ಕರ್ನಾಟಕದಲ್ಲಿ ಐದು ವರ್ಷದೊಳಗಿನ 1.3 ಲಕ್ಷ ಮಕ್ಕಳು ಅಮಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ, 11,674 ಮಕ್ಕಳು ತೀವ್ರ ಅಪೌಷ್ಟಿಕತೆ ಎದುರಿಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿರುವ ಅಂಕಿಅಂಶಗಳಲ್ಲಿ ಹೇಳಲಾಗಿದೆ.
ಮಕ್ಕಳಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸಲು ಸಮಗ್ರ ಮಕ್ಕಳ ಅಭಿವೃದ್ಧಿ ಕಾರ್ಯಕ್ರಮವನ್ನು (ICDS) ಸರ್ಕಾರ ನಡೆಸುತ್ತಿದೆ. ರಾಜ್ಯಾದ್ಯಂತ 65,911 ಅಂಗನವಾಡಿ ಕೇಂದ್ರಗಳಿದ್ದು, ಅವುಗಳ ಮೂಲಕ ಐಸಿಡಿಎಸ್ ಕಾರ್ಯಕ್ರಮವನ್ನು ಅನುಷ್ಠಾಗೊಳಿಸಲಾಗಿದೆ. ಅಂಗನವಾಡಿಗಳಲ್ಲಿ 5 ವರ್ಷದೊಳಗಿನ ಒಟ್ಟು 32.91 ಲಕ್ಷ ಮಕ್ಕಳು ಶಿಕ್ಷಣ ಮತ್ತು ಆಹಾರ ಪಡೆಯುತ್ತಿದ್ದಾರೆ. ಆದಾಗ್ಯೂ, ಲಕ್ಷಾಂತರ ಮಕ್ಕಳು ಅಪೌಷ್ಟಿಕತೆಯಿಂದ ಬಳುತ್ತಿದ್ದಾರೆ.
ಬಡವರು ಮತ್ತು ತಳ ಸಮುದಾಯದ ಕುಟುಂಬಗಳಲ್ಲಿನ ಮಕ್ಕಳಲ್ಲಿ ಹೆಚ್ಚು ಅಪೌಷ್ಟಿಕತೆ ಕಾಡುತ್ತಿದೆ. ಐಸಿಡಿಎಸ್ ಕಾರ್ಯಕ್ರಮಕ್ಕಾಗಿ ಸರ್ಕಾರ ನೀಡುತ್ತಿದ್ದ ಅನುದಾನದಲ್ಲಿ ಕಡಿತವಾಗಿದೆ. 2024ರ ಬಜೆಟ್‌ನಲ್ಲಿ 300 ಕೋಟಿ ರೂ. ಕಡಿತ ಮಾಡಲಾಗಿದೆ. ಇದೂ ಕೂಡ ಮಕ್ಕಳ ಪೌಷ್ಟಿಕತೆಯ ಮೇಲೆ ಪರಿಣಾಮ ಬೀರಿದೆ. ಜೊತೆಗೆ, ಅಂಗನವಾಡಿ ಕೇಂದ್ರಗಳ ಸ್ಥಿತಿಗತಿಗಳೂ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಆರೋಪಿಸಲಾಗಿದೆ.
ರಾಜ್ಯದ ಹಲವು ಅಂಗನವಾಡಿ ಕೇಂದ್ರಗಳು ಕಳಪೆ ಸ್ಥಿತಿಯಲ್ಲಿವೆ. ಶುದ್ಧ ಕುಡಿಯುವ ನೀರು ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಹೀಗಾಗಿ, ಮಕ್ಕಳಿಗೆ ಅಗತ್ಯ ಪೌಷ್ಟಿಕಾಂಶ ನೀಡುವಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸಲು ಅಂಗನವಾಡಿ ಊಟದ ಮೆನುವನ್ನು ಸರ್ಕಾರ ಬದಲಿಸಿದೆ. ರಾಗಿ ಲಡ್ಡುಗಳು ಮತ್ತು ಖಿಚಡಿಯಂತಹ ಪೌಷ್ಟಿಕ ಆಹಾರವನ್ನು ಸೇರಿಸಿದೆ. ಆದರೆ, ಸಾಕಷ್ಟು ಮಕ್ಕಳು ಈ ಆಹಾರ ತಿನ್ನಲು ಇಷ್ಟಪಡುತ್ತಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಹೇಳಿದ್ದಾರೆ.