- ಸೆಂಟರ್ ಫಾರ್ ಪ್ರೊಟೆಕ್ಟಿಂಗ್ ಡೆಮಾಕ್ರೆಟಿಕ್ ರೈಟ್ಸ್ ಅಂಡ್ ಸೆಕ್ಯುಲರಿಸಂ ಕರೆ
- ಜಾತ್ಯತೀತ ಮನೋಭಾವದ ಎಲ್ಲ ವರ್ಗದ ಜನರು ಕೈಜೋಡಿಸಲು ಮನವಿ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಹಾಗೂ ಮಾನವ ಹಕ್ಕುಗಳ ಅಡಿಪಾಯಕ್ಕೆ ಧಕ್ಕೆ ತರುವ ನೀತಿಗಳನ್ನು ಜಾರಿಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತತೆ ಹಾಗೂ ಮಾನವ ಹಕ್ಕುಗಳನ್ನು ಉಳಿಸುವ ನಿಟ್ಟಿನಲ್ಲಿ ಆಂದೋಲನವನ್ನು ಬಲಪಡಿಸಬೇಕಿದೆ ಸೆಂಟರ್ ಫಾರ್ ಪ್ರೊಟೆಕ್ಟಿಂಗ್ ಡೆಮಾಕ್ರೆಟಿಕ್ ರೈಟ್ಸ್ ಅಂಡ್ ಸೆಕ್ಯುಲರಿಸಂ ಸಂಘಟನೆ (ಸಿಪಿಡಿಆರ್‌ಎಸ್) ಕರೆ ನೀಡಿದೆ.
ನ್ಯಾಯ, ಸ್ವಾತಂತ್ರ್ಯ ಹಾಗೂ ಸಮಾನತೆ ಧ್ಯೇಯವಾಕ್ಯದಡಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಪಿಡಿಆರ್‌ಎಸ್, “ಬುದ್ಧಿಜೀವಿಗಳು, ಪ್ರಾಧ್ಯಾಪಕರು, ಶಿಕ್ಷಕರು, ಬರಹಗಾರರು, ವಿಜ್ಞಾನಿಗಳು, ಪತ್ರಕರ್ತರು, ವಕೀಲರು, ಎಲ್ಲ ಸದುದ್ದೇಶದ, ಪ್ರಜಾತಾಂತ್ರಿಕ ಹಾಗೂ ಜಾತ್ಯತೀತ ಮನೋಭಾವದ ಚಿಂತಕರು ಸೇರಿದಂತೆ ಎಲ್ಲ ವರ್ಗದ ಜನರು ಈ ಆಂದೋಲನಕ್ಕೆ ಕೈಜೋಡಿಸಬೇಕು” ಎಂದು ಕೋರಿದೆ.
ನಮ್ಮ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಭಾರೀ ಕಳವಳ ಮತ್ತು ಆತಂಕ ಸೃಷ್ಟಿಸುತ್ತಿವೆ. ಭಾರತೀಯ ಸಂವಿಧಾನದ ಒಂದು ಪ್ರಮುಖ ಲಕ್ಷಣವೆಂದರೆ ಅಧಿಕಾರದ ಪ್ರತ್ಯೇಕತೆ. ಇದು ಸರ್ಕಾರದ ಒಂದು ಅಂಗವು ಮತ್ತೊಂದು ಅಂಗದ ಕಾರ್ಯವನ್ನು ನಿರ್ವಹಿಸಬಾರದು ಎಂದು ಆಗ್ರಹಿಸುತ್ತದೆ. ಆದರೆ ಈ ಸಾಂವಿಧಾನಿಕ ಸ್ಫೂರ್ತಿಗೆ ವಿರುದ್ಧವಾಗಿ, ಭಾರತ ಚುನಾವಣಾ ಆಯೋಗ (ಇಸಿಐ), ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರ ತನಿಖಾ ದಳ (ಸಿಬಿಐ), ಕೊಲಿಜಿಯಂ ಸೇರಿದಂತೆ ಹಲವಾರು ಕೇಂದ್ರೀಯ ಸಂಸ್ಥೆಗಳ ಸ್ವಾಯತ್ತತೆಯಲ್ಲಿ ನಾವು ಸರ್ಕಾರದ ಹಸ್ತಕ್ಷೇಪವನ್ನು ಗಮನಿಸುತ್ತಿದ್ದೇವೆ” ಎಂದು ಸಿಪಿಡಿಆರ್‌ಎಸ್ ಮನವರಿಕೆ ಮಾಡಿದೆ.
“DIR, AFSPA, MISA, TADA, PASA, UAPA & D ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ಭಾರತವು 1997 ರಿಂದ ವಿಶ್ವಸಂಸ್ಥೆಯ ಚಿತ್ರಹಿಂಸೆ ವಿರೋಧಿ ಸಮಾವೇಶ (UNCAT)ದ ಸಹಭಾಗಿ ರಾಷ್ಟ್ರವಾಗಿ ಸಹಿ ಮಾಡಿದ್ದು, ಇಲ್ಲಿಯವರೆಗೆ ಯಾವುದೇ ಸರ್ಕಾರವೂ ಅದನ್ನು ಅನುಮೋದಿಸಿಲ್ಲ. ಇದು ಸಾಲದೆಂಬಂತೆ, 1860ರ ಭಾರತೀಯ ದಂಡ ಸಂಹಿತೆ, 1898 ರ ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು 1872 ರ ಭಾರತೀಯ ಸಾಕ್ಷ್ಯ ಕಾಯ್ದೆಯ ಸ್ಥಾನದಲ್ಲಿ ಕ್ರಮವಾಗಿ 2023 ರ ಭಾರತೀಯ ನ್ಯಾಯ ಸಂಹಿತಾ ಮಸೂದೆ, 2023ರ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮಸೂದೆ ಮತ್ತು 2023 ರ ಭಾರತೀಯ ಸಾಕ್ಷ್ಯ ಮಸೂದೆ ಎಂಬ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ರೂಪಿಸಲಾಗಿದೆ. ಇವು ಕರಾಳ ಕಾನೂನುಗಳಾಗಿದ್ದು, ಈಗ ಅಳಿದುಳಿದ ಪ್ರಜಾತಾಂತ್ರಿಕ ಹಕ್ಕುಗಳು ಮತ್ತು ಮಾನವ ಹಕ್ಕುಗಳನ್ನೂ ಸಹ ಕಸಿದುಕೊಳ್ಳಲು ಪ್ರಯತ್ನಿಸುತ್ತವೆ” ಎಂದು ಕಳವಳ ವ್ಯಕ್ತಪಡಿಸಿದೆ.
“ಸಂಸತ್ತಿನಲ್ಲಿ ಪ್ರಮುಖ ಮಸೂದೆಗಳನ್ನು ತರಾತುರಿಯಲ್ಲಿ ಅಂಗೀಕರಿಸಲಾಗುತ್ತಿದೆ. ಚರ್ಚೆ ಮತ್ತು ವಿಚಾರ ವಿನಿಮಯಕ್ಕೆ ಅವಕಾಶವೇ ಇಲ್ಲದಾಗಿದೆ. ಜೊತೆಗೆ ಜನರು ನೈಜ ಪ್ರತಿಭಟನೆಗಳನ್ನು ಸಂಘಟಿಸಿದಾಗೆಲ್ಲಾ, ಸರ್ಕಾರವು ಜಾಣಮೌನ ವಹಿಸುತ್ತದೆ, ಇಲ್ಲವೇ ಚಳುವಳಿಯನ್ನು ಹತ್ತಿಕ್ಕಲು ಪೊಲೀಸ್ ಬಲವನ್ನು ಪ್ರಯೋಗಿಸುತ್ತದೆ. 2022ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರ ಮತ್ತು ತದನಂತರದ ಕರ್ನಾಟಕ ಹೈಕೋರ್ಟ್ ತೀರ್ಪಿನಿಂದಾಗಿ ಕರ್ನಾಟಕ ರಾಜ್ಯದಲ್ಲಿ ಪ್ರತಿಭಟನೆಯ ಹಕ್ಕನ್ನು ಅಕ್ಷರಶಃ ಕಸಿದುಕೊಳ್ಳಲಾಗಿದೆ. ಇಡೀ ಬೆಂಗಳೂರು ನಗರದಲ್ಲಿ ಒಂದು ಸ್ಥಳವನ್ನು ಹೊರತುಪಡಿಸಿ ಬೇರೆಲ್ಲಾ ಸ್ಥಳಗಳಲ್ಲೂ ಪ್ರತಿಭಟನೆಯನ್ನು ನಿಷೇಧಿಸಲಾಗಿದೆ. ಪೋಸ್ಟರ್ ಅಂಟಿಸುವುದನ್ನು ಸಹ ನಿಷೇಧಿಸಲಾಗಿದೆ. ನಾಗರಿಕರ ಹಕ್ಕುಗಳನ್ನು ಗೌರವಿಸುವ ವಿಷಯದಲ್ಲಿ ಸರ್ಕಾರದ ಧೋರಣೆ ಹೇಗಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ” ಎಂದು ಪ್ರಶ್ನಿಸಿದೆ.
ಕಾನೂನು ಪಾಲಕರಿಂದ ಆಗುತ್ತಿರುವ ಅಧಿಕಾರ ದುರುಪಯೋಗವು ಮತ್ತೊಂದು ಗಂಭೀರ ಸಮಸ್ಯೆಯಾಗಿದೆ. ಸಂತ್ರಸ್ತರಿಂದ ದೂರುಗಳನ್ನು ಸ್ವೀಕರಿಸಲು ನಿರಾಕರಿಸುವುದು, ಎಫ್‌ಐಆರ್ ದಾಖಲಿಸದೇ ಇರುವುದು, ಚಾರ್ಜ್ ಶೀಟ್ ಸಲ್ಲಿಸುವಲ್ಲಿ ಉದ್ದೇಶಪೂರ್ವಕ ವಿಳಂಬ, ಬೇರೆ ಸೆಕ್ಷನ್ ಅಡಿಯಲ್ಲಿ ಆರೋಪ ದಾಖಲಿಸುವುದು, ಕೇಸು ಹಿಂಪಡೆಯುವಂತೆ ಸಂತ್ರಸ್ತರನ್ನು ಒತ್ತಾಯಿಸುವುದು, ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದು, ಅವರದಲ್ಲದ ಅಪರಾಧವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುವುದು, ಸೆರೆಮನೆ ಹಿಂಸಾಚಾರ, ಸೆರೆಮನೆ ಸಾವುಗಳು, ನಕಲಿ ಎನ್‌ಕೌಂಟರ್, ಇನ್ನೂ ಮುಂತಾದ ಘೋರ ಅಪರಾಧಗಳು ನಿತ್ಯಸತ್ಯವಾಗಿವೆ. ಇದರ ವಿರುದ್ಧ ಜನರಲ್ಲಿ ಆಕ್ರೋಶ ಮಡುಗಟ್ಟಿದೆ” ಎಂದು ಸಂಘಟನೆ ವಿವರಿಸಿದೆ.
“ಚುನಾವಣಾ ಲಾಭ ಗಳಿಸಲು ಧರ್ಮವನ್ನು ರಾಜಕೀಯದೊಂದಿಗೆ ಬೆರೆಸಲಾಗುತ್ತಿದೆ. ಇನ್ನೂ ಮುಂದುವರೆದು, ಕೋಮು ಪಕ್ಷಪಾತ ಮತ್ತು ಕುರುಡು ರಾಷ್ಟ್ರಭಕ್ತಿ ಸೃಷ್ಟಿಸುವ ನಿಟ್ಟಿನಲ್ಲಿ ಪಠ್ಯಪುಸ್ತಕಗಳನ್ನು ತಿರುಚಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವನ್ನು ಅಲುಗಾಡಿಸುತ್ತಿದ್ದು, ನಮ್ಮ ಸಮಾಜವನ್ನು ನಿರಂಕುಶ ಫ್ಯಾಸಿಸ್ಟ್ ಆಳ್ವಿಕೆಯತ್ತ ತಳ್ಳುತ್ತಿವೆ” ಎಂದು ಸೆಂಟರ್ ಫಾರ್ ಪ್ರೊಟೆಕ್ಸಿಂಗ್ ಡೆಮಾಕ್ರೆಟಿಕ್ ರೈಟ್ಸ್ ಅಂಡ್ ಸೆಕ್ಯುಲರಿಸಂ ಆತಂಕ ವ್ಯಕ್ತಪಡಿಸಿದೆ.
“ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ‘ಸೆಂಟರ್ ಫಾರ್ ಪ್ರೊಟೆಕ್ಸಿಂಗ್ ಡೆಮಾಕ್ರೆಟಿಕ್ ರೈಟ್ಸ್ ಅಂಡ್ ಸೆಕ್ಯುಲರಿಸಂ’ ಕರ್ನಾಟಕ ರಾಜ್ಯ ಘಟಕವು ಈ ವಿನಾಶಕಾರಿ ಬೆಳವಣಿಗೆಗಳ ವಿರುದ್ಧ ರಾಜ್ಯಾದ್ಯಂತ ಆಂದೋಲನಗಳನ್ನು ಸಂಘಟಿಸುವ ಪ್ರಯತ್ನಕ್ಕೆ ಮುಂದಾಗಿದೆ. ಹಾಗಾಗಿ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮಾನವ ಹಕ್ಕುಗಳನ್ನು ಉಳಿಸುವ ನಿಟ್ಟಿನಲ್ಲಿ ಈ ಆಂದೋಲನವನ್ನು ಬಲಪಡಿಸಬೇಕು” ಎಂದು ಕೋರಿದೆ.