ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ನೀಡಬೇಕು. ಏಕೆಂದರೆ, ಗೋಧ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರು ಆಗಬಹುದು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆ ಧಾರ್ಮಿಕ ಕಾರ್ಯಕ್ರಮ ಅಲ್ಲ. ಇದೊಂದು ರಾಜಕೀಯ ಕಾರ್ಯಕ್ರಮ ಆಗ್ತಿದೆ. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ನಾವೆಲ್ಲರೂ ಹೋಗುತ್ತಿದ್ದೆವು. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ಧಾರ್ಮಿಕ ಮುಖಂಡರು ಭಾಗಿ ಆಗಬೇಕಿತ್ತು. ಶಂಕರಾಚಾರ್ಯರು ಮೂಲ ಗುರುಗಳು. ಅದೇ ರೀತಿ ಧರ್ಮ ಗುರುಗಳು ನಡೆಸಿಕೊಟ್ಟಿದ್ದರೆ ಅದು ಧಾರ್ಮಿಕ ಕಾರ್ಯಕ್ರಮ ಆಗುತ್ತಿತ್ತು ಎಂದು ಹೇಳಿದ್ದಾರೆ.
ಮೋದಿಯ ಧರ್ಮವೇ ಇನ್ನೂ ಯಾವುದು ಅಂತ ಗೊತ್ತಾಗಿಲ್ಲ. ಅಮಿತ್ ಶಾ ಧರ್ಮವೇ ಯಾವುದೂ ಅಂತ ಗೊತ್ತಾಗಿಲ್ಲ. ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಬೇಕು. ಗೋಧ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರೂ ಆಗಬಹುದು ಎಂದು ನಮಗೆ ಮಾಹಿತಿ ಸಿಕ್ಕಿದೆ. ಮಾಹಿತಿ ಇರುವುದರಿಂದಲೇ ಹೇಳುತ್ತಿದ್ದೇನೆ. ಇವು ನನ್ನ ವೈಯಕ್ತಿಕ ಹೇಳಿಕೆ, ಪಕ್ಷಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಬಿ.ಕೆ. ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೊಸವರ್ಷದ ಹೊಸ್ತಿಲಲ್ಲಿ ನಮ್ಮನ್ನಗಲಿದ ನಿಜಾಯತಿಯ ಪತ್ರಕರ್ತ ಜಾನ್ ಪಿಲ್ಜರ್
ಕರಸೇವಕರ ಬಂಧನ ಕುರಿತು ಮಾತನಾಡಿ, ಹೋರಾಟಕ್ಕೂ ಅಪರಾಧಕ್ಕೂ ವ್ಯತ್ಯಾಸ ಇದೆ. ಕರಸೇವಕ ಅಂತಾ ಯಾವುದೋ ಅಪರಾಧ ಪ್ರಕರಣದಲ್ಲಿ ಇರುವವರನ್ನು ಹಾಗೆಯೇ ಬಿಡಲು ಆಗುವುದಿಲ್ಲ. ಬಂಧಿತನ ಮೇಲೆ 13 ಪ್ರಕರಣಗಳಿವೆ. ಕಾನೂನುಬಾಹಿರ ಅಪರಾಧ ಮಾಡಿದ್ದಾರೆ. ಧರ್ಮದ ಹೆಸರಲ್ಲಿ ಏನೇನು ಕೆಲಸ ಮಾಡಿದ್ದಾರೆ ಅಂತಾ ಗೊತ್ತಿದೆ ಎಂದು ತಿಳಿಸಿದ್ದಾರೆ.
ಬಿಜೆಪಿಯವರು ಈಗ ಬೊಬ್ಬೆ ಹೊಡೆಯುತ್ತಿದ್ದಾರೆ. ಶಾಂತಿ ಕದಡುವ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲೇಬೇಕು. 30 ವರ್ಷ ಅವರನ್ನು ಬಿಟ್ಟಿದ್ದೇ ತಪ್ಪು. ಬಾಬರಿ ಮಸೀದಿ ಧ್ವಂಸ ಮಾಡಿದ್ದು ಅಪರಾಧವೇ. ಎಲ್ ಕೆ ಅದ್ವಾಣಿಯವರ ಮೇಲೆ ಇರುವ ಪ್ರಕರಣವೇ ಇನ್ನೂ ಮುಕ್ತಗೊಂಡಿಲ್ಲ. ಇದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಇಷ್ಟು ದಿನ ಹಳೆ ಪ್ರಕರಣದ ಮೇಲೆ ಕ್ರಮಕೈಗೊಳ್ಳದ ಅಧಿಕಾರಿಗಳನ್ನು ಹಾಗೇ ಬಿಟ್ಟಿದ್ದೇ ತಪ್ಪು ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಗೋಧ್ರಾ ಹತ್ಯಾಕಾಂಡ ಕರಾಳತೆ
2002 ರ ಫೆ.27 ರಂದು ಗುಜರಾತ್‌ನ ಸಬರಮತಿ ಎಕ್ಸ್ಪ್ರೆಸ್ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ್ದರಿಂದ 59 ಕರಸೇವಕರ ಸಜೀವ ದಹನ ಆಗಿತ್ತು. ಗೋಧ್ರಾ ರೈಲು ಹತ್ಯಾಕಾಂಡದ ಬಳಿಕ ಗುಜರಾತ್‌ನ ಅನೇಕ ಕಡೆಗಳಲ್ಲಿ ಕೋಮು ಗಲಭೆ ಉಂಟಾಗಿತ್ತು. ಇದರಿಂದ 1,200 ಮಂದಿಗೂ ಹೆಚ್ಚು ಹತ್ಯೆಯಾದರು. ಸತ್ತವರಲ್ಲಿ ಬಹುತೇಕರು ಮುಸ್ಲಿಂ ಸಮುದಾಯದವರಾಗಿದ್ದರು.
ರೈಲು ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರೆಂದು ಪರಿಗಣಿಸಲಾಗಿದ್ದ 31 ಜನರ ಪೈಕಿ 11 ಮಂದಿಗೆ ಮರಣದಂಡನೆ ಮತ್ತು ಇತರ 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು.