ಪೌಷ್ಟಿಕ ಆಹಾರ, ಸ್ವಚ್ಛತೆ, ಲಸಿಕೆಗಳು, ತಪಾಸಣೆಗಳು, ಜಾಗೃತಿ ಇವೆಲ್ಲವೂ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಬೇಕು. ಇಂದು ಮುನ್ನೆಚ್ಚರಿಕೆಯ ಮೌಲ್ಯವನ್ನು ಅರಿಯದವರು, ನಾಳೆಗೆ ಚಿಕಿತ್ಸೆಗಾಗಿ ಕಾಯಬೇಕಾಗುತ್ತದೆ.
2025ರ ಮಧ್ಯ ಭಾಗದಲ್ಲಿದ್ದೇವೆ. ಈ ಹೊತ್ತಿಗಾಗಲೇ ಮುಂಗಾರು ತನ್ನ ಆರ್ಭಟ ಹೆಚ್ಚಿಸಿದೆ. ಒಂದೆಡೆ ಶೀತ-ಜ್ವರ, ಗ್ಯಾಸ್‌ಟ್ರೋ ಎನ್‌ಟರಿಟೀಸ್, ಡೆಂಗ್ಯೂ ಸೇರಿದಂತೆ ವೈರಲ್ ಫೀವರ್‌ಗಳು ಹೆಚ್ಚಾಗುತ್ತಿರುವಾಗಲೇ, ಮತ್ತೊಮ್ಮೆ ಕೊವಿಡ್-19 ರೂಪಾಂತರ ತಳಿಯ ಸೋಂಕು ಜನರಲ್ಲಿ ಆತಂಕ ಹೆಚ್ಚಿಸುತ್ತಿದೆ. ಈ ಸಂದರ್ಭದಲ್ಲಿ ಹೆಚ್ಚು ಗೊಂದಲಕ್ಕೊಳಗಾಗದೇ ಸಮರ್ಥವಾಗಿ ಪರಿಸ್ಥಿತಿ ಎದುರಿಸುವ, ಆರೋಗ್ಯದ ಕಡೆ ಹೆಚ್ಚು ನಿಗಾ ವಹಿಸುವ ಅನಿವಾರ್ಯತೆ ಇದೆ. ಇಂತಹ ಸನ್ನಿವೇಶದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ 78ನೇ ಆರೋಗ್ಯ ಸಭೆ ಕಳೆದ ಮಂಗಳವಾರ (ಮೇ.27)ದಂದು ಮುಕ್ತಾಯಗೊಂಡಿದ್ದು, ಜಾಗತಿಕ ಆರೋಗ್ಯ ವ್ಯವಸ್ಥೆಗೆ ಹೊಸ ದಿಕ್ಕು ತೋರಿಸುವ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಜಗತ್ತಿನ ಆರೋಗ್ಯದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಶ್ವ ಆರೋಗ್ಯ ಸಂಸ್ಥೆಯ (WHO) ಅಸೆಂಬ್ಲಿ ಈ ವರ್ಷ ಮೇ 19ರಿಂದ ಮೇ 27ರವರೆಗೆ ಸಭೆ ಸೇರಿತ್ತು. ಈ ಸಭೆಗೆ “ಆರೋಗ್ಯಕ್ಕಾಗಿ ಒಂದು ಜಗತ್ತು” ಎಂಬ ವಿಷಯವನ್ನು ಆಯ್ಕೆ ಮಾಡಲಾಗಿತ್ತು. WHO ಸದಸ್ಯ ರಾಷ್ಟ್ರಗಳು ಈ ಸಭೆಯಲ್ಲಿ ಭಾಗವಹಿಸಿ, ಆರೋಗ್ಯ ಸಂಬಂಧಿತ ಸುಮಾರು 75 ವಿಷಯಗಳು ಮತ್ತು ಉಪವಿಷಯಗಳ ಬಗ್ಗೆ ಚರ್ಚೆ ಮಾಡಿದವು. ನಾನಾ ದೇಶಗಳ ಪ್ರತಿನಿಧಿಗಳು ತಮ್ಮ ಅನುಭವ, ಸಮಸ್ಯೆಗಳು ಮತ್ತು ಮುಂದಿನ ಮಾರ್ಗಗಳನ್ನು ಹಂಚಿಕೊಂಡರು.

