.
ಕುಮಾರ್‌ರವರು ಎಲ್ಲ ವಿಷಯವನ್ನು ಒಂದಿಷ್ಟು ಹೊತ್ತು ಆಲೋಚಿಸಿ ಒಂದು ಕ್ಷಣ ಮೌನವಾದರು. “ಹಾಗಾದರೆ, ನಾವು ಈಗ ಏನು ಮಾಡಬೇಕು?” ಎಂದು ಕೇಳಿದರು.
“ನಾವು ನಿರಂತರ ಸಮಾಲೋಚನೆಗಳೊಂದಿಗೆ ಸ್ಪೀಚ್ ಥೆರಪಿಯನ್ನು ಪ್ರಾರಂಭಿಸೋಣಾ” ಎಂದು ಡಾ.ಅನಿಶಾ ಹೇಳಿದರು. “ನಿಮ್ಮ ದೈನಂದಿನ ದಿನಚರಿಯಲ್ಲಿ ಸ್ಪೀಚ್ ಥೆರಪಿಯನ್ನು ಹೇಗೆ ಅಳವಡಿಸಿಕೊಳ್ಳುವುದು ಎಂಬುದರ ಕುರಿತು ನಾನು ನಿಮಗೆ ತರಬೇತಿ ನೀಡುತ್ತೇನೆ. ಈ ರೀತಿಯಾಗಿ, ಭಾಷಾ ಸಮೃದ್ಧ ವಾತಾವರಣದಲ್ಲಿ ರಾಹುಲ್ ಪ್ರಯೋಜನವನ್ನು ಪಡೆಯಬಹುದು. ಅಲ್ಲದೇ, ಮಾತಿನ ಉಚ್ಛಾರಣೆಗೆ ನಿಮ್ಮನ್ನೇ ಉತ್ತಮ ಮಾದರಿಯಾಗಿ ಕಂಡುಕೊಳ್ಳಬಹುದು” ಎಂದರು.
“ಸ್ಪೀಚ್ ಥೆರಪಿ ದೀರ್ಘಾವಧಿಯ ಬದ್ಧತೆಯಾಗಿದೆ. ಮಗುವಿಗೆ ಉತ್ತಮ ಸಂವಹನ ಕೌಶಲಗಳನ್ನು ಕರಗತ ಮಾಡಿಕೊಳ್ಳಲು ನಿಯಮಿತ ಭಾಷಾ ಪ್ರಚೋದನೆ ಮತ್ತು ಮಾತಿನ ಉಚ್ಛಾರಣಾ ತರಬೇತಿ ಅತ್ಯಗತ್ಯ. ಉತ್ತಮ ಫಲಿತಾಂಶಕ್ಕಾಗಿ ಪೋಷಕರು, ಶಿಕ್ಷಕರು, ಕುಟುಂಬದ ಇತರ ಸದಸ್ಯರು ಮತ್ತು ಸ್ನೇಹಿತರು ಎಲ್ಲರೂ ತೊಡಗಿಸಿಕೊಳ್ಳಬೇಕು. ಈಗ ರಾಹುಲ್ ಸ್ಪಷ್ಟವಾಗಿ ಮಾತಾಡಲು ನಿಮ್ಮ ಪ್ರೋತ್ಸಾಹ ಮತ್ತು ಬೆಂಬಲದ ಅಗತ್ಯತೆ ಇದೆ” ಎಂದು ಡಾ. ಅನಿಶಾ ಕುಮಾರ್ ದಂಪತಿಗೆ ಮನವರಿಕೆ ಮಾಡಿದರು.
ಈ ಹೊಸ ಅರಿವಿನೊಂದಿಗೆ, ಕುಮಾರ್ ದಂಪತಿ ಕ್ಲಿನಿಕ್‌ನಿಂದ ಆಶಾದಾಯಕವಾಗಿ ಮತ್ತು ದೃಢನಿಶ್ಚಯದಿಂದ ಹೊರ ನಡೆದರು. ಮಗನ ಸ್ಪಷ್ಟ ಮಾತುಗಾರಿಕೆಯತ್ತ ತಮ್ಮ ಪ್ರಯಾಣವು ಈಗಷ್ಟೇ ಆರಂಭವಾಗುತ್ತಿದೆ ಎಂಬುದನ್ನು ಅವರು ಅರಿತುಕೊಂಡರು. ಸರಿಯಾದ ಬೆಂಬಲ ಹಾಗೂ ತರಬೇತಿ ಲಭಿಸಿದರೆ ರಾಹುಲ್‌ಗೆ ಸ್ಪಷ್ಟವಾಗಿ ಮತ್ತು ಆತ್ಮವಿಶ್ವಾಸದಿಂದ ಮಾತನಾಡುತ್ತಾನೆ ಎಂಬುದನ್ನು ಅರಿತುಕೊಂಡರು.
ಜುಲೈ ತಿಂಗಳನ್ನು ರಾಷ್ಟ್ರೀಯ ಸೀಳು ಮತ್ತು ಕ್ರೋನಿಯೊಫೇಶಿಯಲ್ ಜಾಗೃತಿ ಮತ್ತು ತಡೆಗಟ್ಟುವಿಕೆ ತಿಂಗಳನ್ನಾಗಿ ಆಚರಿಸಲಾಗುತ್ತದೆ. ಈ ಕುರಿತು ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸಲು ಮತ್ತು ಓರೊಫೇಶಿಯಲ್ ಸೀಳುಗಳು(ತುಟಿ ಹಾಗೂ ಅಂಗುಳಿನ ಸೀಳುಗಳು ಸೇರಿದಂತೆ) ಮತ್ತು ತಲೆ ಮತ್ತು ಮುಖದ ಮೇಲೆ ಪರಿಣಾಮ ಬೀರುವ ಇತರ ಸಂಬಂಧಿತ ಪರಿಸ್ಥಿತಿಗಳ ತಿಳುವಳಿಕೆಯನ್ನು ಹೆಚ್ಚಿಸಲು ಈ ತಿಂಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ನೀವು ಅಥವಾ ನಿಮ್ಮ ಮಗು ಸೀಳು ತುಟಿ ಅಥವಾ ವಯೋ ಸಹಜ ಸಂವಹನದಲ್ಲಿನ ಯಾವುದೇ ಸವಾಲುಗಳನ್ನು ಎದುರಿಸುತ್ತಿದ್ದರೆ, ಅದನ್ನು ಸುಧಾರಿಸಲು ದಯವಿಟ್ಟು ನಿಮ್ಮ ಹತ್ತಿರದ ವಾಕ್-ಭಾಷಾಶಾಸ್ತ್ರಜ್ಞರನ್ನು ಸಂಪರ್ಕಿಸಿ. ಈ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ಪ್ರಚಾರ ಮಾಡಿ ಮತ್ತು ಸಾಮಾನ್ಯ ಜನರಲ್ಲಿ ಸೀಳು ಮತ್ತು ಕ್ರಾನಿಯೊಫೇಶಿಯಲ್ ವೈಪರೀತ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿ. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ನಾವೆಲ್ಲರೂ ಸೇರಿ, ಸೀಳು ಮಾತಿನಿಂದ ಸ್ಪಷ್ಟ ಮಾತಿನೆಡೆಗೆ ಕರೆದೊಯ್ಯೋಣ.
ದೀಪ್ತಿ ಕೆ.ಜೆ, ಪ್ರಾಧ್ಯಾಪಕರು,
ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್, ಮಂಗಳೂರು