ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡನೆಗೆ ಮುಂದಾಗಿರುವ ಮೋದಿ ಸರ್ಕಾರ ಇಂದಿನಿಂದ ಸಂಸತ್ತಿನ ವಿಶೇಷ ಅಧಿವೇಶನ ನಡೆಸುತ್ತಿದೆ. ಈ ಸಂದರ್ಭದಲ್ಲಿ ಮಂಡ್ಯದ ಯುವ ಲೇಖಕರಾದ ನಾಗೇಗೌಡ ಕೀಲಾರ ಮತ್ತು ರಾಜೇಂದ್ರ ಪ್ರಸಾದ್ ಬರೆದಿರುವ ಬಹಿರಂಗ ಪತ್ರ ಇಲ್ಲಿದೆ
ಇವರಿಗೆ,
ಶ್ರೀ ಎಚ್.ಡಿ. ದೇವೇಗೌಡರವರಿಗೆ
ಮಾಜಿ ಪ್ರಧಾನಿ ಮಂತ್ರಿಗಳು,
ಭಾರತ ಸರ್ಕಾರ,
ಬೆಂಗಳೂರು.
ನಮಸ್ಕಾರ ಸರ್,
ನೀವು ಆರೋಗ್ಯವಾಗಿದ್ದೀರಿ ಎಂದು ಭಾವಿಸುತ್ತೇವೆ. ಕನ್ನಡನಾಡಿನ ಹಲವು ಯೋಜನೆಗಳು, ಸಮಸ್ಯೆಗಳನ್ನು ಕುರಿತಾಗಿ ಸಂಸತ್ತಿನಲ್ಲಿ ತೊಂಬತ್ತರ ಹರೆಯದಲ್ಲೂ ನೀವು ಮಾತಾಡುವ, ವಾದಿಸುವ, ಆಗ್ರಹಿಸುವ ರೀತಿಯು ನೈಜ ಪ್ರಜಾಸತ್ತಾತ್ಮಕ ಮಾದರಿಯನ್ನು ಸಾಬೀತುಪಡಿಸುತ್ತಿದೆ ಎಂದೇ ನಂಬಿದ್ದೇವೆ.
ಕಳೆದ ಒಂದೂಕಾಲು ದಶಕದಲ್ಲಿ ದೆಹಲಿಯ ಒಕ್ಕೂಟ ಸರಕಾರವು (ಮೋದಿ ಸರ್ಕಾರ) ರಾಜ್ಯ ಸರ್ಕಾರಗಳ ಅಧಿಕಾರ, ಹಣ, ಸ್ವಾಯತ್ತತೆಗಳನ್ನು ಕಸಿದುಕೊಳ್ಳುವಂತಹ ಹಲವು ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸುತ್ತಾ ಬಂದಿದೆ. ಇದು ಒಕ್ಕೂಟ ವ್ಯವಸ್ಥೆಯನ್ನು ಒಂದು ಕೇಂದ್ರೀಕೃತ ವ್ಯವಸ್ಥೆಯೊಳಗೆ ತರುವ ಬಹುದೊಡ್ಡ ಹುನ್ನಾರದಂತೆ ಕಾಣುತ್ತಿದೆ. ಈ ಬಗ್ಗೆ ವಿರೋಧ ಪಕ್ಷಗಳು ಅಲ್ಲಲ್ಲಿ ಪ್ರತಿರೋಧ ತೋರಿದ್ದರಾದರೂ ಸಫಲರಾಗಲು ಸಾಧ್ಯವಾಗಿಲ್ಲ. ಇದೆಲ್ಲವೂ ತಮ್ಮ ಗಮನದಲ್ಲಿರುತ್ತದೆಯಾದರೂ ನೆನಪಿಸುವ ಅನಿವಾರ್ಯತೆ ಉಂಟಾಗಿದೆ.
ಇದೀಗ ಮೋದಿ ಅವರ ನೇತೃತ್ವದ ಒಕ್ಕೂಟ ಸರ್ಕಾರವು ‘ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ’ಯ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಸಕಲ ಸಿದ್ದತೆ ನಡೆಸಿದೆ. ಇದು ದಕ್ಷಿಣ ಭಾರತದ ನಾಡು, ನುಡಿ ಮತ್ತು ಜನರನ್ನು ಉತ್ತರ ಭಾರತೀಯರ ದಾಸ್ಯಕ್ಕೆ ದೂಡುವ ಅಧಿಕೃತ ಶಾಸನವಾಗಿ ಹೊರಹೊಮ್ಮಲಿದೆ.
ಗಮನಿಸಿ ಸರ್,
- ಸ್ವಾತಂತ್ರ್ಯಾನಂತರದ ಏಳೆಂಟು ದಶಕಗಳ ನಂತರವೂ ಉತ್ತರದ ಹಲವು ರಾಜ್ಯಗಳು ಜನಸಂಖ್ಯಾ ನಿಯಂತ್ರಣವನ್ನು ಗಂಭೀರವಾಗಿ ಪರಿಗಣಿಸದ ಪರಿಣಾಮ ಅಲ್ಲಿನ ಜನಸಂಖ್ಯೆ ಅತಿಯಾಗಿ, ದಕ್ಷಿಣದ ರಾಜ್ಯಗಳಿಗೆಡೆಗೆ ವಲಸೆ ವಿಪರೀತವಾಗಿದೆ. ಇದರಿಂದಾಗಿ ಇಲ್ಲಿನ ಸ್ಥಳೀಯರಿಗೆ ಉದ್ಯೋಗ, ವೃತ್ತಿಪರ ಅವಕಾಶಗಳು ಕಡಿಮೆಯಾಗಿ ಪೈಪೋಟಿ ಅನಾರೋಗ್ಯಕರವಾಗಿದೆ. ಇದೀಗ ಜನಸಂಖ್ಯೆಯ ಆಧಾರದ ಮೇಲೆ ಉತ್ತರದ ರಾಜ್ಯಗಳು ಅತಿಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಲಿವೆ. ಜನಸಂಖ್ಯೆ ನಿಯಂತ್ರಿಸಿದ್ದು ದಕ್ಷಿಣದ ಭಾರತದ ಜನರ ಅಪರಾಧವಾಯಿತೇ?!
- ತೆರಿಗೆ ಹಣದ ಪಾಲು, ಅನುದಾನಗಳ ಪಾಲು ಸೇರಿದಂತೆ ಹಲವು ನಿಧಿಗಳ ಹಣದಲ್ಲಿ ದಕ್ಷಿಣದ ರಾಜ್ಯಗಳಿಗೆ ಮೋಸವಾಗುತ್ತಿದೆ. ಒಕ್ಕೂಟ ಸರ್ಕಾರವು ಉತ್ತರ ರಾಜ್ಯಗಳ ಸಂವರ್ಧನೆಗಾಗಿ ಲಕ್ಷಾಂತರ ಕೋಟಿ ರೂಪಾಯಿಗಳ ಪ್ಯಾಕೇಜು ನೀಡುತ್ತಿದ್ದು. ದಕ್ಷಿಣಕ್ಕೆ ಸಿಗುತ್ತಿರುವುದು ಬಿಡಿಗಾಸು ಮಾತ್ರ. ಮುಂದೆ ದಕ್ಷಿಣ ದ್ರಾವಿಡ ರಾಜ್ಯಗಳ ಒಟ್ಟು ಕ್ಷೇತ್ರಗಳಿಗಿಂತಲೂ ಉತ್ತರ ಪ್ರದೇಶ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆಯೇ ಅಧಿಕವಾಗುತ್ತದೆ. ಅಲ್ಲಿಗೆ ದಕ್ಷಿಣದ ಕನ್ನಡಿಗರ, ಉಳಿದವರ ಗತಿಯೇನು?!
