ಸುಪ್ರೀಂ ಕೋರ್ಟಿನ ಉನ್ನತ ಸ್ಥಾನವನ್ನು ಅಲಂಕರಿಸಿರುವ ನಾಗರತ್ನ ಅವರು, ಆ ಸ್ಥಾನಕ್ಕೆ ಘನತೆ ತರುವಂತಹ ದಿಟ್ಟ ನಿಲುವು ಪ್ರದರ್ಶಿಸುವ, ಗಟ್ಟಿ ಸಂದೇಶ ರವಾನಿಸುವ ಮೂಲಕ ದೇಶದ ಜನತೆಯ ಮನ ಗೆದ್ದಿದ್ದಾರೆ. ಅದರಲ್ಲೂ ಬಿಲ್ಕಿಸ್ ಬಾನೋ ಕೇಸಿನಲ್ಲಿ ಐತಿಹಾಸಿಕ ತೀರ್ಪು ಕೊಡುವುದರ ಮೂಲಕ ನಲುಗಿದವರಿಗೆ ನ್ಯಾಯ ಒದಗಿಸಿ, ಮನುಷ್ಯತ್ವವನ್ನು ಗೆಲ್ಲಿಸಿದ್ದಾರೆ.
ಮಂಡ್ಯದ ಮಣ್ಣಿನ ಮಗಳು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನಾಗರತ್ನ ಅವರು ಸುದ್ದಿಯಲ್ಲಿದ್ದಾರೆ. ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ಆದೇಶವನ್ನು ಸೋಮವಾರ ರದ್ದು ಮಾಡುವುದರ ಮೂಲಕ ಐತಿಹಾಸಿಕ ತೀರ್ಪು ನೀಡಿದ್ದಾರೆ. ಇಡೀ ದೇಶವೇ ತಮ್ಮ ತೀರ್ಪಿನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
2002ರ ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಮುಸ್ಲಿಂ ಹೆಣ್ಣುಮಗಳು ಬಿಲ್ಕಿಸ್ ಯಾಕೂಬ್ ರಸೂಲ್ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಮಗು ಮತ್ತು ಆಕೆಯ ಕುಟುಂಬದ ಸದಸ್ಯರನ್ನು ಕೊಲೆಗೈದ ಪ್ರಕರಣದಲ್ಲಿ ದೋಷಿಗಳಾಗಿದ್ದ 11 ಮಂದಿಯನ್ನು ಬಂಧಿಸಲಾಗಿತ್ತು. ಆದರೆ, 2022 ರ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ, ಸನ್ನಡತೆಯ ಆಧಾರದಲ್ಲಿ ಅಪರಾಧಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿತ್ತು. ಇದು ದೇಶದ ನ್ಯಾಯಾಂಗ ವ್ಯವಸ್ಥೆಯೇ ಅಲುಗಾಡುವಂತೆ, ಅಲ್ಪಮತಿಗಳು ಕೂಡ ನ್ಯಾಯಾಂಗವನ್ನು ಆಡಿಕೊಂಡು ನಗಾಡುವಂತೆ ಮಾಡಿತ್ತು.
ಅದಕ್ಕೆ ಪೂರಕವಾಗಿ, ಬಿಡುಗಡೆಗೊಂಡ 11 ಮಂದಿಯೂ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರು. ಮೇಲ್ಜಾತಿಯರಾದ ಕಾರಣಕ್ಕಾಗಿ ಬಿಡುಗಡೆಯ ವೇಳೆ ಅವರೆಲ್ಲರನ್ನೂ ಯುದ್ಧ ಗೆದ್ದು ಬಂದ ಶೂರರಂತೆ ಸ್ವಾಗತಿಸಲಾಯಿತು. ಹೂವಿನ ಹಾರ ಹಾಕಿ, ಆರತಿ ಎತ್ತಿ ಬರಮಾಡಿಕೊಳ್ಳಲಾಯಿತು. ಮೆರವಣಿಗೆ ಮಾಡಿ ಮೆರೆಸಲಾಯಿತು. ಅತ್ಯಾಚಾರಿಗಳನ್ನು ಮೆರವಣಿಗೆ ಮಾಡಿದ್ದು ದೇಶಾದ್ಯಂತ ವ್ಯಾಪಕ ಟೀಕೆಗೆ ಒಳಗಾಗಿತ್ತು. ಮಾನವಂತರ ಆಕ್ರೋಶಕ್ಕೂ ಗುರಿಯಾಗಿತ್ತು. ಅದಕ್ಕಿಂತ ಹೆಚ್ಚಾಗಿ ಸಂಘಪರಿವಾರ, ಬಿಜೆಪಿಯ ನಡೆ, ಪ್ರಧಾನಿಗಳ ಮೌನ- ಸೋಗಲಾಡಿತನಕ್ಕೆ ಸಾಕ್ಷಿಯಾಗಿತ್ತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಡವರ ಭೂಮಿ ಮತ್ತು ನೈಸ್ ರಾಜಕಾರಣ
