ಕಳೆದ ಮೇ 27ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ದುಲ್ ರೆಹಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ಬೆಳವಣಿಗೆ ಸಂಭವಿಸಿದೆ. ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ (KCOCA-2000) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದುವರೆಗೆ ಬಂಧಿತರಾಗಿರುವ 13 ಆರೋಪಿಗಳು ಸೇರಿದಂತೆ ಒಟ್ಟು 14 ಮಂದಿ ಮೇಲೆ ಪೊಲೀಸರು ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000 (KCOCA Act – ಕೋಕಾ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಮೇ 27ರಂದು ಆರೋಪಿಗಳು ಅಬ್ದುಲ್ ರಹ್ಮಾನ್ ಅವರನ್ನು ಹತ್ಯೆಗೈದು ಮತ್ತು ಅವರ ಸ್ನೇಹಿತ ಕಲಂದರ್ ಶಾಫಿ ಅವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ರಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಕೇವಲ ಈ ಘಟನೆಗಷ್ಟೇ ಸೀಮಿತರಾಗಿಲ್ಲ. ಅವರು ಹಲವು ವರ್ಷಗಳಿಂದ ಕೊಲೆ, ಕೊಲೆ ಯತ್ನ, ಪ್ರಚೋದನಕಾರಿ ಭಾಷಣಗಳು ಸೇರಿದಂತೆ ಸಮಾಜದ ಶಾಂತಿ ಕದಡುವ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಸಮಾಜದಲ್ಲಿ ಉದ್ದೇಶಪೂರ್ವಕವಾಗಿ ಕೋಮು ಸಂಘರ್ಷ ಮತ್ತು ಅಶಾಂತಿಯನ್ನು ಸೃಷ್ಟಿಸುತ್ತಿದ್ದ ಈ ಸಂಘಟಿತ ಅಪರಾಧಿಗಳ ವಿರುದ್ಧ ಈಗ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000 (KCOCA Act) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಕಾಯ್ದೆಯು ಸಂಘಟಿತ ಅಪರಾಧಗಳ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಒಳಗೊಂಡಿದೆ. ಪ್ರಕರಣದ ಮುಂದಿನ ತನಿಖೆಯನ್ನು ಕೋಕಾ ಕಾಯ್ದೆಯ ಅಡಿಯಲ್ಲಿ ನಡೆಸಲಾಗುವುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕದಿಂದ ಬಿಹಾರಕ್ಕೆ ಬಿಜೆಪಿಯ ಬದಲಾದ ನಿಲುವು
ಕೋಕಾ ಕಾಯ್ದೆ ಎಂದರೇನು?
ಕೋಕಾ ಕಾಯ್ದೆ ಎಂದರೆ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (KCOCA), ಇದು ಸಂಘಟಿತ ಅಪರಾಧಗಳು ಮತ್ತು ಭಯೋತ್ಪಾದನೆಯನ್ನು ತಡೆಯಲು ಜಾರಿಗೆ ತಂದ ಕಠಿಣ ಕಾನೂನು. ಈ ಕಾಯ್ದೆಯಡಿ, ಪದೇ ಪದೇ ಸಂಘಟಿತ ಅಪರಾಧಗಳಲ್ಲಿ ಭಾಗವಹಿಸುವ ಆರೋಪಿಗಳನ್ನು ಬಂಧಿಸಲಾಗುತ್ತದೆ ಮತ್ತು ಅವರಿಗೆ ಕನಿಷ್ಠ ಒಂದು ವರ್ಷದವರೆಗೆ ನಿರೀಕ್ಷಣಾ ಜಾಮೀನು ಸಿಗುವುದಿಲ್ಲ.
ಕೋಕಾ ಕಾಯ್ದೆಯ ಪ್ರಮುಖ ಅಂಶಗಳು:
ಸಂಘಟಿತ ಅಪರಾಧ ನಿಯಂತ್ರಣ: ಈ ಕಾಯ್ದೆಯು ಸಂಘಟಿತ ಅಪರಾಧಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ, ವಿಶೇಷವಾಗಿ ಭಯೋತ್ಪಾದಕ ಚಟುವಟಿಕೆಗಳು ಮತ್ತು ಭೂಗತ ಜಾಲಗಳ ವಿರುದ್ಧ.
ಜಾಮೀನು ರಹಿತ ಬಂಧನ: ಕೋಕಾ ಕಾಯ್ದೆಯಡಿ ದೋಷಾರೋಪಣೆ ಎದುರಿಸುವ ಆರೋಪಿಗೆ ನಿರೀಕ್ಷಣಾ ಜಾಮೀನು ಸಿಗುವುದು ಕಷ್ಟಕರ, ಮತ್ತು ಕನಿಷ್ಠ ಒಂದು ವರ್ಷದವರೆಗೆ ಜಾಮೀನು ಸಿಗುವುದಿಲ್ಲ.
ಕಠಿಣ ಶಿಕ್ಷೆಗಳು: ಸಂಘಟಿತ ಅಪರಾಧಗಳಲ್ಲಿ ಭಾಗವಹಿಸಿ, ಸಾವಿಗೆ ಕಾರಣರಾಗುವವರಿಗೆ ಗರಿಷ್ಠ ಗಲ್ಲು ಶಿಕ್ಷೆ ಅಥವಾ ಜೀವಾವಧಿ ಜೈಲು ಶಿಕ್ಷೆಯೊಂದಿಗೆ ದಂಡವನ್ನು ಸಹ ವಿಧಿಸಲಾಗುತ್ತದೆ.
ಆಸ್ತಿ ಮುಟ್ಟುಗೋಲು: ಈ ಕಾಯ್ದೆಯಡಿ ಆರೋಪಿಗಳ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕುವ ಅವಕಾಶವಿದೆ.
ಕಾನೂನು ಜಾರಿ: ಪೊಲೀಸರು ಮತ್ತು ಕಾನೂನು ಜಾರಿ ಸಂಸ್ಥೆಗಳು ಈ ಕಾಯ್ದೆಯನ್ನು ಬಳಸಿಕೊಂಡು ಸಂಘಟಿತ ಅಪರಾಧಿಗಳ ವಿರುದ್ಧ ಬಲವಾದ ಕ್ರಮಗಳನ್ನು ಕೈಗೊಳ್ಳುತ್ತಾರೆ.