- ಹಿಂದಿ ಭಾಷೆಯನ್ನು ಅಧಿಕೃತವಾಗಿ ಹೇರಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಒಕ್ಕೂಟ ಸರ್ಕಾರವು ಅನುಸರಿಸುತ್ತಿದೆ. ಶಿಕ್ಷಣ, ಬ್ಯಾಂಕಿಂಗ್, ನಾಗರೀಕ ಸೇವಾ ಪರೀಕ್ಷೆಗಳು ಮತ್ತು ಆಡಳಿತದಲ್ಲೂ ಮೂರನೇ ಭಾಷೆಯಾಗಿ ಹೇರುತ್ತಿದೆ. ಆದರೆ ಉತ್ತರದ ರಾಜ್ಯಗಳು ಎರಡು ಭಾಷೆಗಳ ಪದ್ದತಿಯನ್ನು ಮಾತ್ರ ಅನುಸರಿಸುತ್ತಿವೆ. ಇದೆಂಥಾ ನೀತಿ. ಹಿಂದಿ ಪ್ರಚಾರ ಮತ್ತು ಬಳಕೆಗಾಗಿ ಸಾವಿರಾರು ಕೋಟಿಗಳನ್ನು ವ್ಯಯಿಸುತ್ತಿದೆ. ಆದ್ರೆ ಕನ್ನಡಕ್ಕೆ ಸಿಗುತ್ತಿರುವುದೆಷ್ಟು ಎಂದು ನೋಡಿದರೆ ಬಹಳ ಸಂಕಟವಾಗುತ್ತದೆ. ಮುಂದೆ ಹೆಚ್ಚಿನ ಲೋಕಸಭಾ ಕ್ಷೇತ್ರಗಳು ‘ಹಿಂದಿ ಭಾಗದವೇ’ ಆದಾಗ ನಮ್ಮ ಪರಿಸ್ಥಿತಿ ಏನು?!
- ಇದುವರೆಗಿನ ಭಾರತದ ಪ್ರಧಾನಿಗಳನ್ನು ಗಮನಿಸಿದರೆ, ಒಟ್ಟು 15 ಜನರಲ್ಲಿ ನೀವು ಮತ್ತು ಪಿ ವಿ ನರಸಿಂಹರಾವ್ ಇಬ್ಬರನ್ನು ಬಿಟ್ಟು ಉಳಿದವರೆಲ್ಲಾ ಉತ್ತರ ಭಾರತೀಯರು. ರಾಜಕೀಯವಾಗಿ ಸಮಾನ ಅವಕಾಶವನ್ನು ದಕ್ಷಿಣ ಭಾರತದ ಜನನಾಯಕರಿಗೆ ಇದುವರೆಗೂ ನೀಡಲಾಗಿಲ್ಲ! ಇನ್ನು ಮುಂದೆ ಅಂತಹ ಆದ್ಯತೆ ಸಿಗುವ ಭರವಸೆ ಇಡಲಾಗುವುದೇ?! ಎಷ್ಟು ದಿನ ಉತ್ತರ ಭಾರತೀಯರ ದಾಸ್ಯದಲ್ಲಿರುವುದು?! ಸಂವಿಧಾನದ ಸಮಾನ ಅವಕಾಶ ಮತ್ತು ಸ್ಥಾನಮಾನ ದಕ್ಷಿಣಕ್ಕೆ ಸಿಗುವುದು ಯಾವಾಗ?! 543 ಕ್ಷೇತ್ರಗಳು ಇದ್ದಾಗಲೇ ಇಲ್ಲದ ಆದ್ಯತೆ, ಅಂದಾಜು 850 ಕ್ಷೇತ್ರಗಳು ಆದಾಗ, ಅದರಲ್ಲೂ ಅಂದಾಜು 305-10 ಕ್ಷೇತ್ರಗಳು ಬಿಮಾರು ಉತ್ತರ ರಾಜ್ಯಗಳೇ ಅದಾಗ ನಮ್ಮ ಪಾಡು ಏನು?!
ಸರ್,
ಕ್ಷೇತ್ರ ಪುನರ್ವಿಂಗಡಣೆಯು ದಕ್ಷಿಣದ ರಾಜ್ಯಗಳ ಸಾಂವಿಧಾನಿಕ ಸಾರ್ವಭೌಮತ್ವದ ಅಸ್ತಿತ್ವಕ್ಕೇ ಧಕ್ಕೆಯುಂಟುಮಾಡಲಿದೆ. ನಮ್ಮ ಜನರು ಜನಸಂಖ್ಯೆ ನಿಯಂತ್ರಿಸಿ, ಹಗಲಿರುಳು ದುಡಿದು ಸಂಪಾದಿಸಿ, ವಲಸಿಗರಿಗೂ ಅವಕಾಶಕೊಟ್ಟು, ತಾಯ್ನುಡಿಯನ್ನು ಉಸಿರಾಗಿಸಿಕೊಂಡು ಬಾಳಿ ಬದುಕಿದ್ದಾರೆ. ಅಂತಹ ಬದುಕನ್ನು ಉತ್ತರದ ದಾಸ್ಯಕ್ಕೆ ತಳ್ಳುವ ಈ ಮಸೂದೆಯನ್ನು ಜಾರಿಗೊಳ್ಳಲು ನಿಮ್ಮಂತಹ ಹಿರಿಯ ಸಂಸದೀಯ ನಾಯಕರು ಬಿಡಬಾರದು.