ಗುಜರಾತ್ ಸರ್ಕಾರದ ಈ ನಿರ್ಧಾರವನ್ನು ಬಾನೋ ಸೇರಿದಂತೆ ಹಲವು ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಪ್ರಕರಣವನ್ನು ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಹಾಗೂ ಬಿ.ವಿ ನಾಗರತ್ನ ಅವರಿದ್ದ ಪೀಠ ಕೈಗತ್ತಿಕೊಂಡಿತ್ತು. ಅತ್ಯಾಚಾರಿಗಳ ಶಿಕ್ಷೆಯನ್ನು ತಗ್ಗಿಸಿದ, ಬಿಡುಗಡೆಗೊಳಿಸಿದ ಗುಜರಾತ್ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸೋಮವಾರ, ‘ಗುಜರಾತ್ ಸರ್ಕಾರವು 11 ಅಪರಾಧಿಗಳನ್ನು ಬಿಡುಗಡೆ ಮಾಡಲು ನ್ಯಾಯಾಂಗವನ್ನು ವಂಚಿಸಿದೆ’ ಎಂದು ಬಿಡುಗಡೆ ಆದೇಶವನ್ನು ರದ್ದುಗೊಳಿಸಿದೆ. ಆ ಮೂಲಕ ಬಿಲ್ಕಿಸ್ ಬಾನೋ ಅರ್ಜಿಯನ್ನು ಎತ್ತಿ ಹಿಡಿದಿದೆ. ಎರಡು ವಾರದೊಳಗೆ ಎಲ್ಲ 11 ಮಂದಿ ಅಪರಾಧಿಗಳು ಪೊಲೀಸರಿಗೆ ಶರಣಾಗುವಂತೆ ಆದೇಶ ನೀಡಿದೆ.
ಅಷ್ಟೇ ಅಲ್ಲ, ‘ಒಬ್ಬ ಮಹಿಳೆ ಯಾವುದೇ ಧರ್ಮ ಅನುಸರಿಸುತ್ತಿರಲಿ, ಸಾಮಾಜಿಕ ಸಂರಚನೆಯಲ್ಲಿ ತಳಮಟ್ಟದಲ್ಲೇ ಇರಲಿ, ಆಕೆ ಗೌರವಕ್ಕೆ ಅರ್ಹಳು, ಯಾರೂ ಕೂಡ ಕಾನೂನಿನ ಮುಂದೆ ದೊಡ್ಡವರಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೆಲದ ಕಾನೂನನ್ನು ನಾವು ರಕ್ಷಿಸಬೇಕು, ಇಲ್ಲಿ ಅನುಕಂಪ, ಸಹಾನುಭೂತಿಗಳಿಗೆ ಯಾವ ಜಾಗವೂ ಇಲ್ಲ’ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿರುವ ಈ ಸಂದೇಶ, ಈ ಕೆಟ್ಟ ಕಾಲದಲ್ಲಿ ಬಹುದೊಡ್ಡ ಭರವಸೆಯಂತೆ ಕಾಣಿಸುತ್ತಿದೆ. ಈ ಕಾಲಕ್ಕೆ ಬೇಕಾದ ದಿಟ್ಟತನವನ್ನು ತೋರುತ್ತಿದೆ.
ಏಕೆಂದರೆ, ಇಡೀ ದೇಶವೇ ಧರ್ಮದ ಅಮಲಿನಲ್ಲಿ ತೇಲಾಡುತ್ತಿರುವಾಗ, ಪ್ರಭುತ್ವವೇ ಮುಂದೆ ನಿಂತು ಅತ್ಯಾಚಾರಿಗಳ ರಕ್ಷಣೆಗೆ ನಿಂತಿರುವಾಗ, ಮೇಲ್ಜಾತಿ ಮನಸ್ಸುಗಳು ಅಸಹ್ಯವನ್ನು ಅಟ್ಟಹಾಸದಿಂದ ಅಬ್ಬರಿಸುತ್ತಿರುವಾಗ- ಈ ತೀರ್ಪು ತೀರಾ ಮುಖ್ಯವಾಗಿತ್ತು.
ಇಂತಹ ದಿಟ್ಟ ತೀರ್ಪನ್ನು ಕೊಟ್ಟವರು ನಮ್ಮ ಕರ್ನಾಟಕದವರು, ಮಂಡ್ಯದ ಮಣ್ಣಿನ ಮಗಳು, ಕನ್ನಡತಿ ನ್ಯಾಯಮೂರ್ತಿ ನಾಗರತ್ನರವರು.
