ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಸ್ವಾಯತ್ತ ಘಟಕವಾದ ವೈದ್ಯಕೀಯ ಮೌಲ್ಯಮಾಪನ ಮತ್ತು ಶ್ರೇಣೀಕರಣ ಮಂಡಳಿಯ (MARB) ಅಧ್ಯಕ್ಷರಾಗಿ ಕರ್ನಾಟಕದ ಹಿರಿಯ ವೈದ್ಯ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ಮಾಜಿ ಉಪ ಕುಲಪತಿ ಡಾ. ಎಂ.ಕೆ. ರಮೇಶ್ ಅವರನ್ನು ನೇಮಕ ಮಾಡಲಾಗಿದೆ. ಕೇಂದ್ರ ಸರ್ಕಾರದ ನೇಮಕಾತಿ ಸಮಿತಿಯು 2025ರ ಜುಲೈ 11ರಂದು ಈ ನಿರ್ಧಾರ ಕೈಗೊಂಡಿದ್ದು, ಡಾ. ರಮೇಶ್ ಅವರು ನಾಲ್ಕು ವರ್ಷಗಳ ಕಾಲ ಈ ಹೊಣೆಗಾರಿಕೆಯನ್ನು ನಿರ್ವಹಿಸಲಿದ್ದಾರೆ.
ದಾವಣಗೆರೆ ಜಿಲ್ಲೆಯ ಮಾಯಕೊಂಡದವರಾದ ಡಾ. ರಮೇಶ್, ಮೈಸೂರು ವೈದ್ಯಕೀಯ ಕಾಲೇಜಿನಿಂದ ಎಂ.ಬಿ.ಬಿ.ಎಸ್ ಮತ್ತು ಎಂ.ಎಸ್. (ಸರ್ಜರಿ) ಪದವಿಗಳನ್ನು ಪಡೆದಿದ್ದಾರೆ. ಅಲ್ಲದೆ, ಎಡಿನ್‌ಬರ್ಗ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ದಿಂದ ಫೆಲೋಶಿಪ್ (FRCS) ಪಡೆದಿದ್ದಾರೆ. ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದ ಅವರು, ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. RGUHS ನಲ್ಲಿ ರಿಜಿಸ್ಟ್ರಾರ್ (ಮೌಲ್ಯಮಾಪನ), ಹಾಗೂ ಸೆನೆಟ್‌ಗೆ ಎರಡು ಬಾರಿ ಆಯ್ಕೆ, ವಿವಿಯ ಉಪ ಕುಲಪತಿ ಹಾಗೂ ಸ್ನಾತಕೋತ್ತರ ಕ್ಲಿನಿಕಲ್ ಅಧ್ಯಯನ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮ: ಪೊಲೀಸ್ ಇಲಾಖೆಯ ಮಾದರಿ ಹೆಜ್ಜೆ
ರಮೇಶ್ ಅವರು ಕುಲಪತಿಯಾಗಿ, 24 ಸಾವಿರಕ್ಕೂ ಹೆಚ್ಚು ಶಿಕ್ಷಕರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (LMS) ಮೂಲಕ ತರಬೇತಿ ನೀಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. 2020ರಲ್ಲಿ NMCಯ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿ, ರಾಷ್ಟ್ರೀಯ ಮಟ್ಟದ ಶಿಕ್ಷಣ ನೀತಿಗಳನ್ನು ರೂಪಿಸಿದ್ದಾರೆ. ಕ್ಲಿನಿಕಲ್ ಟ್ರಯಲ್‌ಗಳ ನೇತೃತ್ವ ಮತ್ತು ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಲೇಖನ ಪ್ರಕಟಣೆಯಲ್ಲಿಯೂ ಗಣನೀಯ ಕೊಡುಗೆ ನೀಡಿದ್ದಾರೆ.
ಡಾ. ರಮೇಶ್ ಅವರು MARB ಅಧ್ಯಕ್ಷರಾಗಿ ನೇಮಕವಾಗಿರುವುದು ಕರ್ನಾಟಕಕ್ಕೆ ಗೌರವ ತಂದಿದ್ದು, ರಾಷ್ಟ್ರೀಯ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ಕನ್ನಡಿಗರಾಗಿ ಹಾಗೂ ರಾಜ್ಯದ ವೈದ್ಯಕೀಯ ಕ್ಷೇತ್ರವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಡಾ. ರಮೇಶ್ ಅವರಿಗೆ ಕರ್ನಾಟಕ ವೈದ್ಯಕೀಯ ಸಮುದಾಯವು ಹಾರ್ದಿಕ ಅಭಿನಂದನೆ ಸಲ್ಲಿಸಲಿದ್ದು, ಮುಂದಿನ ಕಾರ್ಯಕ್ಷೇತ್ರಕ್ಕೆ ಸಂಪೂರ್ಣ ಬೆಂಬಲವನ್ನು ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
