ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದನಾ ದಾಳಿಗೆ ಸಂಬಂಧ ಕಲ್ಪಿಸಿ ಕನ್ನಡ ಮತ್ತು ಕನ್ನಡಿಗರಿಗೆ ಅವಮಾನ ಮಾಡಿರುವ ಗಾಯಕ ಸೋನು ನಿಗಮ್ ನನ್ನು ಕೂಡಲೇ ಬಂಧಿಸಿ ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಸೋಮವಾರ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
“ಕರ್ನಾಟಕ ರಕ್ಷಣಾ ವೇದಿಕೆ ಸೋನು ನಿಗಮ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದು ಆತ ದೇಶದ ಯಾವ ಭಾಗದಲ್ಲಿ ಇದ್ದರೂ ಪೊಲೀಸರು ಕೂಡಲೇ ಆತನನ್ನು ಬಂಧಿಸಿ ಇಲ್ಲಿಗೆ ಕರೆತರಬೇಕು. ಬೆಂಗಳೂರಿನ ಕಾರ್ಯಕ್ರವನ್ನು ಕಾಶ್ಮೀರದ ಭಯೋತ್ಪಾದನಾ ದಾಳಿಗೆ ಸಂಬಂಧ ಕಲ್ಪಿಸಿ ಮಾತನಾಡುವ ಸೋನು ನಿಗಮ್ ಒಬ್ಬ ಹುಚ್ಚ. ಆತನನ್ನು ಕರ್ನಾಟಕದ ಜೈಲಿನಲ್ಲಿ ಇಟ್ಟು ಕಾನೂನು ಪ್ರಕಾರ ಶಿಕ್ಷೆ ನೀಡಿದರೆ ಆತನಲ್ಲಿ ಅಡಗಿರುವ ಹುಚ್ಚುತನ ಹೊರ ಹೋಗಲಿದೆ” ಎಂದು ಅವರು ಕಿಡಿಕಾರಿದರು.
“ಕನ್ನಡ ಹಾಡುಗಳ ಮೂಲಕ ಕೋಟ್ಯಧೀಶರಾದ ಸೋನು ನಿಗಮ್ ಮೇಲೆ ಅಪಾರವಾದ ಕರ್ನಾಟಕದ ಋಣ ಇದೆ. ಇದರ ಅರಿವು ಅವರಿಗೆ ಇರುತ್ತಿದ್ದರೆ ಅವರು ಕನ್ನಡಿಗರನ್ನು ಅವಮಾನ ಮಾಡುತ್ತಿರಲಿಲ್ಲ. ಕನ್ನಡಿಗರ ಪರ ಮಾತನಾಡಿದವರನ್ನು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಸಂಬಂಧ ಕಲ್ಪಿಸುವ ದುರಹಂಕಾರ ಅವರಲ್ಲಿ ಇದೆ ಎಂದಾದರೆ ಅವರಿಗೆ ಸರಿಯಾದ ಪಾಠ ಕಲಿಸುವ ಅಗತ್ಯ ಇದೆ.
ಸೋನು ನಿಗಮ್ ಇನ್ನು ಮುಂದೆ ಕನ್ನಡದ ಯಾವುದೇ ಚಿತ್ರಗಳಲ್ಲಿ ಹಾಡಲು ಅವಕಾಶ ನೀಡದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಮ್ಮ ಎಲ್ಲಾ ನಿರ್ಮಾಪಕರಿಗೆ, ಸಂಗೀತ ನಿರ್ದೇಶಕರಿಗೆ ಆದೇಶ ನೀಡಬೇಕು. ಒಂದು ವೇಳೆ ಸೋನು ನಿಗಮ್ ಯಾವುದಾದರೂ ಕನ್ನಡ ಸಿನಿಮಾದಲ್ಲಿ ಹಾಡಿದರೆ ಅಂತಹ ಸಿನಿಮಾ ಕರ್ನಾಟಕದಲ್ಲಿ ತೆರೆ ಕಾಣಲು ಕನರ್ನಾಟಕ ರಕ್ಷಣಾ ವೇದಿಕೆ ಅವಕಾಶ ನೀಡುವುದಿಲ್ಲ. ಇನ್ನು ಮುಂದೆ ಆತ ರಾಜ್ಯದಲ್ಲಿ ಯಾವುದಾದರೂ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಆ ಕಾರ್ಯಕ್ರಮ ನಡೆಯಲು ಕರವೇ ಅವಕಾಶ ನೀಡುವುದಿಲ್ಲ” ಎಂದು ಅವರು ಎಚ್ಚರಿಕೆ ನೀಡಿದರು.