ವಿಶ್ವದ ಮೊದಲ ಸಾಂಕ್ರಾಮಿಕ ಒಪ್ಪಂದ:
ಮೇ 20 ರಂದು, WHO ಸದಸ್ಯ ರಾಷ್ಟ್ರಗಳು ಐತಿಹಾಸಿಕ ಸಾಂಕ್ರಾಮಿಕ ಒಪ್ಪಂದವನ್ನು ಅಂಗೀಕರಿಸಿವೆ. ಈ ಒಪ್ಪಂದವನ್ನು ತಯಾರಿಸಲು WHO ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಸೇರಿಕೊಂಡ ಅಂತರರಾಷ್ಟ್ರೀಯ ಸಮಾಲೋಚನಾ ಮಂಡಳಿ ಮೂರು ವರ್ಷಗಳ ಕಾಲ ಚರ್ಚೆಗಳನ್ನು ನಡೆಸಿತ್ತು.
COVID-19 ಸಾಂಕ್ರಾಮಿಕದಿಂದ ಎದುರಾಗಬಹುದಾದ ಗಂಭೀರ ಸಮಸ್ಯೆಗಳು ಮತ್ತೊಮ್ಮೆ ಆಗದಂತೆ ಜಗತ್ತು ಒಟ್ಟಾಗಿ ತಡೆಯಲು ಈ ಒಪ್ಪಂದದಲ್ಲಿ ಕೆಲ ನಿರ್ಣಯ ಕೈಗೊಳ್ಳಲಾಗಿದೆ. ಪ್ರತಿ ದೇಶವೂ ತನ್ನ ಸ್ವತಂತ್ರತೆಯನ್ನು ಗೌರವಿಸಿಕೊಳ್ಳುತ್ತಾ, ಜಾಗತಿಕ ಮಟ್ಟದಲ್ಲಿ ಒಪ್ಪಂದದ ಪ್ರಕಾರ ಸಹಕರಿಸುವುದು ಮುಖ್ಯ. ಈ ಒಪ್ಪಂದದ ಮೂಲಕ, ಭವಿಷ್ಯದಲ್ಲಿ ಸಂಭವಿಸಬಹುದಾದ ಸಾಂಕ್ರಾಮಿಕಗಳಿಗೆ ಎಲ್ಲರಿಗೂ ಸಮಾನವಾಗಿ, ತ್ವರಿತವಾಗಿ ಚಿಕಿತ್ಸೆ ಮತ್ತು ಲಸಿಕೆ ಸಿಗುವಂತೆ ನೋಡಿಕೊಳ್ಳಲು ಉದ್ದೇಶಿಸಲಾಗಿದೆ.
ಜಾಗತಿಕ ಆರೋಗ್ಯದ ಭವಿಷ್ಯವನ್ನು ರಕ್ಷಿಸುವುದು:
ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿ, WHO ಸದಸ್ಯ ರಾಷ್ಟ್ರಗಳು ತಮ್ಮ ಮಹತ್ವದ ಕೆಲಸವನ್ನು ನಿರಂತರವಾಗಿ ಮಾಡಬೇಕೆಂದು ಒಗ್ಗೂಡಿದವು. ಈ ಮೂಲಕ 2030–2031ರ ವೇಳೆಗೆ, ಸದಸ್ಯ ರಾಷ್ಟ್ರಗಳ ಕೊಡುಗೆಗಳು WHO ಬಜೆಟ್‌ನ ಅರ್ಧ ಭಾಗವನ್ನು ಹೊಂದಲಿವೆ ಎಂದು ಅಂದಾಜಿಸಲಾಗಿದೆ. ಇದು WHOಗೆ ಭರವಸೆ ಪೂರ್ವಕ ಮತ್ತು ಸ್ಥಿರವಾದ ಹಣಕಾಸಿನ ವ್ಯವಸ್ಥೆಯನ್ನು ಒದಗಿಸುತ್ತದೆ. ಇದರಿಂದ ಜಾಗತಿಕ ಆರೋಗ್ಯ ಕಾರ್ಯಕ್ರಮಗಳು ಸುಗಮವಾಗಿ ನಡೆಯುತ್ತವೆ.
ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಇಂತಿವೆ…
1. ಮೊಟ್ಟಮೊದಲ ಬಾರಿಗೆ ಶ್ವಾಸಕೋಶ ಮತ್ತು ಮೂತ್ರಪಿಂಡಗಳ ಆರೋಗ್ಯವನ್ನು ಕುರಿತ ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಮುಂದಿನ ಯುಎನ್ ಸಾಮಾನ್ಯ ಸಭೆಯಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ಮೇಲಿನ ಗಮನ ಹೆಚ್ಚಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.
2. ಆರೋಗ್ಯ ನೀತಿ ಮತ್ತು ಅನುಷ್ಠಾನಕ್ಕಾಗಿ ವಿಜ್ಞಾನ ಆಧಾರಿತ ಮಾನದಂಡಗಳ ಕುರಿತ ವಿಷಯಗಳಿಗೆ ಹೊಸ ನಿರ್ಣಯ
3. 2040ರ ವೇಳೆಗೆ ವಾಯು ಮಾಲಿನ್ಯದಿಂದಾಗುವ ಆರೋಗ್ಯ ಪರಿಣಾಮಗಳನ್ನು ಕಡಿಮೆ ಮಾಡುವ ಗುರಿ
4. ಸುಧಾರಿತ ಆರೋಗ್ಯ ಫಲಿತಾಂಶಗಳು ಮತ್ತು ಅಕಾಲಿಕ ಮರಣದ ಅಪಾಯವನ್ನು ಕಡಿಮೆ ಮಾಡಲು ಹಾಗೂ ಸಾಮಾಜಿಕ ಸಂಪರ್ಕವನ್ನು ಉತ್ತೇಜಿಸಲು ಕ್ರಮ
5. ಸೀಸ ಮುಕ್ತ ಭವಿಷ್ಯ ನಿರ್ಮಾಣ
6. ಜಾಗತಿಕವಾಗಿ 7000ಕ್ಕೂ ಹೆಚ್ಚು ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ 300 ಮಿಲಿಯನ್ ಗಿಂತಲೂ ಹೆಚ್ಚು ಜನರನ್ನು ರಕ್ಷಿಸುವುದು.
7. ಹಾಲು ಮತ್ತು ಶಿಶು ಆಹಾರಗಳ ಡಿಜಿಟಲ್ ಮಾರ್ಕೆಟಿಂಗ್‌ನ್ನು ಸರಳಗೊಳಿಸಲು ಅಂತಾರಾಷ್ಟ್ರೀಯ ಮಾರುಕಟ್ಟೆ ಸಂಹಿತೆಯ ನಿಬಂಧನೆಗಳನ್ನು ವಿಸ್ತರಿಸುವುದು.
8. ಗಿನಿ ವರ್ಮ್ (ಗಿನಿಯಾ ವರ್ಮ್) ರೋಗದ ನಿರ್ಮೂಲನೆಯ ಪ್ರಕ್ರಿಯೆಯ ವೇಗ ಹೆಚ್ಚಿಸುವುದು.
