ಆಧುನಿಕ ಭಾರತದ ಮೊದಲ ಜಾತಿ ವಿರೋಧಿ ಹೋರಾಟಗಾರ ಜೋತಿಬಾ ಫುಲೆಯವರ ಪ್ರಮುಖ ಕೃತಿ ‘ಗುಲಾಮಗಿರಿ’ ಬಿಡುಗಡೆಯಾಗಿ 150 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ನವಯಾನ ಟ್ರಸ್ಟ್ ಬೆಂಗಳೂರಿನಲ್ಲಿ ‘ಗುಲಾಮಗಿರಿ’ಗೆ 150 ವರ್ಷಗಳು ಹೆಸರಿನಲ್ಲಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ.
ಉಪನ್ಯಾಸ ಕಾರ್ಯಕ್ರಮದ ಬಗ್ಗೆ ನವಯಾನ ಟ್ರಸ್ಟ್ ಪತ್ರಿಕಾ ಪ್ರಕಟಣೆ ನೀಡಿದೆ. “ಜಾತಿ ವಿನಾಶ, ಲಿಂಗ ಸಮಾನತೆ ಕುರಿತ ಹೋರಾಟಕ್ಕೆ ಸ್ಪಷ್ಟ ಮಾರ್ಗವನ್ನು ಹಾಕಿಕೊಟ್ಟ ಪುಲೆಯವರ ‘ಗುಲಾಮಗಿರಿ’ ಕೃತಿ ಇವತ್ತಿಗೂ ಪ್ರಸ್ತುತ. ಈ ಬಗ್ಗೆ ಚರ್ಚಿಸಲು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿರುವ ದೇವರಾಜ ಅರಸು ಆರ್ಟ್ ಗ್ಯಾಲರಿಯಲ್ಲಿ ನವೆಂಬರ್ 14ರ ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ರಾಜ್ಯಶಾಸ್ತ್ರಜ್ಞ ಪ್ರೊ. ವೆಲೇರಿಯನ್ ರಾಡ್ರಿಗಸ್ ಅವರು ಉಪನ್ಯಾಸ ನೀಡಲಿದ್ದಾರೆ. ಹಾಡುಗಾರ್ತಿ ಮುಡುಬಿ, ಚಿಂತಕ ಪ್ರವೀಣ್ ತೆಲ್ಲೆಪಲ್ಲಿ ಹಾಗೂ ರಂಗಕರ್ಮಿ ಕೆ.ಪಿ ಲಕ್ಷ್ಮಣ್ ಪ್ರತಿಕ್ರಿಯೆ ನೀಡಲಿದ್ದಾರೆ. ರಾಜಕೀಯ ಚಿಂತಕ ವಿ.ಎಲ್ ನರಸಿಂಹ ಮೂರ್ತಿ ಉಪಸ್ಥಿತರಿರುತ್ತಾರೆ” ಎಂದು ತಿಳಿಸಿದೆ.
“ಅಮೆರಿಕದ ಆಫ್ರಿಕನ್ ಅಮೆರಿಕನ್ನರು ಜನಾಂಗೀಯವಾದದ ವಿರುದ್ಧ ನಡೆಸುತ್ತಿದ್ದ ಹೋರಾಟದ ಮಾದರಿಯಲ್ಲಿಯೇ ಭಾರತದ ಶೂದ್ರ ಮತ್ತು ಅತಿಶೂದ್ರರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವ ಅಗತ್ಯವನ್ನು ಫುಲೆ ಒತ್ತಿ ಹೇಳಿದ್ದರು. ವೇದಗಳು, ಗೀತೆ, ಸ್ಮೃತಿಗಳನ್ನು ಬಳಸಿಕೊಂಡು ಬ್ರಾಹ್ಮಣ್ಯದ ಯಜಮಾನಿಕೆ, ಶೂದ್ರ ಮತ್ತು ಅತಿ ಶೂದ್ರರ ಮೇಲಿನ ಶೋಷಣೆ, ಅಪಮಾನಕ್ಕೆ ಗುರಿಪಡಿಸಿರುವ ಕುತಂತ್ರವನ್ನು ತೀವ್ರವಾಗಿ ತಮ್ಮ ‘ಗುಲಾಮಗಿರಿ’ ಕೃತಿಯಲ್ಲಿ ಫುಲೆ ವಿಮರ್ಶೆಗೆ ಒಳಪಡಿಸಿದ್ದಾರೆ. ಫುಲೆಯವರ ‘ಗುಲಾಮಗಿರಿ’ ಕೃತಿ ಜಾತಿ ವ್ಯವಸ್ಥೆಯನ್ನು ಆಧುನಿಕ ಸಂದರ್ಭದಲ್ಲಿ ಕಟು ವಿಮರ್ಶೆ, ವಿಶ್ಲೇಷಣೆ ಮಾಡಿದ ಮೊದಲ ವೈಚಾರಿಕ ಕೃತಿಯಾಗಿದೆ” ಎಂದು ಟ್ರಸ್ಟ್ ಹೇಳಿದೆ.
“ಫುಲೆಯವರು ವಸಾಹತುಶಾಹಿ ಸಂದರ್ಭದಲ್ಲಿ ತಳಸಮುದಾಯಗಳ ವಿಮೋಚನೆಗಾಗಿ ಹೋರಾಟಗಳನ್ನು ರೂಪಿಸಿದ್ದಾರೆ. ಅವರ ಚಿಂತನೆಯ ಕಾರಣಕ್ಕಾಗಿಯೇ ಫುಲೆ ಅವರನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಗುರು ಎಂದು ಒಪ್ಪಿಕೊಂಡಿದ್ದರು” ಎಂದು ಟ್ರಸ್ಟ್ ತಿಳಿಸಿದೆ.