ಏಪ್ರಿಲ್ನಿಂದ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಸುರಿದಿದ್ದು, 71 ಮಂದಿ ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ಶನಿವಾರ ತಿಳಿಸಿದೆ. 2025ರ ಮುಂಗಾರು ಪೂರ್ವ ಮಳೆಯು ಕಳೆದ 125 ವರ್ಷಗಳಲ್ಲಿ ಮುಂಗಾರು ಪೂರ್ವ ಋತುಗಳಲ್ಲಿ ಮತ್ತು ಮೇ ತಿಂಗಳಲ್ಲಿ ದಾಖಲಾದ ಅತಿ ಹೆಚ್ಚು ಮಳೆಯಾಗಿದೆ ಎಂದೂ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ರಾಜ್ಯದಲ್ಲಿ ಸಾಮಾನ್ಯವಾಗಿ ಮೇ ತಿಂಗಳಲ್ಲಿ 74 ಮಿ.ಮೀ ಮಳೆಯಾಗುತ್ತದೆ. ಆದರೆ 2025ರ ಮೇ ತಿಂಗಳಲ್ಲಿ 219 ಮಿ.ಮೀ ಮಳೆಯಾಗಿದೆ. ಇದು ಸರಾಸರಿ ಸಾಮಾನ್ಯ ಮಳೆಗಿಂತ ಶೇಕಡ 197ರಷ್ಟು ಹೆಚ್ಚಾಗಿದೆ. ಹಾಗೆಯೇ 2025ರ ಮುಂಗಾರು ಪೂರ್ವ ಅವಧಿಯಲ್ಲಿ (ಮಾರ್ಚ್ 1ರಿಂದ ಮೇ 31ರವರೆಗೆ) ರಾಜ್ಯದಲ್ಲಿ ಸಾಮಾನ್ಯವಾಗಿ 115 ಮಿ.ಮೀ ಮಳೆಯಾಗುತ್ತದೆ. ಆದರೆ 286 ಮಿ.ಮೀ ಮಳೆಯಾಗಿದೆ. ಸರಾಸರಿ ಮಳೆಗಿಂತ ಶೇಕಡ 149ರಷ್ಟು ಹೆಚ್ಚು ಮಳೆಯಾಗಿದೆ ಎಂದು ವರದಿ ಹೇಳಿದೆ.
ಇದನ್ನು ಓದಿದ್ದೀರಾ? ಕೇರಳ ಕರಾವಳಿಗೆ ಮುಂಗಾರು ಪ್ರವೇಶ; ಮೂರು ದಿನ ಮುನ್ನವೇ ಮಳೆಗಾಲ ಆರಂಭ
ಎಲ್ಲಾ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮತ್ತು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಿದೆ. ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದೆ. ಏಪ್ರಿಲ್ 1ರಿಂದ ಮೇ 31ರವರೆಗಿನ ಅವಧಿಯಲ್ಲಿ ಸಿಡಿಲಿನಿಂದ 48 ಮಂದಿ ಸಾವನ್ನಪ್ಪಿದ್ದಾರೆ. ಮರಗಳು ಬಿದ್ದು ಒಂಬತ್ತು ಮಂದಿ, ಮನೆ ಕುಸಿದು ಐವರು, ನೀರಿನಲ್ಲಿ ಮುಳುಗಿ ನಾಲ್ವರು, ಭೂಕುಸಿತದಿಂದ ನಾಲ್ವರು ಮತ್ತು ವಿದ್ಯುತ್ ಆಘಾತದಿಂದ ಒಬ್ಬರು ಸಾವನ್ನಪ್ಪಿದ್ದಾರೆ. ಒಟ್ಟು 71 ಮಂದಿ ಸಾವನ್ನಪ್ಪಿದ್ದು ಮೃತರ ಕುಟುಂಬಸ್ಥರಿಗೆ ಐದು ಲಕ್ಷ ರೂಪಾಯಿ ಪರಿಹಾರ ವಿತರಿಸಲಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
702 ಪ್ರಾಣಿಗಳು ಮೃತಪಟ್ಟಿದ್ದು, ಈ ಪೈಕಿ 698 ಪ್ರಾಣಿಗಳ ಸಾವಿಗೆ ನಷ್ಟ ಪರಿಹಾರ ವಿತರಿಸಲಾಗಿದೆ. 2,068 ಮನೆಗಳಿಗೆ ಹಾನಿಯಾಗಿವೆ. ಈ ಪೈಕಿ 1,926 ಮನೆ ಹಾನಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ. ಈ ಪೈಕಿ 75 ಮನೆಗಳು ಸಂಪೂರ್ಣವಾಗಿ ಹಾನಿಗೊಂಡಿದ್ದು, 1993 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಸಿಎಂ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಒಟ್ಟು 15,378.32 ಹೆಕ್ಟೇರ್ ಬೆಳೆಗಳು ಹಾನಿಗೊಳಗಾಗಿವೆ. ಈ ಪೈಕಿ 11915.66 ಹೆಕ್ಟೇರ್ ಕೃಷಿ ಬೆಳೆಗಳು, 3462.66 ಹೆಕ್ಟೇರ್ ತೋಟಗಾರಿಕೆಯಾಗಿದೆ. ಬೆಳೆ ಹಾನಿಯ ವಿವರಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದ್ದು, ಪರಿಹಾರ ಪಾವತಿ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ವರ್ಷ ನಿರೀಕ್ಷೆಗೂ ಮುನ್ನವೇ ಮುಂಗಾರು ಕೇರಳ ಕರಾವಳಿಯನ್ನು ಪ್ರವೇಶಿಸಿದೆ. ಈ ಹಿಂದೆ ಮೇ 27ರ ವೇಳೆಗೆ ಕೇರಳದಲ್ಲಿ ಮುಂಗಾರು ಆರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಹೇಳಿತ್ತು. ಆದರೆ ಇದೀಗ ನಿರೀಕ್ಷೆಗೂ ಮೂರು ದಿನ ಮುನ್ನವೇ ಮಾನ್ಸೂನ್ ಆರಂಭವಾಗಿದೆ. ಕರ್ನಾಟಕದಲ್ಲೂ ಮುಂಗಾರು ಆರ್ಭಟಿಸುತ್ತಿದೆ.