ಸಭೆಯಲ್ಲಿ ಡಿಜಿಟಲ್ ಆರೋಗ್ಯ, ಆರೋಗ್ಯ ಮತ್ತು ಆರೈಕೆ ಸಿಬ್ಬಂದಿ, ವೈದ್ಯಕೀಯ ಚಿತ್ರಣ, ನರ್ಸಿಂಗ್, ಸಂವೇದನಾ ದುರ್ಬಲತೆ ಮತ್ತು ಚರ್ಮದ ಕಾಯಿಲೆಗಳ ಕುರಿತು ಹಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಇದರೊಂದಿಗೆ ʼವಿಶ್ವ ಗರ್ಭಕಂಠದ ಕ್ಯಾನ್ಸರ್ ನಿರ್ಮೂಲನೆ ದಿನʼ ಮತ್ತು ʼವಿಶ್ವ ಅಕಾಲಿಕ ಶಿಶುತ್ವ ದಿನʼ ಎಂಬ ಎರಡು ಹೊಸ WHO ಆರೋಗ್ಯ ಅಭಿಯಾನಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.
ಇಂದು (ಮೇ.29) ವಿಶ್ವ ಜೀರ್ಣಕಾರಿ ಆರೋಗ್ಯ ದಿನ (World Digestive Health Day 2025). ಜೀರ್ಣಕಾರಿ ಆರೋಗ್ಯದ ಮಹತ್ವದ ಕುರಿತು ಜನರಲ್ಲಿ ಜಾಗೃತಿಗೊಳಿಸುವುದು ಈ ದಿನದ ಉದ್ದೇಶ. ಅಂತೆಯೇ ಈ ದಿನವನ್ನು ವಿಶ್ವ ಗ್ಯಾಸ್ಟ್ರೋಎಂಟರಾಲಜಿ ಸಂಸ್ಥೆ (WGO) ಆಯೋಜಿಸುತ್ತದೆ. ಈ ವರ್ಷ, ಜೀರ್ಣಕಾರಿ ಆರೋಗ್ಯವು ಒಟ್ಟಾರೆ ಶಾರೀರಿಕ-ಮಾನಸಿಕ ಯೋಗಕ್ಷೇಮದಲ್ಲಿ ಎಷ್ಟು ಮುಖ್ಯ ಎಂಬುದನ್ನು ಈ ಅಭಿಯಾನದಲ್ಲಿ ಒತ್ತಿ ಹೇಳಲಾಗಿದೆ. ಅದರಂತೆ ಜಾಗತಿಕ ಮಟ್ಟದಲ್ಲಿ ಆಚರಿಸಲಾಗುವ ಆರೋಗ್ಯ ಕುರಿತ ಅಭಿಯಾನ, ಕಾರ್ಯಕ್ರಮ, ದಿನಾಚರಣೆಗಳೆಲ್ಲವುಗಳ ಮೂಲ ಉದ್ದೇಶ ಪ್ರಸ್ತುತ ಜಗತ್ತಿಗೆ ಆರೋಗ್ಯದ ಮಹತ್ವ ತಿಳಿಸುವುದೇ ಆಗಿದೆ.

ʼಮುನ್ನೆಚ್ಚರಿಕೆ ಚಿಕಿತ್ಸೆಗಿಂತ ಉತ್ತಮʼ ಎಂಬ ನುಡಿ ಔಷಧಿ ಶಾಸ್ತ್ರದಲ್ಲಿ ಅತಿ ಹೆಚ್ಚು ಪ್ರಸ್ತುತವಿರುವ ಮಾತು. ರೋಗವನ್ನು ಗುಣಪಡಿಸಲು ಆಗುವ ವೆಚ್ಚ, ನೋವು, ಸಮಯ ಎಲ್ಲವನ್ನೂ ಒಂದು ಮುನ್ನೆಚ್ಚರಿಕೆಯಿಂದಲೇ ತಪ್ಪಿಸಬಹುದು.
ಜೀವನದಲ್ಲಿ ಸ್ವಲ್ಪ ಜಾಗೃತಿ ಇಟ್ಟುಕೊಳ್ಳುವುದರಿಂದ ರೋಗ ಮಾತ್ರವಲ್ಲ, ಅನೇಕ ಬಿಕ್ಕಟ್ಟುಗಳಿಂದ ಬಚಾವಾಗಬಹುದು.
