ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯದೆ ಸಾಕಷ್ಟು ವರ್ಷಗಳಾಗಿದ್ದರೂ ಅವುಗಳನ್ನು ನಾವುಗಳು ಒತ್ತಾಯ ಮಾಡಿ ನಡೆಯುವಂತೆ ಮಾಡುವ ಮೊದಲು ಅಸ್ಪೃಶ್ಯತೆ, ಅಸಮಾನತೆ ವಿನಾಶಗೊಳಿಸುವ ನಿಟ್ಟಿನಲ್ಲಿ ಸಾಧಕ-ಬಾಧಕ, ಸಮಾಲೋಚನೆ ನಡೆಸಿ ಸ್ಥಳೀಯ ಸಂಸ್ಥೆ ವ್ಯವಸ್ಥೆಯನ್ನೇ ಬದಲಾಯಿಸಬೇಕಿದೆ.
ಯಾವುದೇ ಪಕ್ಷದ ಎಂಲ್ಎ ಆಗಲಿ, ಮೀಸಲು ಕ್ಷೇತ್ರವೇ ಆಗಲಿ ಸಾಮಾನ್ಯ ಕ್ಷೇತ್ರದ ಎಂಎಲ್ಎ ಆಗಲಿ ಇತ್ತೀಚೆಗೆ ವಿಪರೀತ ಬಂಡವಾಳ ಸುರಿಯಬೇಕಾದ ಪರಿಸ್ಥಿತಿ ಬಂದೊದಗಿದೆ. ಜತೆಗೆ ತಮ್ಮ ಕುಟುಂಬದವರನ್ನು ಬಿಟ್ಟು ಬೇರೆಯವರನ್ನು ಬೆಳೆಸಿದರೆ ಇವರೇ ಮೂಲೆ ಗುಂಪಾಗುವ ಭಯದಿಂದ, ತಮ್ಮ ಸುತ್ತ ಮುತ್ತಲು ಜೈಕಾರ ಹಾಕಿಕೊಂಡು ಅಕ್ಷರಶಃ ಗುಲಾಮರಂತೆ ವರ್ತಿಸುವವರನ್ನೇ ಕಾರ್ಯಕರ್ತರೆಂದು ಬಿಂಬಿಸುತ್ತಿರುವ ಶಾಸಕರುಗಳು, ಸ್ಥಳೀಯ ಸಂಸ್ಥೆ ಚುನಾವಣೆ ಸಮಯಕ್ಕೆ ಸರಿಯಾಗಿ ನಡೆಯದಂತೆ ನೋಡಿಕೊಳ್ಳುತ್ತಾರೆ, ನಡೆಸದೇ ಇರುವುದಕ್ಕೆ ಪ್ರಯತ್ನಿಸುತ್ತಾರೆಯೇ ವಿನಃ ಚುನಾವಣೆ ನಡೆಸಲು ಮುಂದಾಗುವುದಿಲ್ಲ.
ಇಂಡಿಯಾ ಒಕ್ಕೂಟದಲ್ಲಿ ಕೇಂದ್ರ ಸರ್ಕಾರ ಎಂಬುದು ಜನಸಾಮಾನ್ಯರಿಗೆ ದೂರ ಮತ್ತು ದುಬಾರಿ. ಸಂಸತ್ ಚುನಾವಣೆ ಬಹಿಷ್ಕರಿಸಿ ಸಂವಿಧಾನ ತಿದ್ದುಪಡಿ ಮಾಡಿಕೊಂಡು ಕೇಂದ್ರ ಸರ್ಕಾರವನ್ನೇ ಶಾಸಕರುಗಳು ರದ್ದುಪಡಿಸಿ ಇಂಡಿಯಾವನ್ನು ನಿಜವಾದ ಒಕ್ಕೂಟ ವ್ಯವಸ್ಥೆಯನ್ನಾಗಿ ಮತ್ತು ಕರ್ನಾಟಕವನ್ನು ಸ್ವಾಯತ್ತ ಕನ್ನಡನಾಡಾಗಿ ಬೆಳೆಸದೆ ಜನಸಾಮಾನ್ಯರಿಗೆ ಸಮೀಪ ಇರುವ, ಕೂಗಿದರೆ ಕೈಗೆ ಸಿಗುವ ಜನಪ್ರತಿನಿಧಿಗಳ ಸೃಷ್ಟಿಸುವ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಇನ್ನಿಲ್ಲದ ನೆಪ ಹುಡುಕುವ ಚಾಳಿ ಇಂದು ನೆನ್ನೆಯದಲ್ಲ.
