ರಾಜ್ಯ ಸರ್ಕಾರ ಈ ಸಾಲಿನ ಬಜೆಟ್ ನಲ್ಲಿ ಕೃಷಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರೈತಪರ ಹಕ್ಕೊತ್ತಾಯವನ್ನು ಸಲ್ಲಿಸಿತು.
ತದನಂತರ ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರನ್ನೂ ಭೇಟಿಯಾಗಿ ಈ ಸಂಬಂಧ ಅವರಿಗೆ ಮನವರಿಕೆ ಮಾಡಿಕೊಟ್ಟರು. ನಬಾರ್ಡ್ ರೈತರ ಸಾಲವನ್ನು ಕಡಿತ ಮಾಡಿದ ಬಗ್ಗೆ ಸಹಕಾರಿ ಸಚಿವರಾದ ಕೆ ಎನ್ ರಾಜಣ್ಣರವರನ್ನು ಭೇಟಿಯಾಗಿ ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಸಂಪನ್ಮೂಲವನ್ನು ಕ್ರೋಡೀಕರಿಸಿ ಹೆಚ್ಚಿನ ಸಾಲವನ್ನು ನೀಡಬೇಕೆಂದು ಒತ್ತಾಯಿಸಿದರು.
ನಿಯೋಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಕಾರ್ಯಾಧ್ಯಕ್ಷ ಜೆ ಎಂ ವೀರಸಂಗಯ್ಯ, ಪ್ರಧಾನ ಕಾರ್ಯದರ್ಶಿ ಎನ್ ಡಿ ವಸಂತ್ ಕುಮಾರ್, ಕಾರ್ಯದರ್ಶಿ ಅರುಣ್ ಕುಮಾರ್ ಕುರುಡಿ, ಗೋಪಾಲ್ ಪಾಪೇಗೌಡ ಇದ್ದರು.
ಹಕ್ಕೊತ್ತಾಯದ ಮುಖ್ಯಾಂಶಗಳು
- ಬಿ.ಜೆ.ಪಿ ಸರ್ಕಾರ ಭೂ-ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದ ನಂತರ ಗುಜರಾತ್ ಮೂಲದ ಬಂಡವಾಳ ಶಾಹಿಗಳು ಲಂಗು-ಲಗಾಮಿಲ್ಲದೆ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಕೊಂಡು ಆ ಭೂಮಿಯನ್ನೇ ಹೆಚ್ಚು ಬೆಲೆಗೆ ಕಂಪನಿಗಳಿಗೆ ಮಾರಾಟ ಮಾಡಿ ಲಾಭಗಳಿಸುತ್ತಿದ್ದಾರೆ ಮತ್ತು ಕೃಷಿಯೇತರ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ. ಈ ಹಾವಳಿಯನ್ನು ತಡೆಗಟ್ಟಲು ಸೂಕ್ತ ಕಾನೂನನ್ನು ಈ ಆಯವ್ಯಯದ ಅಧಿವೇಶನದಲ್ಲಿ ರೂಪಿಸಬೇಕು.
- ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ ಭೂ-ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು. ಎ.ಪಿ.ಎಂ.ಸಿ ಕಾಯ್ದೆಯನ್ನು ರೈತಸ್ನೇಹಿಯಾಗಿ ಮತ್ತಷ್ಟು ಬಲಪಡಿಸಬೇಕು. ಜಾನುವಾರು ಹತ್ಯೆ ನಿಷೇಧ ಸಂರಕ್ಷಣಾ ಕಾಯ್ದೆಯನ್ನು ರೈತರ ಹಿತದೃಷ್ಟಿಯಿಂದ ವಾಪಸ್ ಪಡೆಯಬೇಕು.
- ಕೃಷಿ ಪಂಪ್‌ಸೆಟ್ ವಿದ್ಯುತ್ ಸಂಪರ್ಕ ಉಚಿತವಾಗಿರಬೇಕು. ಅಕ್ರಮ-ಸಕ್ರಮ ಹಾಗೂ ಹೊಸ ವಿದ್ಯುತ್ ಸಂಪರ್ಕಗಳಿಗೆ ರೈತರೇ ಪೂರ್ಣ ವೆಚ್ಚ ಭರಿಸುವ ನಿಯಮ ಜಾರಿಗೆ ಬಂದಿದೆ. ಇದನ್ನು ವಾಪಸ್ ಪಡೆದು ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ಸಂಪರ್ಕ ಕೊಡಬೇಕು.
- ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಕರೆಯ ಮೇರೆಗೆ ಕರ ನಿರಾಕರಣ ಚಳವಳಿಯಲ್ಲಿ ಭಾಗವಹಿಸಿ ಗೃಹ ವಿದ್ಯುತ್ ಬಿಲ್ ಉಳಿಸಿಕೊಂಡಿರುವ ಸಂಪೂರ್ಣ ಬಾಕಿಯನ್ನು ಮನ್ನಾ ಮಾಡಬೇಕು. ತೋಟದ ಮನೆಯಲ್ಲಿ ವಾಸ ಮಾಡುವವರಿಗೆ ನಿರಂತರ ಗೃಹ ಬಳಕೆ ವಿದ್ಯುತನ್ನು ಒದಗಿಸಬೇಕು.
- ನಬಾರ್ಡ್ ಸಾಲ ಮೊತ್ತವನ್ನು ಕಡಿಮೆ ಮಾಡಿರುವುದು ಖಂಡನೀಯ. ಆದರೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಶೂನ್ಯ ಬಡ್ಡಿ ದರದಲ್ಲಿ ನೀಡುವ ಕೃಷಿ ಸಾಲವನ್ನು ಕಡಿಮೆ ಮಾಡದೇ ಮುಂದುವರಿಸಬೇಕು.
- ಮೈಕ್ರೋ ಫೈನಾನ್ಸ್ ಹಾವಳಿ ಮತ್ತು ಕಿರುಕುಳವನ್ನು ತಪ್ಪಿಸಲು ಕಾನೂನು ರೂಪಿಸಲು ಮುಂದಾಗಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಸ್ವಾಗತಿಸುತ್ತಾ, ಇದು ತಾತ್ಕಾಲಿಕ ಪರಿಹಾರವಷ್ಟೆ ಆಗುತ್ತದೆ. ದುಡಿಯುವ ವರ್ಗಕ್ಕೆ ಹೆಚ್ಚು ಹೆಚ್ಚು ಸಾಲ ಸಿಗುವ ವ್ಯವಸ್ಥೆಯನ್ನು ಸರ್ಕಾರದ ಅಧೀನ ಸಂಸ್ಥೆಗಳ ಮೂಲಕವೇ ಮಾಡಿ ದುಡಿಯುವ ವರ್ಗವನ್ನು ರಕ್ಷಿಸಬೇಕು.