ಅಗತ್ಯವಾಗಿ ವಹಿಸಬಹುದಾದ ಮುನ್ನೆಚ್ಚರಿಕೆಗಳು:
1. ಸ್ವಚ್ಛತೆ – ಆರೋಗ್ಯದ ಮೊದಲ ಹೆಜ್ಜೆ: ಪ್ರತಿಯೊಬ್ಬರ ಜೀವನ ಶೈಲಿಯಲ್ಲಿ ನಿತ್ಯದ ಶುದ್ಧತೆಯು ಅತ್ಯಗತ್ಯ. ಸಾಬೂನಿನಿಂದ ಕೈ ತೊಳೆಯುವುದು, ಕಣ್ಣು, ಮೂಗು, ಬಾಯಿ ಸ್ಪರ್ಶಿಸುವುದನ್ನು ತಪ್ಪಿಸುವುದು, ಮಾಸ್ಕ್ ಧರಿಸುವುದು ಇವು ಬಹುಪಾಲು ಸೋಂಕುಗಳನ್ನು ದೂರ ಇಡಲು ಸಹಕಾರಿ.
2. ಸಾಮಾಜಿಕ ಅಂತರ ಪಾಲನೆ: ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಸಾಮಾಜಿಕ ಅಂತರ, ಜನಸಂದಣಿಯಿಂದ ದೂರಿರುವುದು ಇವು ಜೀವ ಉಳಿಸುವ ಕ್ರಮಗಳಾಗಿವೆ.
3. ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಹಾರ ಸೇವನೆ: ನಾವು ನಿತ್ಯ ಸೇವಿಸುವ ಪೌಷ್ಠಿಕ ಆಹಾರವೇ ನಮ್ಮ ಔಷಧಿಯಾಗಬೇಕು. ಹಸಿರು ಸೊಪ್ಪು, ಹಣ್ಣು, ಬೇಳೆ ಕಾಳುಗಳು, ಹಾಲು, ಬಾದಾಮಿ ಸೇರಿದಂತೆ ಶುಚಿಯಾದ ಆಹಾರ ಸೇವನೆ ಉತ್ತಮ. ಅಂತೆಯೇ ನಿಯಮಿತ ವ್ಯಾಯಾಮ, ಯೋಗ, ಧ್ಯಾನ, ನಿದ್ರೆ ಇವು ಸರ್ವರೋಗ ನಿವಾರಕ ಮಂತ್ರಗಳಂತೆ ಕೆಲಸಮಾಡುತ್ತವೆ. ಒತ್ತಡದಿಂದ ಉಂಟಾಗುವ ನಾನಾ ಬಗೆಯ ಕಾಯಿಲೆಗಳಿಗೆ ಮನಸ್ಸಿನ ಶಾಂತಿ ಬಹು ದೊಡ್ಡ ಬೇಸಾಯ.
4. ಲಸಿಕೆಗಳ ಪ್ರಾಮುಖ್ಯತೆ: ಕೊರೋನಾ, ಇನ್ಫ್ಲೂಯೆನ್ಜಾ, ಹೆಪಟೈಟಿಸ್, ಹೆಚ್1ಎನ್1 ಮುಂತಾದ ಸಾಂಕ್ರಾಮಿಕಗಳಿಗೆ ಸೂಕ್ತ ಸಮಯಕ್ಕೆ ಲಸಿಕೆ ಪಡೆದುಕೊಳ್ಳುವುದನ್ನು ಮರೆಯಬಾರದು. ಸರಿಯಾದ ಸಮಯಕ್ಕೆ ಪಡೆದುಕೊಳ್ಳುವುದರಿಂದ ಭವಿಷ್ಯದ ರೋಗಗಳನ್ನು ತಡೆಗಟ್ಟಬಹುದು.

