ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸುಮಾರು 11 ಮಸೂದೆಗಳಿಗೆ ಅಧಿಕ ವಿವರಣೆ ನೀಡುವಂತೆ ಕೋರಿ ಸರ್ಕಾರಕ್ಕೆ ಮಸೂದೆಯನ್ನು ವಾಪಸ್ ಕಳುಹಿಸಿದ್ದಾರೆ. ಅದಕ್ಕೆ ಸಹಿ ಹಾಕಿಲ್ಲ ಎಂದು ವರದಿಯಾಗಿದೆ.
ಕೆಲವು ಮಸೂದೆಗಳ ಬಗ್ಗೆ ಅಧಿಕ ವಿವರಣೆಯನ್ನು ನೀಡಲು ತಿಳಿಸಿ ಆ ಮಸೂದೆಗಳನ್ನು ವಾಪಸ್ ಕಳುಹಿಸುವುದು ಸಾಮಾನ್ಯವಾಗಿಯೇ ನಡೆಯುವ ಪ್ರಕ್ರಿಯೆಯಾಗಿದೆ. ರಾಜ್ಯಪಾಲರಿಗೆ ಮಸೂದೆ ಬಗ್ಗೆ ತೃಪ್ತಿಕರವಾದ ಉತ್ತರ ಲಭಿಸಿದ ಬಳಿಕ ಸಹಿ ಹಾಕುತ್ತಾರೆ ಎಂದು ರಾಜಭವನವನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ.
ಈ ನಡುವೆ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಕಾನೂನು ಸಂಘರ್ಷ ಇನ್ನಷ್ಟು ಬಿಗಡಾಯಿಸಿದೆ. ಮುಡಾ ನಿವೇಶನ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ನಂತರ ರಾಜಭವನ ಮತ್ತು ಸರ್ಕಾರದ ನಡುವೆ ಸಂಘರ್ಷ ಮತ್ತಷ್ಟು ಹೆಚ್ಚಾಗಿದೆ.
ಪಿಎಸ್‌ಐ ನೇಮಕ ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ರೂಪಿಸಲಾಗಿದ್ದ ‘ಕರ್ನಾಟಕ ಸಾರ್ವಜನಿಕ ಪರೀಕ್ಷೆಗಳು (ನೇಮಕದಲ್ಲಿ ಭ್ರಷ್ಟಾಚಾರ ಮತ್ತಿತರ ಅಕ್ರಮ ತಡೆ) ವಿಧೇಯಕ -2023’ ಅನ್ನು ಗೃಹ ಇಲಾಖೆಯ ಸ್ಪಷ್ಟನೆ ನಡುವೆಯೂ ರಾಜ್ಯಪಾಲರು 2ನೇ ಬಾರಿಗೆ ಸರಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.
ಇದನ್ನು ಓದಿದ್ದೀರಾ? ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು; ಸಿಎಂ ವಜಾಕ್ಕೆ ಡಿ ಎಸ್ ಅರುಣ್ ಮನವಿ
ಈ ಮಸೂದೆಗಳ ಪೈಕಿ ಆರು ಮಸೂದೆಗಳು ಮುಂಗಾರು ಅಧಿವೇಶನದಲ್ಲಿ ಅಂಗೀಕಾರಗೊಂಡಿದ್ದು ಇದೇ ತಿಂಗಳಲ್ಲಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಉಳಿದವುಗಳನ್ನು ಇದೇ ವರ್ಷದ ಮಾರ್ಚ್ ಮತ್ತು ಒಂದು ಮಸೂದೆ 2023ರ ಡಿಸೆಂಬರ್‌ನಲ್ಲಿ ಕಳುಹಿಸಲಾಗಿತ್ತು.
ವಾಪಸ್ ಕಳುಹಿಸಿದ 11 ಮಸೂದೆಗಳು
ಕರ್ನಾಟಕ ಸಾರ್ವಜನಿಕ ಪರೀಕ್ಷಾ(ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ತಡೆ) ಮಸೂದೆ 2023, ಗದಗ ಬೆಟಗೇರಿ ವಾಣಿಜ್ಯ, ಸಂಸ್ಕೃತಿ ಮತ್ತು ಪ್ರದರ್ಶನಗಳ ಪ್ರಾಧಿಕಾರ ಮಸೂದೆ 2023, ಕರ್ನಾಟಕ ನಗರ ಮತ್ತು ಪಟ್ಟಣಗಳ ಯೋಜನೆ(ತಿದ್ದುಪಡಿ) ಮಸೂದೆ 2023, ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ 2024, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ದತ್ತಿ ಮಸೂದೆ 2024, ಕರ್ನಾಟಕ ಪುರಸಭೆಗಳು ಇತರ ಕಾನೂನು ತಿದ್ದುಪಡಿ ಮಸೂದೆ 2024, ಕರ್ನಾಟಕ ಸಹಕಾರ ಸಂಘಗಳ ಸೊಸೈಟಿಗಳ ತಿದ್ದುಪಡಿ ಮಸೂದೆ 2024, ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆ, ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮಸೂದೆ 2024, ಕರ್ನಾಟಕ ಶಾಸಕಾಂಗ (ತಡೆ ಮತ್ತು ಅನರ್ಹತೆ) ತಿದ್ದುಪಡಿ ಮಸೂದೆ, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮಸೂದೆ 2024
