ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲ ವಿಕೃತ ವ್ಯಕ್ತಿಗಳು ಕುಚೇಷ್ಟೆಗಳನ್ನು ಆರಂಭಿಸಿದ್ದಾರೆ. ಮೊನ್ನೆ ಕಲಬುರಗಿಯಲ್ಲಿ ಪಾಕಿಸ್ತಾನದ ಧ್ವಜವನ್ನು ರಸ್ತೆಯಲ್ಲಿ ಅಂಟಿಸಿದ ಭಜರಂಗದಳದ ಕಾರ್ಯಕರ್ತರೆನ್ನಲಾದ ಕೆಲವು ಪುಂಡರನ್ನು ಪೊಲೀಸರು ಬಂಧಿಸಿದ್ದರು. ಈಗ ಫೇಸ್‌ಬುಕ್‌ನಲ್ಲಿ ಕುಚೇಷ್ಟೆಗಳು ಶುರುವಾಗಿವೆ.
”ನಮ್ಮ ಮೋದಿ” ಎಂಬ ಫೇಸ್‌ಬುಕ್ ಪುಟದಲ್ಲಿ ಎಐ ತಂತ್ರಜ್ಞಾನ ಬಳಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನದ ಬಾವುಟ ಹಿಡಿದು ನೃತ್ಯ ಮಾಡುತ್ತಿರುವ ರೀತಿಯಲ್ಲಿ ಒಂದು ವಿಡಿಯೋ ಸೃಷ್ಟಿಸಿ ಪೋಸ್ಟ್ ಮಾಡಲಾಗಿದೆ. ಇದನ್ನು ಬಿಜೆಪಿಯ ಐಟಿ ಸೆಲ್ ಸೃಷ್ಟಿಸಿರುವ ಅನುಮಾನವಿದೆ ಎಂದು ಹೇಳಲಾಗುತ್ತಿದೆ.
ಒಂದು ರಾಜ್ಯದ ಮುಖ್ಯಮಂತ್ರಿಯ ಕೈಯಲ್ಲಿ ಪಾಕಿಸ್ತಾನದ ಬಾವುಟ ಕೊಟ್ಟು ನೃತ್ಯ ಮಾಡುವ ವಿಡಿಯೋ ಮಾಡುವುದು ಅದರಲ್ಲೂ ಕಾಶ್ಮೀರದಲ್ಲಿ ಭಯೋತ್ಪಾದನೆಯ ಕೃತ್ಯ ನಡೆದಿರುವ ಸಂದರ್ಭದಲ್ಲಿ ಇಂತಹ ವಿಕೃತಿ ತೋರಿರುವುದು ತೀವ್ರ ಖಂಡನೆಗೆ ಕಾರಣವಾಗಿದೆ.
2 ಲಕ್ಷ ಚಂದಾದಾರರು ಇರುವ ಈ ”ನಮ್ಮ ಮೋದಿ” ಪುಟದಲ್ಲಿ ಹಾಕಿರುವ ಈ ವಿಡಿಯೋವನ್ನು ಹಲವರು ಹಂಚಿಕೊಂಡು ಲೈಕ್ ಮಾಡಿದ್ದಾರೆ. ಇದಕ್ಕೆ ಬಂದಿರುವ ಕಮೆಂಟುಗಳಲ್ಲಿ ಹೆಚ್ಚಿನವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಹ್ಯ ಭಯೋತ್ಪಾದನೆಗೆ ಆಂತರಿಕ ಮುಸ್ಲಿಂ ವಿರೋಧ ಉತ್ತರವಲ್ಲ
ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆ ನಡೆದ ಕೂಡಲೇ ಅತ್ಯಂತ ತ್ವರಿತಗತಿಯಲ್ಲಿ ಸ್ಪಂದಿಸಿ, ಅಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಪ್ರವಾಸಿಗರ ರಕ್ಷಣೆಗೆ ಕೂಡಲೇ ಸಚಿವರೊಬ್ಬರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಳಿಸಿ ಸುರಕ್ಷಿತವಾಗಿ ಬೆಂಗಳೂರು ತಲುಪುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದು ಎಲ್ಲಡೆ ಮೆಚ್ಚುಗೆಗೆ ಕಾರಣವಾಗಿತ್ತು.
ಇದೇ ಸಂದರ್ಭದಲ್ಲಿ ಈ ದುಷ್ಕೃತ್ಯಕ್ಕೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯ ಹೊಣೆ ಕಾರಣವೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಅದೇ ರೀತಿ ಕೇಂದ್ರ ಸರ್ಕಾರ ಕೂಡ ವೈಫಲ್ಯವನ್ನು ಒಪ್ಪಿಕೊಂಡಿತ್ತು. ಹೀಗಿರುವಾಗ ಸಿದ್ದರಾಮಯ್ಯ ಅವರನ್ನು ಇಷ್ಟು ವಿಕೃತ ರೀತಿಯಲ್ಲಿ ಬಿಂಬಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿಗಳನ್ನು ಗುರಿಪಡಿಸಿ ಹೀಗೆ ವಿಕೃತ ನಕಲಿ ವಿಡಿಯೋಗಳನ್ನು ನಡೆಸುತ್ತಿರುವವರ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸ್ ಇಲಾಖೆ, ಸೈಬರ್ ಅಪರಾಧ ಇಲಾಖೆಗಳಿಗೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