5. ನಿಯಮಿತ ವೈದ್ಯಕೀಯ ತಪಾಸಣೆ– ತ್ವರಿತ ರೋಗ ಪತ್ತೆ: ಅನೇಕ ದೀರ್ಘಕಾಲಿಕ ಕಾಯಿಲೆಗಳು ಆರಂಭದಲ್ಲಿ ಯಾವುದೇ ಲಕ್ಷಣವಿಲ್ಲದೆಯೇ ಬೆಳೆಯುತ್ತವೆ. ಡಯಾಬಿಟಿಸ್, ಬಿಪಿ, ಥೈರಾಯ್ಡ್ ಮುಂತಾದವುಗಳು ನಿರೀಕ್ಷೆಯಿಲ್ಲದೇ ತೀವ್ರ ಸ್ಥಿತಿಗೆ ತಲುಪುತ್ತವೆ. ಇವುಗಳನ್ನು ತ್ವರಿತವಾಗಿ ಪತ್ತೆ ಹಚ್ಚಲು ವಾರ್ಷಿಕ ಅಥವಾ ಅರ್ಧ ವಾರ್ಷಿಕ ತಪಾಸಣೆಗಳು ಅತ್ಯಾವಶ್ಯಕ.
6. ಆರೋಗ್ಯ ಮಾಹಿತಿ ಜಾಗೃತಿ: ವೈಜ್ಞಾನಿಕ ಮಾಹಿತಿ, ಸರ್ಕಾರ ಅಥವಾ ವಿಶ್ವ ಆರೋಗ್ಯ ಸಂಸ್ಥೆ (WHO) ನೀಡುವ ಮಾರ್ಗಸೂಚಿಗಳನ್ನು ಅನುಸರಿಸುವುದು ಮುಖ್ಯ. ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ತಪ್ಪು ಸಲಹೆಗಳನ್ನು ಅನುಸರಿಸುವುದರಿಂದ ಆರೋಗ್ಯಕ್ಕೂ ಸಮಾಜಕ್ಕೂ ಅಪಾಯ ಉಂಟು. ತಪ್ಪು ಮಾಹಿತಿ ಎಂಬ ‘ಮಾಹಿತಿ ವೈರಸ್’ ನಿಂದಲೂ ನಾವು ಮುನ್ನೆಚ್ಚರಿಕೆಯಿಂದಲೇ ರಕ್ಷಿಸಿಕೊಳ್ಳಬೇಕು.
ಮಾನವ ಜೀವಿಯ ಸಾರ್ಥಕತೆ ಶಾರೀರಿಕ ಸಾಮರ್ಥ್ಯದಿಂದ ಮಾತ್ರವಲ್ಲದೆ, ದೈಹಿಕ ಹಾಗೂ ಮಾನಸಿಕ ಆರೋಗ್ಯದಿಂದ ನಿರ್ಧಾರಗೊಳ್ಳುತ್ತದೆ. ರೋಗ ಬಂದ ನಂತರ ಔಷಧಿ ಹುಡುಕುವುದು ಅವಶ್ಯಕವಾದರೂ, ರೋಗವೇ ಬಾರದಂತೆ ತಡೆಗಟ್ಟುವುದು ಜಾಣತನ. ರೋಗ ತಡೆಗಟ್ಟುವ ಹಾದಿಯ ಹೆಸರೇ ಮುನ್ನೆಚ್ಚರಿಕೆ. ಅದರಲ್ಲಿ ಜಾಗೃತಿ, ಶುದ್ಧತೆ, ಸಮತೋಲಿತ ಆಹಾರ ಸೇವನೆ ಮತ್ತು ಜೀವನಶೈಲಿಯ ಶಿಸ್ತು ಸೇರಿವೆ. ಇಂದಿನ ಅನಿಶ್ಚಿತ ಪರಿಸ್ಥಿತಿಯಲ್ಲಿ ಆರೋಗ್ಯವೆಂದರೆ ಒಂದು ತಪಸ್ಸು. ಆರೋಗ್ಯದ ಬಗ್ಗೆ ನಮ್ಮ ದೃಷ್ಟಿಕೋನವನ್ನು ಪುನರ್‌ವಿಮರ್ಶೆ ಮಾಡುವ ಕಾಲ ಇದು. ಅದು ಬದ್ಧತೆ; ಅದೇ ಜೀವನ.