ಬ್ರಾಹ್ಮಣ್ಯದ ಅಮಲೇರಿ ಸಿಜೆಐ ಮೇಲೆ ದಾಳಿ: ಹೋರಾಟಗಾರರ ಆಕ್ರೋಶ

Date:

Advertisements
“ಈಗ ಶೂ ಎಸೆದಿರುವ ವ್ಯಕ್ತಿ ರಾಕೇಶ್ ಕಿಶೋರ್‌ಗೆ ಏನು ಶಿಕ್ಷೆ ಆಗಬಹುದು? ಹೆಚ್ಚೆಂದರೆ ಆತ ಮುಂದೆ ಗವರ್ನರ್ ಆಗಬಹುದು. ಎಲೆಕ್ಷನ್ ಕಮಿಷನರ್ ಆಗಬಹುದು" ಎಂದು ಪ್ರೊ.ಪುರುಷೋತ್ತಮ ಬಿಳಿಮಲೆ ವ್ಯಂಗ್ಯವಾಡಿದರು.

“ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್.ಗವಾಯಿ ಅವರ ಮೇಲಾದ ದಾಳಿಯು ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಆಗಿರುವ ದಾಳಿಯಾಗಿದೆ” ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ರೈತ, ಕಾರ್ಮಿಕ, ದಲಿತ, ಮಹಿಳಾ, ವಿದ್ಯಾರ್ಥಿ, ಯುವಜನ, ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಸಂಜೆ ನಡೆದ ಪ್ರತಿಭಟನೆಯು ಸಂಘಪರಿವಾರದ ಹುನ್ನಾರಗಳ ವಿರುದ್ಧ ದನಿ ಎತ್ತಿದೆ.

ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರರಾದ ಇಂದೂಧರ ಹೊನ್ನಾಪುರ ಮಾತನಾಡಿ, “ಸನಾತನಿಗಳು ಬ್ರಾಹ್ಮಣ್ಯದ ಅಮಲೇರಿಸಿಕೊಂಡು ಅನಾಗರಿಕರಂತೆ ವರ್ತಿಸುತ್ತಿದ್ದಾರೆ. ಈ ದೇಶ ಯಾವ ಹಂತ ಮುಟ್ಟಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ” ಎಂದು ಮಾರ್ಮಿಕವಾಗಿ ನುಡಿದರು.

Advertisements
14 7
ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರರಾದ ಇಂದೂಧರ ಹೊನ್ನಾಪುರ ಮಾತನಾಡಿದರು.

“ವಕೀಲ ರಾಕೇಶ್ ಕಿಶೋರ್ ಮನುಕುಲವೇ ನಾಚಿಕೆಪಡುವ ಕೆಲಸಕ್ಕೆ ಕೈ ಹಾಕಿದ್ದಾನೆ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಗವಾಯಿಯವರು ಅಂಬೇಡ್ಕರ್ ಅವರ ಅನುಯಾಯಿ. ಸಂವಿಧಾನಕ್ಕೆ ಬದ್ಧವಾಗಿ ಕೆಲಸ ಮಾಡಿದ್ದಾರೆ. ಅಂತಹ ಮನುಷ್ಯನ ಮೇಲೆ ಕಾರಣವಿಲ್ಲದೆ ದಾಳಿ ಮಾಡುವಂತಹದ್ದು ನಾಚಿಕೆಪಡುವಂತಹ ವಿಚಾರ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿರಿ: ಸಿಜೆಐಗೆ ಶೂ ಎಸೆದ ವಕೀಲನನ್ನು ಶ್ಲಾಘಿಸಿದ ಬಿಜೆಪಿ ಮುಖಂಡ ಭಾಸ್ಕರ ರಾವ್; ಎಲ್ಲಡೆ ಆಕ್ರೋಶ

“ಗಾಂಧಿಯನ್ನು ನಾಥೂರಾಮ್ ಗೋಡ್ಸೆ ಕೊಂದ ದಿನದಿಂದಲೇ ಇಂತಹ ದುಷ್ಟತನ ಆರಂಭವಾಗಿದೆ. ಸಿಜೆಐ ಮೇಲಾದ ದಾಳಿಯು ಗೋಡ್ಸೆ ಸಂತತಿಯ ಮುಂದುವರಿದ ಭಾಗವಾಗಿದೆ. ಇದು ಆಕಸ್ಮಿಕ ಘಟನೆಯೇನಲ್ಲ. ಪೂರ್ವಸಿದ್ಧತೆ ಮಾಡಿಕೊಂಡು ಈ ಕೃತ್ಯ ಎಸಗಿದ್ದಾರೆ” ಎಂದು ಹೇಳಿದರು.

