ಬೆಂಗಳೂರು ಮೂಲದ ಹಿರಿಯ ಸಂಗೀತ ಕಲಾವಿದರೊಬ್ಬರು, ‘ಸೌಂಡ್ ಆಫ್ ಮೆಲೋಡಿ’ ಆರ್ಕೆಸ್ಟ್ರಾದಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕೋವಿಡ್ ಕಾಲಘಟ್ಟದಲ್ಲಿ ಕಲೆಗೂ, ಕಸುವಿಗೂ ಕೆಲಸವಿಲ್ಲದಾಗ, ಇವರ ಕೆಲಸಕ್ಕೂ ಬಿಸಿ ತಟ್ಟಿತ್ತು.
ಸುಮಾರು 65 ವರ್ಷದ ಎಂ. ಬಸವರಾಜು ಎಂಬ ಹಿರಿಯ ಕಲಾವಿದರಾದ ಇವರು, ‘ಶ್ರೀ ಪಾತಾಳೇಶ್ವರ ಸಾಂಸ್ಕೃತಿಕ ಕಲಾ ಟ್ರಸ್ಟ್’ ಎಂಬ ಸಂಸ್ಥೆಯೊಂದನ್ನು ಕಟ್ಟಿದರು. ಈಗ ತಮ್ಮ ಕಲೆಯನ್ನೇ ಆಧಾರವಾಗಿಟ್ಟುಕೊಂಡು ಮನೆ ಮನೆಗೆ ತೆರಳಿ ಹಾರ್ಮೋನಿಯಂ ನುಡಿಸುತ್ತಾರೆ. ಸರ್ಕಾರದಿಂದ 5 ಲಕ್ಷದವರೆಗೆ ಪ್ರೋತ್ಸಾಹ ಧನ ಹಾಕಿಸುತ್ತೇನೆ ಎಂದು ಹೇಳಿದ ರಾಮನಗರದ ಚಕ್ಕೆರೆ ಲೋಕೇಶ್ ಎಂಬುವವರ ಮಾತು ನಂಬಿ ಟ್ರಸ್ಟನ್ನೇನೋ ಕಟ್ಟಿದರು. ಆದರೆ, ಹಣ ಹಾಕಿಸುವುದಿರಲಿ, ಇವರ ಫೋನ್ ಕರೆಗೂ ಸಿಗದೇ ನುಣುಚಿಕೊಳ್ಳುತ್ತಿದ್ದಾರೆ ಲೋಕೇಶ್. ಅಲ್ಲದೇ ಭರವಸೆ ಕೊಟ್ಟು ಅವರಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಹಣ ಪಡೆದು ವಂಚಿಸಿದ್ದಾರೆ. ಈಗ ಹಣವೂ ಇಲ್ಲ, ಅಲ್ಲೊಂದು ಇಲ್ಲೊಂದು ಸಿಗುತ್ತಿದ್ದ ಕೆಲಸವೂ ಇಲ್ಲ ಎನ್ನುವಂತಾಗಿದೆ ಬಸವರಾಜು ಅವರ ಪರಿಸ್ಥಿತಿ.
ಅವರ ಪರಿಸ್ಥಿತಿಯನ್ನು ಅವರ ಬಾಯಿಂದಲೇ ಕೇಳುವುದಾದರೆ…
“ಹೆಂಡತಿಗೆ ಹಾರ್ಟ್ ಸರ್ಜರಿಯಾಗಿದೆ. ಅವರ ಆರೋಗ್ಯ ನಿರ್ವಹಣೆಗಾಗಿ ಪ್ರತಿ ತಿಂಗಳು ಹಣ ಕಳಿಸಬೇಕು. ಆದರೆ ಕೈಯಲ್ಲಿ ಕೆಲಸವಿಲ್ಲ. ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದೇನೆ. ಸಾಲ ಮಾಡಿಕೊಳ್ಳುವ ಅಗತ್ಯವೇನಿತ್ತು ಎಂದು ಮಗ ದೂರ ಇಟ್ಟಿದ್ದಾನೆ. ಸಂಕಷ್ಟದ ಸಮಯದಲ್ಲಿ ನನ್ನ ಬಳಿ ಇದ್ದ ಕೀಬೋರ್ಡ್ ಅನ್ನು ಅರ್ಧ ರೇಟಿಗೆ ಮಾರಿಬಿಟ್ಟೆ. ಯಾರ ಬಳಿಯೂ ಕೈಯೊಡ್ಡಿ ಬೇಡುವುದಿಲ್ಲ. ಮನೆ ಮನೆಗೆ ತೆರಳಿ ಹಾರ್ಮೋನಿಯಂ ನುಡಿಸುತ್ತೇನೆ. ನನ್ನ ಕಲೆಯನ್ನು ಮೆಚ್ಚಿ ಸಂಗೀತ ಪ್ರಿಯರು ಕೊಟ್ಟ ಅಷ್ಟೋ ಇಷ್ಟೋ ಹಣದಲ್ಲಿ ಜೀವನ ಸಾಗಿಸುತ್ತಿದ್ದೇನೆ. ಸಣ್ಣ ಪುಟ್ಟ ಕಾರ್ಯಕ್ರಮಗಳಿಗೆ ಕರೆಯುತ್ತಾರೆ. ಅಲ್ಲೆಲ್ಲ ಒಂದಷ್ಟು ಸಂಪಾದನೆಯಾಗುತ್ತೆ.