ಇದನ್ನೂ ಓದಿ ಗಾಯಕ ಸೋನು ನಿಗಮ್ ಬಂಧನಕ್ಕೆ ಕರವೇ ಒತ್ತಾಯ- ಪೊಲೀಸ್ ಮಹಾನಿರ್ದೇಶಕರಿಗೆ ದೂರು
“ಕರ್ನಾಟಕ ಸರ್ಕಾರದ ಆಧೀನದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕರ್ನಾಟಕದ ಕಲಾವಿದರಿಗೆ ಅವಕಾಶ ನೀಡಬೇಕು ಹೊರತು ಕೋಟ್ಯಂತರ ರೂಪಾಯಿ ನೀಡಿ ಇಂತಹ ಹುಚ್ಚರಿಗೆ ಅವಕಾಶ ನೀಡಿ, ಕನ್ನಡಿಗರಿಗೆ ಅವಮಾನ ಮಾಡಬೇಡಿ ಎಂದು ಸರ್ಕಾರವನ್ನು ಆಗ್ರಹಿಸಿದ ಅವರು, ಕನ್ನಡಿಗರಿಗೆ ಅವಮಾನ ಮಾಡಿದ ಸೋನು ನಿಗಮ್ ಕ್ಷಮೆ ಕೇಳಿದರೆ ಸಾಕಾಗದು. ಆತನಿಗೆ ಕಾನೂನು ಪ್ರಕಾರ ಶಿಕ್ಷೆಯಾದ ಬಳಿಕ ಕ್ಷಮೆ ನೀಡಬೇಕೆ ಬೇಡವೇ ಎಂಬುದನ್ನು ಕನ್ನಡಿಗರು ತೀರ್ಮಾನಿಸಲಿದ್ದಾರೆ” ಎಂದರು.
ಕನ್ನಡದ ನಟ ನಟಿಯರು ಬಾಯಿ ಬಿಡುತ್ತಿಲ್ಲ
“ಕನ್ನಡಿಗರಿಗೆ ಅವಮಾನ ಮಾಡಿ ವಾರ ಕಳೆದರೂ ಸೋನು ನಿಗಮ್ ವಿರುದ್ಧ ಕನ್ನಡ ಸಿನೆಮಾ ನಟ ನಟಿಯರು ಇನ್ನೂ ಬಾಯಿ ತೆರೆದಿಲ್ಲ. ಕನ್ನಡದ ಬಗ್ಗೆ ಸ್ವಾಭಿಮಾನ ಇದ್ದಿದ್ದರೆ ಅವರು ಆತನ ವಿರುದ್ಧ ಮಾತನಾಡುತ್ತಿದ್ದರು. ನಮ್ಮ ನಾಡು ನುಡಿಯ ಬಗ್ಗೆ ಅವರಲ್ಲಿ ಕಳಕಳಿ ಇಲ್ಲದ ಕಾರಣ ಅವರು ಬಾಯಿ ತೆರೆಯುತ್ತಿಲ್ಲ. ಕನ್ನಡದ ನಟ ನಟಿಯರ ಮೌನದಿಂದ ಸೋನು ನಿಗಮ್ ಅಂತವರಿಗೆ ಕನ್ನಡಿಗರನ್ನು ಅವಮಾನ ಮಾಡಲು ಮತ್ತಷ್ಟು ಶಕ್ತಿ ತುಂಬುತ್ತಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.