- 22 ತಾಲೂಕುಗಳನ್ನು ಹೆಚ್ಚುವರಿ ಬರ ಪೀಡಿತ ಎಂದು ಘೋಷಿಸಿದ ರಾಜ್ಯ ಸರ್ಕಾರ
- ‘ಹೆಚ್ಚುವರಿ 300 ರಿಂದ 350 ಕೋಟಿ ರೂ. ಬರ ಪರಿಹಾರ ಕೋರಲು ಅವಕಾಶ ಇದೆ’
ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ ಹಾಗೂ ಬೆಳೆ ಸಮೀಕ್ಷೆ ದೃಢೀಕರಣ ವರದಿ ಅನ್ವಯ ಹೆಚ್ಚುವರಿ 22 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವ ಬೆನ್ನಲ್ಲೇ ಈ ಸಂಬಂಧ ಹೆಚ್ಚುವರಿ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮುಂದಿನ ಸೋಮವಾರ ಮತ್ತೊಂದು ಮನವಿ ಪತ್ರ (ಮೆಮೊರಾಂಡಮ್) ಸಲ್ಲಿಸಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಈ ಕುರಿತು ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, “ಮೊದಲ ಹಂತದಲ್ಲಿ ರಾಜ್ಯದ 236 ತಾಲೂಕುಗಳ ಪೈಕಿ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿತ್ತು. ಆದರೆ, ಈ ವರ್ಷ ಇತಿಹಾಸ ಕಾಣದ ತೀವ್ರ ಬರ ಎದುರಾಗಿದ್ದು, ಬಹುತೇಕ ಎಲ್ಲಾ ಜಿಲ್ಲೆಗಳಿಗೂ ಮಳೆ ಕೊರತೆ ಎದುರಾಗಿದೆ. ಹೀಗಾಗಿ ಉಳಿದ ತಾಲೂಕುಗಳನ್ನೂ ಸಹ ‘ಬರ ಪೀಡಿತ’ ಎಂದು ಘೋಷಿಸುವಂತೆ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಬರ ಘೋಷಣೆಯಿಂದ ಹೊರಗುಳಿದ 34 ತಾಲೂಕುಗಳ ಪೈಕಿ 22 ತಾಲೂಕುಗಳಲ್ಲಿ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ ಹಾಗೂ ಬೆಳೆ ಸಮೀಕ್ಷೆ ದೃಢೀಕರಣ (Ground Truthing) ನಡೆಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಲಾಗಿತ್ತು” ಎಂದು ತಿಳಿಸಿದ್ದಾರೆ.
“ಇದೀಗ 22 ತಾಲೂಕುಗಳನ್ನೂ ಬರ ಪೀಡಿತ ಎಂದು ಘೋಷಿಸಲಾಗಿದ್ದು, ಈ ಪೈಕಿ 11 ತಾಲ್ಲೂಕುಗಳಲ್ಲಿ ‘ತೀವ್ರ ಬರ’ ಹಾಗೂ 11 ತಾಲೂಕುಗಳಲ್ಲಿ, ‘ಸಾಧಾರಣ ಬರ’ ಪೀಡಿತ ತಾಲ್ಲೂಕು ಎಂದು ಘೋಷಿಸುವ ಅರ್ಹತೆ ಪಡೆದಿರುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಸೆಪ್ಟೆಂಬರ್ ಅಂತ್ಯದವರೆಗಿನ ಬೆಳೆ ಸಮೀಕ್ಷೆಯನ್ನಷ್ಟೇ ಪರಿಗಣಿಸುವುದಾದರೆ 22 ತಾಲೂಕುಗಳ ಪೈಕಿ 17 ತಾಲ್ಲೂಕುಗಳನ್ನು ‘ತೀವ್ರ ಬರಪೀಡಿತ’ ತಾಲ್ಲೂಕು ಎಂದು ಮತ್ತು ಉಳಿದ 5 ತಾಲೂಕನ್ನು ಸಾಧಾರಣ ಬರಪೀಡಿತ ಎಂದು ಗುರುತಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 236 ತಾಲೂಕುಗಳ ಪೈಕಿ 189 ತೀವ್ರ ಬರಪೀಡಿತ ಹಾಗೂ 27 ಸಾಧಾರಣಾ ಬರಪೀಡಿತ ತಾಲೂಕುಗಳು ಒಳಗೊಂಡಂತೆ ಒಟ್ಟು 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದಂತಾಗಿದೆ” ಎಂದು ವಿವರಿಸಿದ್ದಾರೆ.