“ಗಣೇಶ ಉತ್ಸವ, ಆರ್ಕೆಸ್ಟ್ರಾಗಳು, ಜಯಂತಿಗಳಲ್ಲಿ ಕೂಡ ಕೆಲಸ ಮಾಡಿದ್ದೇನೆ. ಈಗ ದಿನಕ್ಕೆ ಸುಮಾರು 300 ರಿಂದ 400 ರೂ ಸಂಪಾದನೆ ಆದರೆ ಅದೇ ಹೆಚ್ಚು. ಅದರಲ್ಲೇ ಹೆಂಡತಿ ಔಷಧಿಗೆ, ಊಟ ಬಟ್ಟೆಗೆ ಸರಿ ಹೋಗುತ್ತದೆ. ಇರಲು ಮನೆಯೂ ಇಲ್ಲ. ದೇವಸ್ತಾನಗಳಲ್ಲಿ ಮಲಗಿ ದಿನ ದೂಡುತ್ತಿದ್ದೇನೆ. ಸಂಪಾದನೆಯ ಮೂರು ಕಾಸು ಜೀವನಕ್ಕೇ ಸರಿ ಹೋಗುತ್ತಿದೆ. ಸಾಲ ತೀರಿಸಲು ಆಗುತ್ತಿಲ್ಲವಲ್ಲ ಎಂಬುದಷ್ಟೇ ನೋವು” ಎನ್ನುತ್ತಾರವರು.
“ನನ್ನ ನಂಬಿ ಕೆಲವರು ಸಾಲದ ರೂಪದಲ್ಲಿ ಹಣ ಕೊಟ್ಟಿದ್ದಾರೆ. ಅದೇ ರೀತಿ ನಾನೂ ಕೂಡ ಅವರ ಹಣ ಹಿಂತಿರುಗಿಸಿ ಸಾಲ ತೀರಿಸಬೇಕೆನ್ನುವುದಷ್ಟೇ ಹಂಬಲ” ಎಂದು ಕಣ್ಣೀರು ಹಾಕುತ್ತಾರೆ ಬಸವರಾಜು.
ಹಾಗಿದ್ದರೂ, ಅವರ ಆತ್ಮಾಭಿಮಾನ ಕಡಿಮೆಯಾಗಿಲ್ಲ. ಯಾರನ್ನೂ ಬೇಡಿ ಕೇಳುವುದಿಲ್ಲ. ಮನೆ ಮನೆಗೆ ಹೋಗಿ ಹಾರ್ಮೋನಿಯಂ ನುಡಿಸುತ್ತಾರೆ. ಕೊಟ್ಟದ್ದನ್ನಷ್ಟೇ ಪಡೆದು ಹಿಂತಿರುಗುತ್ತಾರೆ. ಬಸವರಾಜು ಅವರ ಕಥೆ, ಕೇವಲ ಒಬ್ಬ ಕಲಾವಿದನ ಕಷ್ಟದ ಕತೆಯಲ್ಲ. ಇಂತಹವರ ಆತ್ಮಸ್ಥೈರ್ಯ, ಶ್ರದ್ಧೆ, ಮತ್ತು ಸ್ವಾಭಿಮಾನದ ಹೆಜ್ಜೆಗಳು ಸುಗಮವಾಗಿ ಸಾಗಬೇಕಾದರೆ ಅವರಿಗೆ ನೆರವಿನ ಅಗತ್ಯವಿದೆ.
ಮೊ.ಸಂ: 96113 45629
ಎಂ. ಬಸವರಾಜು
ಹಿರಿಯ ಹಾರ್ಮೋನಿಯಂ ಕಲಾವಿದ