ಕರ್ನಾಟಕದಿಂದಲೇ ₹21 ಸಾವಿರ ಕೋಟಿ ಸಕ್ಕರೆ ವಹಿವಾಟು ನಡೆದಿದ್ದು, ದೇಶದಲ್ಲಿ ಇದೇ ವರ್ಷ ₹1 ಲಕ್ಷ ಕೋಟಿಗೂ ಅಧಿಕ ಸಕ್ಕರೆ ವಹಿವಾಟು ನಡೆದಿದೆ. ನಮ್ಮ ರಾಜ್ಯದ್ದೇ ಇದರಲ್ಲಿ ಸಿಂಹಪಾಲು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಒಂದೇ ವರ್ಷದಲ್ಲಿ ಕಬ್ಬು ಕಳಿಸಿದ ರೈತರಿಗೆ ₹20 ಸಾವಿರ ಕೋಟಿಗೂ ಅಧಿಕ ಬಿಲ್ ನೀಡಲಾಗಿದೆ. ಶೇ.99ರಷ್ಟು ಬಿಲ್ ಪಾವತಿಯಾಗಿದ್ದು, ಕೆಲವರದ್ದು ಮಾತ್ರ ತಾಂತ್ರಿಕ ಕಾರಣ ಬಾಕಿ ಉಳಿದಿದೆ” ಎಂದರು.
“ರಾಜ್ಯದಲ್ಲಿ ಸಹಕಾರ ಹಾಗೂ ಖಾಸಗಿ ವಲಯ ಸೇರಿ 76 ಸಕ್ಕರೆ ಕಾರ್ಖಾನೆಗಳು ಚಾಲ್ತಿಯಲ್ಲಿವೆ. ಬೆಳಗಾವಿಯಲ್ಲಿರುವ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಪ್ರತಿ ಕಾರ್ಖಾನೆಯೂ ಪ್ರತಿ ಟನ್ ಸಕ್ಕೆರೆಗೆ ₹1 ಪಾವತಿಸುತ್ತದೆ. ಹೀಗೆ ಪಾವತಿಯಾದ ಮೊತ್ತವೇ ₹8 ಕೋಟಿ ಆಗಿದೆ” ಎಂದು ವಿವರಿಸಿದರು.
ಆರ್ ವಿ ದೇಶಪಾಂಡೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ವರಿಷ್ಠರು ಒಪ್ಪಿದರೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಆರ್.ವಿ.ದೇಶಪಾಂಡೆ ಹೇಳಿದ್ದು ವೈಯಕ್ತಿಕ ವಿಚಾರ. ಅವರು ಹಿರಿಯ ಶಾಸಕ. ಮುಖ್ಯಮಂತ್ರಿ ಸ್ಥಾನ ಬಯಸುವುದರಲ್ಲಿ ತಪ್ಪೇನಿದೆ? ಆದರೆ, ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ” ಎಂದರು.
ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿ, “ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಡಿಕೆ ಸಂಬಂಧ ಕೂಡಲಸಂಗಮದ ಸ್ವಾಮೀಜಿ ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಸಮಯ ಬಂದಾಗ ಸಿಎಂ ನಿರ್ಧಾರ ತೆಗೆದುಕೊಳ್ಳಲಿದ್ದಾರೆ” ಎಂದು ಹೇಳಿದರು.