ಸೈಬರ್ ಕ್ರೈಂಗಳನ್ನು ಹೊರತುಪಡಿಸಿದರೆ ರಾಜ್ಯದಲ್ಲಿ ಕಳೆದ 1 ವರ್ಷದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಮಂಗಳವಾರ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಗಾಂಜಾ, ಅಫೀಮು, ಮಟ್ಕಾ, ದಂಧೆ, ಕಳ್ಳಭಟ್ಟಿ, ಸರಗಳ್ಳತನ, ವಾಹನ ಕಳವು ಹಾಗೂ ಮಾದಕವಸ್ತುಗಳ ಮಾರಾಟದ ಮೇಲೆ ನಿರಂತರವಾಗಿ ನಿಗಾ ವಹಿಸಿ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದರು.
“ರಾತ್ರಿ ಪಾಳಿಯ ಗಸ್ತುಗಳನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು. ಹರಿಹರ ನಗರದಲ್ಲಿ 2023 ರಿಂದ -2024 ರವರೆಗೆ ಈ ಸಂಬಂಧ 123 ಪ್ರಕರಣಗಳು ದಾಖಲಾಗಿವೆ. ಹರಿಹರ ನಗರ ಪೋಲೀಸ್ ಠಾಣೆಯಲ್ಲಿ 51 ಹುದ್ದೆಗಳು ಮಂಜೂರಾಗಿದ್ದು, ಅಷ್ಟೂ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಿವೈಎಸ್ಪಿ ಹುದ್ದೆ ಮಂಜೂರಾತಿ ಬಗ್ಗೆ ಪರಿಶೀಲಿಸಲಾಗುವುದು. ಈ ಸಂಬಂಧ ಪ್ರಸ್ತಾವನೆ ಪಡೆದು ಕ್ರಮ ಕೈಗೊಳ್ಳಲಾಗುವುದು” ಎಂದರು.