ಕರ್ನಾಟಕದಲ್ಲಿ ಇರುವ ಎಲ್ಲ ಜಿಲ್ಲಾ ವಕೀಲರ ಸಂಘಗಳ ಕಾರ್ಯಕಾರಿ ಸಮಿತಿ/ಆಡಳಿತ ಮಂಡಳಿಗಳಲ್ಲಿನ ಖಜಾಂಜಿ ಹುದ್ದೆಯೂ ಸೇರಿ ಒಟ್ಟು ಹುದ್ದೆಗಳಲ್ಲಿ 30% ಮಹಿಳಾ ನ್ಯಾಯವಾದಿಗಳಿಗೆ ಮೀಸಲಿಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ದೆಹಲಿ ವಕೀಲರ ಸಂಘದಲ್ಲಿ ಮಹಿಳೆಯರಿಗೆ ಖಜಾಂಜಿ ಹುದ್ದೆ ಮತ್ತು ಇತರ ಹುದ್ದೆಗಳಲ್ಲಿ 33% ಮೀಸಲಾತಿ ನೀಡಬೇಕೆಂದು 2024ರಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅದರಂತೆಯೇ, ಕರ್ನಾಟಕದ ಎಲ್ಲ ವಕೀಲರ ಸಂಘಗಳಿಗೂ 30% ಮಹಿಳಾ ಮೀಸಲಾತಿ ನಿಗದಿ ಮಾಡಿ, ಆದೇಶಿಸುವಂತೆ ಬೆಂಗಳೂರಿನ ಮಹಿಳಾ ವಕೀಲರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಆಲಿಸಿದ್ದ ಸುಪ್ರೀಂ ಕೋರ್ಟ್, ಬೆಂಗಳೂರಿನ ವಕೀಲರ ಸಂಘದ (ಎಎಬಿ) ಹುದ್ದೆಗಳಲ್ಲಿ 30% ಮೀಸಲಾತಿ ನೀಡುವಂತೆ ಆದೇಶಿಸಿತ್ತು.
ಜನವರಿ 28ರಂದು ಎಎಬಿ ಚುನಾವಣೆ ನಡೆದಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಎಬಿ ಚುನಾವಣೆ ನಡೆಸಲಾಗಿದೆ. ಸಂಘದಲ್ಲಿ ಮಹಿಳಾ ವಕೀಲರಿಗೆ 30% ಮೀಸಲಾತಿ ಜಾರಿಗೊಳಿಸಲಾಗಿದೆ ಎಂದು ಎರಡು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಗಮನಕ್ಕೆ ತರಲಾಗಿತ್ತು. ವರದಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಎನ್ ಕೋಟಿಶ್ವರ್ ಸಿಂಗ್ ಅವರಿದ್ದ ಪೀಠವು, ‘ಎಎಬಿ ಚುನಾವಣೆಗೆ ನೀಡಲಾಗಿದ್ದ ಆದೇಶವು ಎಲ್ಲ ಜಿಲ್ಲಾ ವಕೀಲರ ಸಂಘಗಳಿಗೂ ಅನ್ವಯವಾಗುತ್ತದೆ’ ಎಂದು ಹೇಳಿದೆ.
ವಿವಿಧ ಜಿಲ್ಲಾ ವಕೀಲರ ಸಂಘಗಳಿಗೆ ಚುನಾವಣೆಗಳು ಬಾಕಿ ಉಳಿದಿರುವುದನ್ನು ಗಮನಿಸಿದ ನ್ಯಾಯಾಲಯ, ಎಎಬಿಗೆ ನೀಡಿದ್ದ ಮಹಿಳಾ ಮೀಸಲಾತಿಯ ಆದೇಶಗಳನ್ನು ಕರ್ನಾಟಕದ ಎಲ್ಲ ವಕೀಲರ ಸಂಘದ ಚುನಾವಣೆಗಳಿಗೂ ಅನ್ವಯಿಸಬೇಕು ಎಂದು ಸೂಚಿಸಿದೆ.
ಇದೇ ರೀತಿ ಆದೇಶ ನೀಡಿದ್ದ ಹೈಕೋರ್ಟ್
ಎಎಬಿಯಂತೆ ರಾಜ್ಯದ ಎಲ್ಲ ವಕೀಲರ ಸಂಘಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಜಾರಿಗೆ ತರುವಂತೆ ಕರ್ನಾಟಕ ಹೈಕೋರ್ಟ್ ಕೂಡ ಎರಡು ದಿನಗಳ ಹಿಂದೆ ಆದೇಶ ಹೊರಡಿಸಿತ್ತು.
ತುಮಕೂರು ಜಿಲ್ಲಾ ವಕೀಲರ ಸಂಘದಲ್ಲಿ (ಟಿಬಿಎ) ಮಹಿಳಾ ವಕೀಲರಿಗೆ ಶೇ.33ರಷ್ಟು ಮೀಸಲಾತಿ ಕೋರಿ ಮಹಿಳಾ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಎರಡು ದಿನಗಳ ಹಿಂದೆ ಅರ್ಜಿಯ ವಿಚಾರಣೆ ನಡೆಸಿದ್ದ ಎಂ ನಾಗಪ್ರಸನ್ನ ಅವರಿದ್ದ ಪೀಠವು, “ಏಪ್ರಿಲ್ 5ರಂದು ನಡೆಯಲಿರುವ ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಜಂಟಿ ಕಾರ್ಯದರ್ಶಿ ಹುದ್ದೆ ಮತ್ತು ಎರಡು ಕಾರ್ಯಕಾರಿ ಮಂಡಳಿ ಹುದ್ದೆಗಳನ್ನು ಕಾಯ್ದಿರಿಸಬೇಕು. ಒಟ್ಟು ಹುದ್ದೆಗಳಲ್ಲಿ 30% ಹುದ್ದೆಗಳನ್ನು ಮಹಿಳಾ ವಕೀಲರಿಗೆ ನೀಡಬೇಕು” ಎಂದು ಆದೇಶಿಸಿತ್ತು.
ಆದರೆ, “ಮುಂಬರುವ ಚುನಾವಣೆಗಳು ಪೂರ್ಣಗೊಂಡ ನಂತರ ಈ ಬದಲಾವಣೆಗಳನ್ನು ಅಳವಡಿಸಲು ಸಂಘದ ಬೈಲಾಗಳನ್ನು ಸಹ ತಿದ್ದುಪಡಿ ಮಾಡಲಾಗುವುದು” ಎಂದು ಟಿಬಿಎ ಪರ ವಕೀಲರು ತಿಳಿಸಿದ್ದರು. ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು, “ಈಗ ಮೀಸಲಾತಿ ಜಾರಿ ಮಾಡಲಿಲ್ಲ ಎಂದರೆ ಯಾವಾಗ ಮಾಡುವಿರಿ? ವಕೀಲರ ಸಂಘಗಳನ್ನು ‘ಬಾಯ್ಸ್ ಕ್ಲಬ್’ ಆಗಿರಲು ಬಿಡಲಾಗದು” ಎಂದಿದ್ದರು.