ಯಾವಾಗ್ಯಾವಾಗ ಸ್ಥಳೀಯ ಜನಪ್ರತಿನಿಧಿ ಆಗಬೇಕೆಂದು ಸಂಘಟಿತ ಪ್ರಯತ್ನದಲ್ಲಿ ಯುವಪಡೆ ಒಂದೂರಿನಲ್ಲೋ, ಒಂದು ನಗರದಲ್ಲೋ ಸಮಾಜ ಸೇವೆ ಮಾಡಿಕೊಂಡು ಚಟುವಟಿಕೆಯಿಂದ ಇರುತ್ತದೋ ಅಂಥ ಸಮಯದಲ್ಲಿ ಯಾವುದೇ ಶಾಸಕರಾಗಲಿ, ಯಾವುದೇ ಸರ್ಕಾರ ಇರಲಿ, ಜನ ದಂಗೆ ಎದ್ದಾರು ಎಂಬ ದಿಗಿಲಿನಿಂದ ಈ ಚುನಾವಣೆಗಳನ್ನು ಮುಂದೂಡಲು ಹೋಗಲಾರರು. ಆದರೆ ಇಲ್ಲಿ ಮೇಲಿನಿಂದ ಕೆಳಗಿನವರೆಗೂ ಸಮಾಜ ಸೇವಾ ಮನೋಭಾವದ ವ್ಯಕ್ತಿಗಳು ಚುನಾವಣೆಗಳಲ್ಲಿ ಭಾಗವಹಿಸಲು ಸಾಧ್ಯವಾಗದಷ್ಟು ದುಡ್ಡು ಮತ್ತು ಜಾತಿಗಳ ಕಪಿಮುಷ್ಠಿಯಲ್ಲಿ ಇಡೀ ವ್ಯವಸ್ಥೆ ಸಿಲುಕಿದೆ.
ಮೂಲೆ ಮುಡುಕು ಬಿಡದಂತೆ ಅಸ್ಪೃಶ್ಯತೆ, ಅಸಮಾನತೆ ಆವರಿಸಿಕೊಂಡಿದೆ. ಹೀಗಿದ್ದರೂ ಹಳ್ಳಿಗಳಲ್ಲಿ ಇರುವ ತೀವ್ರತೆ ನಗರಗಳಲ್ಲಿ ಇಲ್ಲ. ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಚಿಂತನೆಯ ಅಡಿಪಾಯದಲ್ಲಿ ಸರ್ಕಾರಗಳು ಯೋಜನೆಗಳನ್ನು ರೂಪಿಸಿ ಹಳ್ಳಿಗಳಲ್ಲಿಯೂ ಸಿಮೆಂಟ್ ಕಾಂಕ್ರೀಟ್ ರಸ್ತೆಗಳು ಬಂದಿವೆ. ಕುಡಿಯುವ ನೀರಿನ ಬೋರ್ವೆಲ್ಗಳು ಬಂದಿವೆ, ಸರಿ. ಆದರೆ ಆ ಕೇರಿಗೆ ಒಂದು, ಈ ಕೇರಿಗೆ ಒಂದು ಎನ್ನುವ ಅಂತರ ಹಾಗೇ ಇದೆ.
ಗ್ರಾಮೀಣ ಜನತೆಗೆ ಅನುಕೂಲ ಮಾಡಲು ಮಾಡಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ವಿಸರ್ಜಿಸಿ ನಗರೀಕರಣಗೊಳಿಸಲು ಬೇರೊಂದು ವ್ಯವಸ್ಥೆ ಮಾಡುವುದು ಒಳಿತು. ಈಗ ಇರುವ ನಗರಸಭೆ, ಪುರಸಭೆ ಇವುಗಳು ಈಗಾಗಲೇ ನಗರವಾಸಿಗಳಿಗೆ ಸೇವೆ ಒದಗಿಸುತ್ತಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಇರುವ ಜನರನ್ನು ನಗರೀಕರಣಗೊಳಿಸಲು ಹೆಚ್ಚುವರಿ ಕೆಲಸ ಮಾಡಲಾರರು.
ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲ ಜನರನ್ನು ರೈಲು ಹಳಿಯ ಪಕ್ಕದಲ್ಲೇ ನಗರೀಕರಣಗೊಳಿಸಿದರೆ ಹೆಚ್ಚು ಜನರಿಗೆ ಏಕಕಾಲದಲ್ಲಿ ಕಡಿಮೆ ವೆಚ್ಚದಲ್ಲಿ ವಿದ್ಯುತ್, ರಸ್ತೆ, ನೀರು ಸೇರಿದಂತೆ ಇತರೆ ಮೂಲಭೂತ ಸೌಕರ್ಯವನ್ನು ಸರಳವಾಗಿ ಒದಗಿಸಬಹುದು. ಈಗಿರುವ ಹಳ್ಳಿಗಳಿಗೆ ಮೂಲಸೌಕರ್ಯ ಒದಗಿಸುವುದು ವಿಪರೀತ ವೆಚ್ಚವಾಗುತ್ತಿದೆ. ಇಷ್ಟೊಂದು ವೆಚ್ಚಮಾಡಿ ಕೂಡ ಹಳ್ಳಿಗಳಲ್ಲಿ ಹೆಣ್ಣುಮಕ್ಕಳ ಸ್ವತಂತ್ರ, ವಂಚಿತ ಸಮುದಾಯಗಳ ಸ್ವತಂತ್ರ ಮತ್ತು ಬಡವರ ಸ್ವತಂತ್ರ ನಗರಗಳಿಗೆ ಹೋಲಿಸಿದರೆ ಇನ್ನೂ ಅನಾದಿಕಾಲದಲ್ಲಿದೆ.
ಒಟ್ಟಾರೆ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯದೆ ಸಾಕಷ್ಟು ವರ್ಷಗಳಾಗಿದ್ದರೂ ಅವುಗಳನ್ನು ನಾವುಗಳು ಒತ್ತಾಯ ಮಾಡಿ ನಡೆಯುವಂತೆ ಮಾಡುವ ಮೊದಲು ಅಸ್ಪೃಶ್ಯತೆ, ಅಸಮಾನತೆ ವಿನಾಶಗೊಳಿಸುವ ನಿಟ್ಟಿನಲ್ಲಿ ಸಾಧಕ-ಬಾಧಕ, ಸಮಾಲೋಚನೆ ನಡೆಸಿ ಸ್ಥಳೀಯ ಸಂಸ್ಥೆ ವ್ಯವಸ್ಥೆಯನ್ನೇ ಬದಲಾಯಿಸಬೇಕಿದೆ. ಮೇಲಿನ ಎಲ್ಲ ಕಾರಣಗಳಿಂದ ನಗರಸಭೆ ಚುನಾವಣೆಗಳು ಆದಷ್ಟು ಬೇಗ ನಡೆಯಲಿ. ಗ್ರಾಮೀಣ ಪ್ರದೇಶವನ್ನೇ ಗುರಿಯಾಗಿಸಿಕೊಂಡು ನಡೆಯುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯಿತಿ ಚುನಾವಣೆ ಬದಲು ನಗರೀಕರಣಗೊಳಿಸಲು ನೂತನ ವ್ಯವಸ್ಥೆಯನ್ನೇ ರಚಿಸುವುದು ಸೂಕ್ತ.
ಇದನ್ನೂ ಓದಿದ್ದೀರಾ? ಅಧಿಕಾರ ವಿಕೇಂದ್ರೀಕರಣದ ಕಗ್ಗೊಲೆ: ಒಕ್ಕೂಟ, ನಾಡ ಆಳಿಕೆಗಳ ಇಬ್ಬಗೆಯ ನೀತಿಗೆ ಹಾದಿ ತಪ್ಪಿದ ಗ್ರಾಮ…
ಈ ರೀತಿ ಆದಲ್ಲಿ ಕೃಷಿ ಚಟುವಟಿಕೆಗೆ ವಿಶಾಲವಾದ ಭೂಮಿ ದೊರೆತು, ಆಧುನಿಕತೆ ತಂತ್ರಜ್ಞಾನ ಬಳಸಿ ಹೆಚ್ಚು ಇಳುವರಿ ಪಡೆಯಬಹುದು. ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿದೆ. ಹೇಳುವಷ್ಟು ಇದು ಸುಲಭವಾಗಿ, ಸರಳವಾಗಿ ಆಗದೇ ಇರಬಹುದು. ಆದರೆ ವರ್ಷಗಟ್ಟಲೆ ಪ್ರಯತ್ನಿಸಿದರೆ ಖಂಡಿತ ಸಾಧ್ಯವಾಗುತ್ತದೆ. ಡಾ.ಬಿ ಆರ್ ಅಂಬೇಡ್ಕರ್ ಕೂಡ, ʼಹಳ್ಳಿಗಳ್ಳೆಂದರೆ ಜಾತಿಯ ಕೂಪಗಳುʼ ಎಂದು ಅಂದೇ ಎಚ್ಚರಿಸಿದ್ದನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದು.

ಅಭಿ ಒಕ್ಕಲಿಗ
ನಾವು ದ್ರಾವಿಡ ಕನ್ನಡಿಗರು ಚಳುವಳಿ