ಮನವಿ ಸಲ್ಲಿಸುವ ಹಕ್ಕು ರಾಜ್ಯಕ್ಕಿದೆ
“ರಾಜ್ಯದ ಮನವಿಗೆ ಸ್ಪಂದಿಸಿದ್ದ ಕೇಂದ್ರ ಸರ್ಕಾರ ಒಂದೇ ವಾರದ ಅವಧಿಯಲ್ಲಿ ಬರ ಪರಿಸ್ಥಿತಿಯ ವಾಸ್ತವ ಅಧ್ಯಯನಕ್ಕೆ ತಂಡವನ್ನೂ ಕಳುಹಿಸಿತ್ತು. ರಾಜ್ಯಕ್ಕೆ ಆಗಮಿಸಿದ್ದ ತಂಡ ಮೂರು ಭಾಗಗಳಾಗಿ ರಾಜ್ಯದ ವಿವಿಧ ಬರ ಪೀಡಿತ ಜಿಲ್ಲೆಗಳಿಗೆ ಮೂರು ದಿನಗಳ ಪ್ರವಾಸ ಕೈಗೊಂಡಿತ್ತು. ಬರ ಅಧ್ಯಯನದ ನಂತರ ಸಭೆ ನಡೆಸಿದ್ದ ಕೇಂದ್ರ ತಂಡ ರಾಜ್ಯದ ಮನವಿ ಪತ್ರ (ಮೆಮೊರಾಂಡಮ್) ವಾಸ್ತವದಿಂದಲೇ ಕೂಡಿದೆ ಎಂದು ಅಭಿಪ್ರಾಯ ಪಟ್ಟಿತ್ತು. ಅಲ್ಲದೆ, ಎರಡನೇ ಸುತ್ತಿನಲ್ಲಿ ಮತ್ತಷ್ಟು ತಾಲೂಕುಗಳನ್ನೂ ಸಹ ಬರ ಪೀಡಿತ ಪಟ್ಟಿಗೆ ಸೇರಿಸಿ ಮತ್ತೊಂದು ಮನವಿ ಪತ್ರ ಸಲ್ಲಿಸುವ ಹಕ್ಕು ರಾಜ್ಯಕ್ಕಿದೆ ಎಂದು ತಿಳಿಸಿತ್ತು” ಎಂದು ಸಚಿವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರವೇನೋ ಬದಲಾಯಿತು, ಕೋಮುವಾದಿಗಳ ಆಟಾಟೋಪಗಳಿಗೆ ಅಂಕುಶ ಯಾವಾಗ?
“ಮನವಿ ಪತ್ರ (ಮೆಮೊರಾಂಡಮ್) ಸಿದ್ದಪಡಿಸುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ಸೋಮವಾರ (ಅಕ್ಟೋಬರ್ 16) ಮನವಿ ಪತ್ರ ಸಲ್ಲಿಸಲಾಗುವುದು, ಕೇಂದ್ರ ಸರ್ಕಾರದ ಮಾನದಂಡಗಳ ಅನ್ವಯ ಹೆಚ್ಚುವರಿ 300 ರಿಂದ 350 ಕೋಟಿ ರೂ. ಬರ ಪರಿಹಾರ ಕೋರಲು ಅವಕಾಶ ಇದೆ” ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಮೆಮೊರಾಂಡಮ್ ಜೊತೆಗೆ ಕೇಂದ್ರ ಸಚಿವರ ಭೇಟಿಗೂ ಮನವಿ
ಕೇಂದ್ರ ಗೃಹ ಸಚಿವರು ಹಾಗೂ ಕೃಷಿ ಸಚಿವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯನ್ನು ವಿವರಿಸಿ ಮನವಿ ಸಲ್ಲಿಸಲು ಈ ಹಿಂದೆಯೇ ಅವಕಾಶ ಕೇಳಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವತಃ ಕೇಂದ್ರಕ್ಕೆ ಪತ್ರ ಬರೆದು ಭೇಟಿಗೆ ಅವಕಾಶ ನೀಡುವಂತೆ ಕೋರಿದ್ದರು. ಆದರೆ, ಕೇಂದ್ರ ಸಚಿವರು ಈವರೆಗೆ ಭೇಟಿಗೆ ಅವಕಾಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸೋಮವಾರ ಸಲ್ಲಿಸಲಿರುವ ಎರಡನೇ ಮೆಮೊರಾಂಡಮ್ ನಲ್ಲಿ ಮತ್ತೊಮ್ಮೆ ಕೇಂದ್ರ ಗೃಹ ಮತ್ತು ಕೃಷಿ ಸಚಿವರ ಭೇಟಿಗೆ ಅವಕಾಶ ನೀಡುವಂತೆ ಕೋರಲಾಗುವುದು” ಎಂದು ಹೇಳಿದ್ದಾರೆ.