ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಆತ್ಮವಿಶ್ವಾಸ ತುಂಬುವ ಅಗತ್ಯವಿದೆ. ಶಸ್ತ್ರಚಿಕಿತ್ಸೆಗಳ ಕುರಿತು ಉಚಿತವಾಗಿ 2ನೇ ವೈದ್ಯಕೀಯ ಅಭಿಪ್ರಾಯ ಪಡೆಯಲು ಅವಕಾಶ ನೀಡಲಾಗುತ್ತದೆ. ಅದಕ್ಕಾಗಿ, ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿ 1800 4258 330 ಸಹಾಯವಾಣಿ ತೆರೆಯಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
“ಸರ್ಜರಿಗಳ ಅವಶ್ಯಕತೆ ಇದೆಯೋ, ಇಲ್ಲವೋ ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲಗಳಿರುತ್ತವೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆಗಳ ಅಗತ್ಯತೆ ಇರುವುದಿಲ್ಲ. ಇಂಥಹ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ನುರಿತ ತಜ್ಞ ವೈದ್ಯರಿಂದ ಎರಡನೇ ವೈದ್ಯಕೀಯ ಅಭಿಪ್ರಾಯ ಮುಖ್ಯ. ಕ್ಷಿಷ್ಟಕರ ಶಸ್ತ್ರಚಿಕಿತ್ಸೆಗಳ ಕುರಿತು ಸಾರ್ವಜನಿಕರು ತಜ್ಞ ವೈದ್ಯರಿಂದ ಸೂಕ್ತ ವೈದ್ಯಕೀಯ ಮಾಹಿತಿ ಪಡೆಯಲು ‘ಉಚಿತ ಎರಡನೇ ವೈದ್ಯಕೀಯ ಅಭಿಪ್ರಾಯ’ ಕಾರ್ಯಕ್ರಮ ರೂಪಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
“ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿ ತೆರೆಯಲಾಗಿರುವ 1800 4258 330 ಸಹಾಯವಾಣಿಗೆ ರೋಗಿಗಳು, ಸಾರ್ವಜನಿಕರು ಕರೆ ಮಾಡಿ ಉಚಿತವಾಗಿ ನುರಿತ ವೈದ್ಯರಿಂದ ಶಸ್ತ್ರಚಿಕಿತ್ಸೆಗಳ ಅವಶ್ಯಕತೆ ಇದೆಯೋ ಇಲ್ಲವೋ ಎಂಬುದರ ಕುರಿತು ಅಭಿಪ್ರಾಯ ಪಡೆಯಬಹುದು. ಪ್ರಾಥಮಿಕ ಹಂತದಲ್ಲಿ TKR/THR ಚಿಕಿತ್ಸಾ ವಿಧಾನಗಳಿಗೆ ಎರಡನೇ ವೈದ್ಯಕೀಯ ಅಭಿಪ್ರಾಯ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇತರ ಕ್ಷಿಷ್ಟಕರ ಶಸ್ತ್ರಚಿಕಿತ್ಸೆಗಳ ಬಗ್ಗೆಯೂ ತಜ್ಞ ವೈದ್ಯರಿಂದ ಸಾರ್ವಜನಿಕರಿಗೆ ಅಗತ್ಯ ವೈದ್ಯಕೀಯ ಅಭಿಪ್ರಾಯ ದೊರಕಿಸಿಕೊಡಲು ಯೋಜಿಸಲಾಗಿದೆ” ಎಂದು ತಿಳಿಸಿದ್ದಾರೆ.
“ರೋಗ ನಿರ್ಣಯ ಮತ್ತು ಚಿಕಿತ್ಸಾ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವುದರಿಂದ ರೋಗಿಗೆ ಹಾಗೂ ಅವರ ಕುಟುಂಬಕ್ಕೆ ಶಸ್ತ್ರಚಿಕಿತ್ಸೆಯ ಕುರಿತು ಆತಂಕ ಹಾಗೂ ಒತ್ತಡವನ್ನು ಕಡಿಮೆ ಮಾಡಬಹುದು. ಮನಸ್ಸಿಗೆ ಶಾಂತಿ ಸಿಗುತ್ತದೆ. ಶಸ್ತ್ರಚಿಕಿತ್ಸೆಗಾಗಿ ತಯಾರಿ, ಚೇತರಿಕೆಯ ಸಮಯ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಪುನರ್‌ವಸತಿ ಬಗ್ಗೆ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
“ಸಂಧಿವಾತ, ವಯಸ್ಸಿಗೆ ಸಂಬಂಧಿಸಿದ ಕೀಲುಗಳ ಕ್ಷೀಣತೆ ಮತ್ತು ಗಾಯಗಳ ಹರಡುವಿಕೆಯಿಂದಾಗಿ ಮೊಣಕಾಲು ಬದಲಿ ಮತ್ತು ಸೊಂಟ (Hip) ಬದಲಿಗಳಂತಹ ಶಸ್ತ್ರಚಿಕಿತ್ಸೆಗಳು ಹೆಚ್ಚಾಗುತ್ತಿವೆ. ಇಂತಹ ತೊಂದರೆಗಳನ್ನು ಅನುಭವಿಸುತ್ತಿರುವ ರೋಗಿಗಳಿಗೆ ಸಾಮಾನ್ಯವಾಗಿ ಚಿಕಿತ್ಸೆಯ ಕುರಿತು ನಿರ್ಧಾರ ಕೈಗೊಳ್ಳಲು ಸೂಕ್ತವಾದ ಮಾಹಿತಿ ಲಭ್ಯವಿಲ್ಲದೆ ಗೊಂದಲಕ್ಕೀಡಾಗುತ್ತಾರೆ. ಆದ್ದರಿಂದ ರೋಗಿಗಳಿಗೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಸಲುವಾಗಿ ಸಾರ್ವಜನಿಕರಿಗೆ ಉಚಿತ ಸಹಾಯವಾಣಿ ತೆರೆಯಲಾಗಿದೆ” ಎಂದಿದ್ದಾರೆ.
ಇದು ಹೆಚ್ಚು ಹೆರಿಗೆ ಸಮಯದಲ್ಲಿ ಮಗು ತಾಯಿ ಯಾ ಹೊಟ್ಟೆ ಯಾ ಒಳಗೆ ಮಲ ವಿಸರ್ಜನೆ ಮಾಡಿದೆ ಆದುದರಿಂದ ಈಗಲೇ ಒಪರೇಷನ್ ಮಾಡ ಬೇಕು ಇಲ್ಲ ಅಂದ್ರೆ ಮಗು ತಾಯಿ ಪ್ರಾಣ ಕ್ಕೆ ಅಪಾಯ ಇದೇ ಅಂತ ಹೇಳಿ ಒಪರೇಷನ್ ಮಾಡಿಸ್ತಾರೆ ಇದು ಹೆಚ್ಚಿನ ಕಡೆ ದೊಡ್ಡ ದಂದೆ ಆಗಿ ಬಿಟ್ಟಿದೆ