ಇಂದು ಇಂಡಿಯಾದಲ್ಲಿರುವ ಏಕೈಕ ಮಾಜಿ ಪ್ರಧಾನಿಯವರು ನೀವೊಬ್ಬರೇ! ಸಂಸತ್ತಿನ ಎರಡೂ ಸದನಗಳಲ್ಲಿರುವ ಅತ್ಯಂತ ಹಿರೀಕ ಸಂಸದೀಯ ಪಟುವೂ ನೀವೇ ಆಗಿದ್ದೀರಿ. ಅಷ್ಟಲ್ಲದೆ ದಕ್ಷಿಣವನ್ನು ಪ್ರತಿನಿಧಿಸಿರುವ ಪ್ರಧಾನಿಯೂ ನೀವಾಗಿದ್ದಿರಿ. ನಿಮ್ಮ ಪಕ್ಷವು ಬಿಜೆಪಿಯನ್ನು ಬೆಂಬಲಿಸಿರಬಹುದು, ಆದ್ರೆ ಇಂತಹ ಮೋಸದ ಮಸೂದೆಯು ಮಂಡನೆಯನ್ನು ನೀವು ತಡೆಗಟ್ಟಬೇಕು. ನಿಮ್ಮ ಬದುಕಿನ ಸಮಯದಲ್ಲಿ ಇದು ಮಂಡನೆಯಾಗಿ ಜಾರಿಯಾದರೆ ಮುಂದಿನ ಪೀಳಿಗೆಗಳು ನಿಮ್ಮನ್ನು ನೆನೆಯಲಾರವು. ನೀವು ಕೂಡ ಉತ್ತರದ ವಂಚಕರೊಂದಿಗೆ ಸೇರಿ ನಮ್ಮ ನಾಡು, ನುಡಿ, ಜನಕ್ಕೆ ವಂಚಿಸಿದಂತಾಗುತ್ತದೆ.
ಹಿರೀಕರಾದ ನಿಮ್ಮಲ್ಲಿ ನಾಡಿನ ಜನರ ಪರವಾಗಿ ನಮ್ಮ ಕಳಕಳಿಯ ಮನವಿ ಇಷ್ಟೇ, “ದಯವಿಟ್ಟು ದಕ್ಷಿಣ ರಾಜ್ಯಗಳ ಎಲ್ಲಾ ಜನ ನಾಯಕರನ್ನು ಒಗ್ಗೂಡಿ, ಸಮಾಲೋಚಿಸಿ ಈ ಕ್ಷೇತ್ರ ಪುನರ್ವಿಂಗಡಣೆಯ ಮಸೂದೆಯನ್ನು ರದ್ದುಪಡಿಸಲು ನೇತೃತ್ವವಹಿಸಿ. ದಕ್ಷಿಣದ ಭಾರತದ ಜನರಿಗೆ ಒಕ್ಕೂಟ ಸರ್ಕಾರದಲ್ಲಿ ಸಮಾನ ಅವಕಾಶ ಮತ್ತು ಸ್ಥಾನಮಾನ ಮುಂದಾದರೂ ದೊರೆಯುವಂತಾಗಲಿ.”
ವಂದನೆಗಳೊಂದಿಗೆ,
ತಮ್ಮ ನಂಬುಗೆಯ,
(ನಾಗೇಗೌಡ, ಕೀಲಾರ)
(ರಾಜೇಂದ್ರ ಪ್ರಸಾದ್, ಮಂಡ್ಯ)