ಮಂಡ್ಯ ಜಿಲ್ಲೆಯ ಮೇಲುಕೋಟೆ ಸಮೀಪದ ಇಂಗಳಗುಪ್ಪೆ ಗ್ರಾಮದ ಇ.ಎಸ್. ವೆಂಕಟರಾಮಯ್ಯ ನವರು 1989ರಲ್ಲಿ ಆರು ತಿಂಗಳ ಕಾಲ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಇವರು ಸರಕಾರಿ ಶಾಲೆ-ಕಾಲೇಜುಗಳಲ್ಲಿ ಓದಿ, ಬೆಂಗಳೂರಿನಲ್ಲಿ ಒಂದಷ್ಟು ಗೆಳೆಯರೊಂದಿಗೆ ಸೇರಿ ‘ಕೆಸ್ವಿ ಅಂಡ್ ಕಂಪನಿ’ ಎಂಬ ಹೆಸರಿನ ಸಂಸ್ಥೆ ಸ್ಥಾಪಿಸಿ, ವಕೀಲಿಕೆ ಆರಂಭಿಸಿದವರು. ನಂತರ ವಕೀಲರು, ವಿಶೇಷ ಸರ್ಕಾರಿ ಪ್ಲೀಡರ್, ಅಡ್ವೋಕೆಟ್ ಜನರಲ್, ಹೆಚ್ಚುವರಿ ನ್ಯಾಯಮೂರ್ತಿ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನಂತರ, ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದವರು. ಮುಖ್ಯ ನ್ಯಾಯಮೂರ್ತಿಗಳು ಹಲವು ಮಹತ್ವದ ತೀರ್ಪುಗಳನ್ನಿತ್ತು ನಾಡಿಗೆ ಕೀರ್ತಿ ತಂದವರು. ಜೊತೆಗೆ ನೇರ ಮಾತಿಗೆ ಹೆಸರಾದವರು.
1962ರಲ್ಲಿ ಜನಿಸಿದ ನಾಗರತ್ನ ಅವರು ಇ.ಎಸ್.ವೆಂಕಟರಾಮಯ್ಯನವರ ಮಗಳು. ನಾಗರತ್ನರ ಅಮ್ಮನ ಊರು ಕನಕಪುರ ತಾಲೂಕಿನ ದೊಡ್ಡಾಲಳ್ಳಿ. ಅಪ್ಪನ ಇಂಗಳಗುಪ್ಪೆ, ಅಮ್ಮನ ದೊಡ್ಡಾಲಳ್ಳಿಯಲ್ಲಿ ಆಡಿ ಬೆಳೆದ ನಾಗರತ್ನರು, ತಂದೆಯಂತೆಯೇ ಕಾನೂನು ಪದವಿ ಪಡೆದರು. 1987ರಲ್ಲಿ ಬೆಂಗಳೂರಿನಲ್ಲಿ, ತಂದೆ ಇ.ಎಸ್.ವೆಂಕಟರಾಮಯ್ಯನವರು ಕಟ್ಟಿ ಬೆಳೆಸಿದ್ದ ‘ಕೆಸ್ವಿ ಅಂಡ್ ಕಂಪನಿ’ಯಲ್ಲಿ ಕಿರಿಯ ವಕೀಲರಾಗಿ ವೃತ್ತಿ ಆರಂಭಿಸಿದರು.
ನಂತರ ನಾಗರತ್ನ ಅವರು 2008ರ ಫೆಬ್ರುವರಿಯಲ್ಲಿ ಕರ್ನಾಟಕ ಹೈಕೋರ್ಟ್ ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಎರಡು ವರ್ಷಗಳ ನಂತರ ಅವರಿಗೆ ನ್ಯಾಯಮೂರ್ತಿ ಸ್ಥಾನ ಕಾಯಂ ಮಾಡಲಾಯಿತು. 2009ರ ನವೆಂಬರ್‌ನಲ್ಲಿ ಪ್ರತಿಭಟನಾ ನಿರತ ವಕೀಲರ ಗುಂಪು, ನಾಗರತ್ನ ಹಾಗೂ ಕರ್ನಾಟಕ ಹೈಕೋರ್ಟ್ ನ ಇತರೆ ಇಬ್ಬರು ನ್ಯಾಯಮೂರ್ತಿಗಳನ್ನು ಕೋರ್ಟ್ ರೂಮಿನೊಳಗೆ ಸೇರಿಸಿ ಬಾಗಿಲು ಹಾಕಿತ್ತು. ಪರಿಸ್ಥಿತಿಯನ್ನು ಧೈರ್ಯದಿಂದ ನಿಭಾಯಿಸಿದ ನಾಗರತ್ನರು, ‘ನಮಗೆ ಕೋಪ ಬರಲಿಲ್ಲ, ಆದರೆ ವಕೀಲರಿಂದ ನಮಗೆ ಹೀಗೆ ಆಗಿದ್ದು ಬೇಸರ ತರಿಸಿದೆ. ಅಪಮಾನದಿಂದ ನಾವು ನಮ್ಮ ತಲೆ ತಗ್ಗಿಸಬೇಕಿದೆ’ ಎಂದು ಪ್ರತಿಕ್ರಿಯಿಸಿದ್ದರು. ನಾಗರತ್ನರ ಈ ಮಾತುಗಳು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದವು.
ಆನಂತರ 2012ರಲ್ಲಿ, ನ್ಯಾಯಮೂರ್ತಿ ನಾಗರತ್ನ ಅವರು ವಿದ್ಯುನ್ಮಾನ ಮಾಧ್ಯಮಗಳಿಗೆ ನಿಯಂತ್ರಣದ ಅವಶ್ಯಕತೆಯ ಕುರಿತು ‘ಬ್ರೇಕಿಂಗ್ ನ್ಯೂಸ್, ಫ್ಲ್ಯಾಷ್ ನ್ಯೂಸ್ ಅಥವಾ ಇನ್ನಾವುದೇ ರೀತಿಯಲ್ಲಿ ಸುದ್ದಿಯನ್ನು ಪ್ರಚೋದನಕಾರಿಯಾಗಿ ಪರಿವರ್ತಿಸುವುದನ್ನು ತಡೆಯಬೇಕು. ಹಾಗೆಯೇ, ಪ್ರಸಾರ ಮಾಧ್ಯಮಗಳ ನಿಯಂತ್ರಣವು ಸರಕಾರ ಅಥವಾ ಅದರ ಅಧಿಕಾರಗಳಿಂದ ನಿಯಂತ್ರಿಸುವುದು ಆಗಿರಬಾರದು’ ಎಂದು ಸ್ಪಷ್ಟಪಡಿಸಿದ್ದರು.
ಇದಷ್ಟೇ ಅಲ್ಲ, ‘ದೇವಸ್ಥಾನಗಳು ಹಣ ಮಾಡುವ ಕೇಂದ್ರಗಳಲ್ಲ’ ಎಂದಿದ್ದು ಹಾಗೂ ‘ಕೊರೋನ ಕಾಲದಲ್ಲಿ ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಖಡಕ್ ಆದೇಶ ನೀಡಿದ್ದು ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಗಟ್ಟಿಗೊಳಿಸಿತ್ತು. ನಾಗರತ್ನರ ವೃತ್ತಿಪರತೆಗೊಂದು ಗರಿ ಮೂಡಿಸಿತ್ತು.
ಇಂತಹ ಜನಹಿತ ತೀರ್ಪುಗಳನ್ನಿತ್ತ ಕನ್ನಡ ನಾಡಿನ ಹೆಣ್ಣುಮಗಳು ಇಂದು ದೇಶದ ಅತ್ಯುನ್ನತ ಸ್ಥಾನವಾದ ಸುಪ್ರೀಂ ಕೋರ್ಟಿನ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಆ ಸ್ಥಾನಕ್ಕೆ ಘನತೆ ತರುವಂತಹ ದಿಟ್ಟ ನಿಲುವು ಪ್ರದರ್ಶಿಸುವ, ಗಟ್ಟಿ ಸಂದೇಶ ರವಾನಿಸುವ ಮೂಲಕ ದೇಶದ ಜನತೆಯ ಮನ ಗೆದ್ದಿದ್ದಾರೆ. ಅದರಲ್ಲೂ ಬಿಲ್ಕಿಸ್ ಬಾನೋ ಕೇಸಿನಲ್ಲಿ ಐತಿಹಾಸಿಕ ತೀರ್ಪು ಕೊಡುವುದರ ಮೂಲಕ ನಲುಗಿದವರಿಗೆ ನ್ಯಾಯ ಒದಗಿಸಿ, ಮನುಷ್ಯತ್ವವನ್ನು ಗೆಲ್ಲಿಸಿದ್ದಾರೆ.

ಲೇಖಕ, ಪತ್ರಕರ್ತ
Gujrat Model of Rape and Remission. Some people are asking for the removal of the Gujrat CM… It’s not enough… Modi who feigned unpurturbed and insensitive to the heinous crime and Amit Shaw whose Home Ministry gave a nod for remission should be immediately removed by the President of India… What is Droupadi Murmu doing as President of India?
thank u sir
ಎಸ್ ಎನ್ ಲಕ್ಷ್ಮೀನಾರಾಯಣ ಅವರ ಪ್ರತಿಕ್ರಿಯೆ ಚಿಂತನೆಗೆ ಆಹ್ರ್ಹ…
ಬಸು ಎಷ್ಟು ಸರಲವಾಗಿ ಬರೆದಿದ್ದಾರೆ…, lovely