ಹಿರಿಯ ದಲಿತ ಹೋರಾಟಗಾರರಾದ ಮಾವಳ್ಳಿ ಶಂಕರ್ ಮಾತನಾಡಿ, “ಆರ್‌ಎಸ್‌ಎಸ್ ಪ್ರಣೀತ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿಗಳಾಗುತ್ತಿವೆ. ಮನುವಾದಿ ಮನಸ್ಸುಗಳು ಆಯಾಕಟ್ಟಿನ ಜಾಗಗಳಲ್ಲಿ ಕುಳಿತುಕೊಂಡಿವೆ. ಇಡೀ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಸಂಚನ್ನು ಬ್ರಾಹ್ಮಣವಾದಿಗಳು ರೂಪಿಸಿದ್ದಾರೆ” ಎಂದು ಎಚ್ಚರಿಸಿದರು.

“ಸಿಜೆಐ ಗವಾಯಿಯವರು ಸಂವಿಧಾನವನ್ನು ಮುನ್ನಡೆಸುತ್ತಿದ್ದಾರೆ. ಸಂವಿಧಾನವೇ ಪ್ರಧಾನ, ಬುಲ್ಡೋಜರ್ ನ್ಯಾಯ ನಡೆಯಲ್ಲ ಎಂದಿದ್ದಾರೆ. ಇನ್ನೊಂದೆಡೆ ಗವಾಯಿಯವರ ತಾಯಿ, ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಹೋಗಲ್ಲ ಎಂದು ತಿಳಿಸಿದರು. ಇದೆಲ್ಲವೂ ಸನಾತನಿಗಳನ್ನು ಕೆರಳಿಸಿದೆ” ಎಂದರು.

13 5

“ಇದು ಯಾವುದೋ ಒಂದು ಘಟನೆ ಅಂತ ಸುಮ್ಮನೆ ಕುಳಿತರೆ ನಾಳೆ ನಮ್ಮ ಮನೆಗೂ ಬರುತ್ತಾರೆ. ಭಾರತವು ನಾಝಿಗಳ ಜರ್ಮನಿಯಾಗುತ್ತದೆ. ಇಸ್ರೇಲ್‌ನವರು ಗಾಝಾ ಮೇಲೆ ಮಾಡುತ್ತಿರುವ ದಾಳಿಯನ್ನು ಭಾರತೀಯರ ಮನೆಮನೆಗಳಲ್ಲಿಯೂ ನೋಡಬೇಕಾಗುತ್ತದೆ. ಹೀಗಾಗಿ ಸಂಘಪರಿವಾರದ ಸಂಚನ್ನು ನಾವು ಸೋಲಿಸಬೇಕು. ಸಂವಿಧಾನ ವಿರೋಧಿ ಸಂಘಪರಿವಾರದ ಆಶಯಗಳನ್ನು ಸಂಪೂರ್ಣವಾಗಿ ಮೂಲೋತ್ಪಾಟನೆ ಮಾಡಬೇಕು” ಎಂದು ಕರೆ ನೀಡಿದರು.

ಚಿಂತಕ ಬಿ.ಶ್ರೀಪಾದ ಭಟ್ ಮಾತನಾಡಿ, “ಸಿಜೆಐ ಮೇಲೆ ನಡೆದ ದಾಳಿಯ ಹಿಂದೆ ದೊಡ್ಡ ಪಿತೂರಿ ಇದೆ. ಅವರೆಲ್ಲ ನಮ್ಮನ್ನು ಬೀದಿ ಕಾಳಗಕ್ಕೆ ಕರೆಯುತ್ತಿದ್ದಾರೆ. ಇದು ಸಂವಿಧಾನ ಮತ್ತು ಅಂಬೇಡ್ಕರ್ ಚಿಂತನೆಯ ಮೇಲಾದ ದಾಳಿ. ದಲಿತರು ಜೀನ್ಸ್ ಹಾಕಬಾರದು, ಬುಲೆಟ್ ಓಡಿಸಬಾರದು, ಸೋಫಾಸೆಟ್, ಟಿವಿ ಹೊಂದಿರಬಾರದು ಎನ್ನುವಂತಹ ಮನಸ್ಥಿತಿಗಳು ನಡೆಸಿರುವ ದಾಳಿ. ಸನಾತನ ಧರ್ಮದ ಟೀಕೆ ಎಂಬುದು ಇಲ್ಲಿ ನೆಪ ಮಾತ್ರ” ಎಂದು ವಿಶ್ಲೇಷಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆ ಮಾತನಾಡಿ, “ಇದು ಸಂವಿಧಾನದ ಮೇಲೆ ಮಾಡಿದ ಆಕ್ರಮಣ. ಸನಾತನಿಗಳು ಪ್ರತಿಪಾದಿಸುವ ಸ್ಮೃತಿ, ಪುರಾಣ, ಕಾವ್ಯಗಳು ಅದ್ಭುತವಾದ ರಚನೆಯಾದರೂ ಸಮಾನತೆಯನ್ನು ಅವುಗಳು ಮಾತನಾಡುತ್ತಿಲ್ಲ. ಅಸಮಾನತೆಯನ್ನು ಪ್ರತಿಪಾದಿಸುವ ಸನಾತನ ಧರ್ಮಕ್ಕೆ ಆಪತ್ತು ಬಂದಿದೆ ಎಂದು ಇವರಿಗೆ ಏಕೆ ಅನಿಸುತ್ತದೆ? ಯಾಕೆಂದರೆ ಎಲ್ಲರನ್ನೂ ಸಮಾನವಾಗಿ ಕಾಣುವ, ಡಾ.ಅಂಬೇಡ್ಕರ್ ಅವರು ಬರೆದ ಸಂವಿಧಾನ ಅವರ ಎದುರಿಗೆ ಇದೆ” ಎಂದು ಕುಟುಕಿದರು.

