ಕರ್ನಾಟಕದಲ್ಲಿ ಒಟ್ಟು 6,291 ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿದ್ದು, ಅವುಗಳಲ್ಲಿ 125 ಸಂಘಗಳು ದಿವಾಳಿಯಾಗುವ ಹಂತದಲ್ಲಿವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಮಾಹಿತಿ ನೀಡಿದ ಅಮಿತ್ ಶಾ, “2024-25ನೇ ಆರ್ಥಿಕ ವರ್ಷದಲ್ಲಿ ಭಾರತದಾದ್ಯಂತ ಹೊಸದಾಗಿ ಒಟ್ಟು 4,964 ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ನೋಂದಣಿಯಾಗಿವೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 428 ಹೊಸ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ನೋಂದಣಿಯಾಗಿವೆ. ಅವುಗಳಲ್ಲಿ, ಬೆಳಗಾವಿಯಲ್ಲಿಯೇ 187 ಸಂಘಗಳು ನೋಂದಾಯಿತವಾಗಿವೆ” ಎಂದು ತಿಳಿಸಿದ್ದಾರೆ.
“ಕರ್ನಾಟಕದಲ್ಲಿ ಇರುವ 6,291 ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಪೈಕಿ, 125 ಸಂಘಗಳು ದಿವಾಳಿ ಹಂತದಲ್ಲಿವೆ. ಇವುಗಳಲ್ಲದೆ, 64 ಈಗಾಗಲೇ ಮುಚ್ಚಿದ್ದು, ಅವುಗಳು ಕಾರ್ಯನಿರ್ವಹಿಸುತ್ತಿಲ್ಲ” ಎಂದು ಹೇಳಿದ್ದಾರೆ.
“ದಿವಾಳಿ ಅಂತದಲ್ಲಿರುವ ಸಂಘಗಳ ಪೈಕಿ, ಚಿಕ್ಕಬಳ್ಳಾಪುರದಲ್ಲಿ 28, ಹಾಸನದಲ್ಲಿ 13 ಹಾಗೂ ಬೆಳಗಾವಿಯಲ್ಲಿ 12 ಸಂಘಗಳಿವೆ” ಎಂದು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ರಾಷ್ಟ್ರೀಯ ಸಹಕಾರಿ ಅಬಿವೃದ್ದಿ ನಿಗಮವು (NCDC) ಕರ್ನಾಟಕದ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಗೆ 25.56 ಕೋಟಿ ರೂ.ಗಳಷ್ಟು ಅನುದಾನ ನೀಡಿದೆ ಎಂದು ವಿವರಿಸಿದ್ದಾರೆ.