ಕಾಶ್ಮೀರದ ಪಹಲ್ಗಾಮ್‌ನ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಕಾಶ್ಮೀರದಿಂದ 178 ಕನ್ನಡಿಗರು ಬೆಂಗಳೂರಿಗೆ ಆಗಮಿಸಿದ್ದಾರೆ. ಇವರೆಲ್ಲರು ರಾಜ್ಯದ ವಿವಿಧಡೆಯಿಂದ ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದರು.
ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕರ್ನಾಟಕ ಸರಕಾರ ವ್ಯವಸ್ಥೆ ಕಲ್ಪಿಸಿತ್ತು. ಕಾಶ್ಮೀರಕ್ಕೆ ತೆರಳಿರುವ ಕನ್ನಡಿಗರನ್ನು ಅತ್ಯಂತ ಸುರಕ್ಷಿತವಾಗಿ ತಾಯ್ನಾಡು ಕರ್ನಾಟಕಕ್ಕೆ ಕರೆತರುವ ನಿಟ್ಟಿನಲ್ಲಿ ಮುಖ್ಯಮಂತ್ರಿಯ ಸೂಚನೆ ಮೇರೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಕಲ ವ್ಯವಸ್ಥೆಗಳನ್ನು ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮತ್ತೆ ಅಬ್ಬರಿಸಿದ ಭಯೋತ್ಪಾದನೆ- ಮೋಶಾರತ್ತ ದಿಟ್ಟಿ ನೆಟ್ಟ ದೇಶ
ಅದರಂತೆ 178 ಕನ್ನಡಿಗರನ್ನು ಶ್ರೀನಗರದ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ(ಇಂಡಿಗೋ-6E 9198) ಮೂಲಕ ಇಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಇಂದು ಬೆಳಗ್ಗೆ 8.45ಕ್ಕೆ ಶ್ರೀನಗರ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನ ಹೊರಟಿತ್ತು.
ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿರಿಸಿ ನಡೆದ ಭಯೋತ್ಪಾದಕರ ದಾಳಿ ನಂತರ ಕರ್ನಾಟಕ ಸರ್ಕಾರದ ಪರವಾಗಿ ಸಂತ್ರಸ್ತ ಕನ್ನಡಿಗರ ನೆರವಿಗೆ ಪಹಲ್ಗಾಮ್ ಗೆ ಧಾವಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಪ್ರವಾಸಿಗರಿಗೆ ದೂರವಾಣಿ ಕರೆ ಮಾಡಿ ರಾಜ್ಯಕ್ಕೆ ವಾಪಸ್ಸಾಗಲು ಸಹಾಯ ಮಾಡಿದ್ದರು.
ಪಹಲ್ಗಾಮ್ ಗೆ ಬಂದಿರುವ ಲಾಡ್ ಅವರು, ಬುಧವಾರ ಬೆಳಗ್ಗೆಯಿಂದ ಸಂತ್ರಸ್ತ ಕನ್ನಡಿಗರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದರು. ಮೃತ ಕನ್ನಡಿಗರ ಕುಟುಂಬ ಸದಸ್ಯರಿಗೆ ಅಗತ್ಯ ನೆರವು ಒದಗಿಸಿದ್ದಾರೆ. ಕರ್ನಾಟಕಕ್ಕೆ ಮರಳುವ ಪ್ರವಾಸಿಗರಿಗೆ ವಿಶೇಷ ವಿಮಾನದ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಪರ್ಕ ಸಂಖ್ಯೆ ಸಂಗ್ರಹಿಸಿ ಗುರುವಾರ ಹೊರಡಲಿರುವ ವಿಮಾನಕ್ಕೆ ಸಜ್ಜಾಗಿ ಎಂದು ಸಂತೋಷ್ ಲಾಡ್ ಅವರೇ ತಿಳಿಸುತ್ತಿದ್ದಾರೆ. ಎಷ್ಟು ಪ್ರವಾಸಿಗರು ಇದ್ದೀರಿ? ಎಲ್ಲಿಯವರು ಎಂಬೆಲ್ಲ ವಿವರಗಳನ್ನು ಸಚಿವರು ಕಲೆ ಹಾಕಿ ರಾಜ್ಯಕ್ಕೆ ಮರಳಲು ಕೈ ಜೋಡಿಸಿದ್ದರು.