“ಈಗ ಶೂ ಎಸೆದಿರುವ ವ್ಯಕ್ತಿ ರಾಕೇಶ್ ಕಿಶೋರ್‌ಗೆ ಏನು ಶಿಕ್ಷೆ ಆಗಬಹುದು? ಹೆಚ್ಚೆಂದರೆ ಆತ ಮುಂದೆ ಗವರ್ನರ್ ಆಗಬಹುದು. ಎಲೆಕ್ಷನ್ ಕಮಿಷನರ್ ಆಗಬಹುದು. ನಮ್ಮ ದೇಶದಲ್ಲಿ ಅದೇ ಆತನಿಗಿರುವ ಪನಿಷ್‌ಮೆಂಟ್” ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿರಿ: ಸಿಜೆಐ ಮೇಲೆ ಶೂ ಎಸೆದ ವಕೀಲನಿಗೆ ಮೆಚ್ಚುಗೆ: ವ್ಯಾಪಕ ಟೀಕೆ ಬೆನ್ನಲ್ಲೇ ಬಿಜೆಪಿ ಭಾಸ್ಕರ್ ರಾವ್ ಕ್ಷಮೆಯಾಚನೆ

ಹೋರಾಟಗಾರರಾದ ಸಿದ್ದನಗೌಡ ಪಾಟೀಲ ಮಾತನಾಡಿ, “ಬಿ.ಆರ್.ಗವಾಯಿಯವರು ಆಡುತ್ತಿರುವ ಮಾತುಗಳನ್ನು ಸಹಿಸಿಕೊಳ್ಳೋಕೆ ಮನುವಾದಿಗಳಿಗೆ ಆಗುತ್ತಿಲ್ಲ. ಮನುವಾದಿಗಳು ಮೊದಲಿನಿಂದಲೂ ಈ ದೇಶದ ಸಂವಿಧಾನವನ್ನು ಒಪ್ಪಿಲ್ಲ. ಅಂಬೇಡ್ಕರ್ ಅವರು ಸಂವಿಧಾನವನ್ನೇ ಬರೆದಿಲ್ಲ ಎನ್ನುವಂತಹ ಅಪಪ್ರಚಾರ ಮಾಡುತ್ತಿದ್ದಾರೆ. ಸನಾತನಿಗಳಿಗೂ ಮತ್ತು ಜಾತ್ಯತೀತರಿಗೂ ಸಂಘರ್ಷ ಏರ್ಪಡಿಸುವ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು.

ಹಿರಿಯ ಸಾಹಿತಿ ಜಿ.ಎಸ್.ಸಿದ್ದರಾಮಯ್ಯ, ಹೋರಾಟಗಾರರಾದ ಕೆ.ಎಸ್.ವಿಮಲಾ, ಗೌರಿ, ಮಲ್ಲಿಗೆ ಸಿರಿಮನೆ, ಅನಂತ್ ನಾಯ್ಕ್, ಜಿ.ಎನ್.ನಾಗರಾಜ್, ಟಿ.ಯಶವಂತ್, ಶಿವಸುಂದರ್, ಹನುಮೇಗೌಡ ಸೇರಿದಂತೆ ಹತ್ತಾರು ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ನ್ಯಾ.ಗವಾಯಿ ಮೇಲೆ ಶೂ ಎಸೆದವನ ಬಂಧಿಸಿ: ದಸಂಸ ಮುಖಂಡ ಮಂಜುನಾಥ್ ಕುಂದುವಾಡ

"ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ...

ಧರ್ಮಸ್ಥಳ ಪ್ರಕರಣ | ಅಕ್ಟೋಬರ್ 9ರಂದು ರಾಜ್ಯದ 60 ಕಡೆಗಳಲ್ಲಿ ಪ್ರತಿಭಟನೆ

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ನೂರಾರು ಜನರ ನಾಪತ್ತೆ ಮತ್ತು ಅಸಹಜನ ಸಾವು...

ಬಸವ ಸಂಸ್ಕೃತಿ ಅಭಿಯಾನ ಸೃಷ್ಟಿಸಿದ ತಲ್ಲಣ

ಬಸವ ಸಂಸ್ಕೃತಿ ಅಭಿಯಾನ ನಿರೀಕ್ಷೆಗೆ ಮೀರಿ ಯಶ ಕಂಡಿದೆ. ಬೆಂಗಳೂರಿನ ಸಮಾರೋಪ...

Download Eedina App Android / iOS

X