ಮೇ 29ರಿಂದ 2025-26ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಆರಂಭವಾದರೂ ಇಲ್ಲಿಯವರೆಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಗಳನ್ನು ವಿತರಿಸದ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ವಿದ್ಯಾರ್ಥಿ ಸಂಘಟನೆ ಎಐಡಿಎಸ್ಓ ಕರ್ನಾಟಕ ರಾಜ್ಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದ್ದು, “ಶಾಸಕರ ಭತ್ಯೆಯನ್ನು ತುರ್ತಾಗಿ ಹೆಚ್ಚಿಸಿಕೊಳ್ಳುವ ಸರ್ಕಾರ, ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಶೂ ನೀಡಲು ಮೀನಮೇಷ ಎಣಿಸಿದೆ” ಎಂದು ಹೇಳಿದೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ಎಐಡಿಎಸ್‌ಒ, “ವಿದ್ಯಾರ್ಥಿಗಳು ಕಳೆದ ವರ್ಷ ನೀಡಲಾಗಿದ್ದ ಹಳೆಯ ಶೂ ಮತ್ತು ಸಾಕ್ಸ್ ಧರಿಸಿ ಶಾಲೆಗೆ ಬರುವಂತಾಗಿದೆ. ಹಳೆಯ ಶೂ ಹರಿದು ಹೋದ ವಿದ್ಯಾರ್ಥಿಗಳು ಚಪ್ಪಲಿ ಧರಿಸಿ ಅಥವಾ ಬರಿಗಾಲಲ್ಲಿ ಶಾಲೆಗೆ ಬರುವ ಪರಿಸ್ಥಿತಿ ಎದುರಾಗಿದೆ. ಈ ವರ್ಷ ಎಲ್ಲೆಡೆ ಅಧಿಕ ಮಳೆಯಾಗುತ್ತಿದ್ದು, ಶೂಗಳಿಲ್ಲದೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪಾದಚಾರಿಗಳನ್ನು ‘ಬೇವರ್ಸಿ’ಗಳಂತೆ ನಡೆಸಿಕೊಳ್ತಿದೆ ಬೆಂಗಳೂರು ನಗರ!
“ಸರ್ಕಾರದಿಂದ ಹಣ ಮಂಜೂರಾಗದಿರುವುದೇ ಇದಕ್ಕೆ ಕಾರಣ ಎಂಬುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸರ್ಕಾರವು ತನ್ನ ಈ ವಿಳಂಬ ಧೋರಣೆಯನ್ನು ಕೈಬಿಟ್ಟು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕೂಡಲೇ ಶೂ, ಸಾಕ್ಸ್ ಖರೀದಿಸಿ ವಿತರಿಸಬೇಕು” ಎಂದು ಎಐಡಿಎಸ್ಓ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.
ಶೂ ಮತ್ತು ಸಾಕ್ಸ್ ವಿತರಣೆಗೆ ಸಂಬಂಧಿಸಿದ ನಿರ್ದಿಷ್ಟ ಆದೇಶಗಳು ಅಥವಾ ಗುತ್ತಿಗೆ ಪ್ರಕ್ರಿಯೆಯ ವಿಳಂಬದಿಂದಾಗಿ ಈ ತೊಂದರೆ ಎದುರಾಗಿದೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ. 2024-25ರ ಶೈಕ್ಷಣಿಕ ವರ್ಷದಲ್ಲಿ, ಶೂ ಮತ್ತು ಸಾಕ್ಸ್ ವಿತರಣೆಯ ಗುಣಮಟ್ಟದ ಕುರಿತು ದೂರುಗಳು ಬಂದಿದ್ದವು, ಇದರಿಂದಾಗಿ ಒಪ್ಪಂದದ ಪರಿಷ್ಕರಣೆ ಅಥವಾ ಹೊಸ ಗುತ್ತಿಗೆ ಪ್ರಕ್ರಿಯೆಯ ವಿಳಂಬವಾಗಿರಬಹುದು ಎನ್ನಲಾಗುತ್ತಿವೆ.